ಸಚಿವರ ರಾಜೀನಾಮೆ ಕೇಳುವ ನೈತಿಕತೆ ಸಿಎಂ ಕಳೆದುಕೊಂಡಿದ್ದಾರೆ

KannadaprabhaNewsNetwork |  
Published : May 31, 2024, 02:16 AM IST
111 | Kannada Prabha

ಸಾರಾಂಶ

ಎಂಡಿ ಹೇಳುತ್ತಾರೆ ನನ್ನ ಸಹಿ ನಕಲು ಆಗಿದೆ ಅಂತಾ. ಇದರಲ್ಲಿ ಮೇಲಿನವರ ಶಾಮೀಲಾಗದೇ ಹಗರಣ ನಡೆಯಲು ಸಾಧ್ಯವಿಲ್ಲ

ಗದಗ: ರಾಜ್ಯ ಸರ್ಕಾರದ ಕ್ಯಾಬಿನೆಟ್‌ ಭ್ರಷ್ಟಾಚಾರದಲ್ಲಿ ಮುಳಗಿರುವುದರಿಂದ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಸಿಎಂ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಅವರು ಗುರುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ಪ್ರೋತ್ಸಾಹಿಸುವ, ಭ್ರಷ್ಟಾರದಲ್ಲಿ ಮುಳುಗಿರುವ ಸರ್ಕಾರ ರಾಜ್ಯದಲ್ಲಿದೆ. ಎಸ್ಸಿ,ಎಸ್ಟಿ‌ ಉದ್ಧಾರ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ, ಅವರ ಮೀಸಲಾತಿ ಹೆಚ್ಚಳದಲ್ಲೂ ಯಾವುದೇ ದಿಟ್ಟ ಕ್ರಮ ತೆಗೆದುಕೊಂಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಆ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಎಸ್ಟಿಪಿ, ಟಿಎಸ್ಪಿ ಅಡಿ ಪರಿಶಿಷ್ಟರಿಗೆ ಇಟ್ಟ ಹಣವನ್ನು ಗ್ಯಾರಂಟಿಗೆ ಡೈವರ್ಟ್ ಮಾಡಿದ್ದಾರೆ. ಕಳೆದ ವರ್ಷ ₹ 11 ಸಾವಿರ ಕೋಟಿ, ಈಗ ₹13 ಸಾವಿರ ಕೋಟಿ ಡೈವರ್ಟ್ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮಕ್ಕೆ ಕೊಟ್ಟ ಹಣ ಎಸ್ಟಿ ಜನಾಂಗಕ್ಕೆ ಉಪಯೋಗವಾಗಬೇಕಿತ್ತು. ಆ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಮೇಲಿನವರ ಆಶೀರ್ವಾದ: ಅದು ಹೇಗೆ ಬೇನಾಮಿ ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ? 14 ಖಾತೆಗಳ ಮೂಲಕ ಬೇರೆ ಬೇರೆ ಕಡೆ ಹಣ ಹೋಗುತ್ತದೆ. ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಹಕಾರಿ ಸಂಘಕ್ಕೆ ಹೋಗುತ್ತೆ ಎಂದರೆ ಏನರ್ಥ? ಮೌಖಿಕ ಆದೇಶ ಕೊಟ್ಟಿಲ್ಲ ಅಂತಾ ಮಂತ್ರಿಗಳು ಹೇಳುತ್ತಾರೆ. ಎಂಡಿ ಹೇಳುತ್ತಾರೆ ನನ್ನ ಸಹಿ ನಕಲು ಆಗಿದೆ ಅಂತಾ. ಇದರಲ್ಲಿ ಮೇಲಿನವರ ಶಾಮೀಲಾಗದೇ ಹಗರಣ ನಡೆಯಲು ಸಾಧ್ಯವಿಲ್ಲ. ₹94 ಕೋಟಿ ಮೇಲಿನವರ ಆಶೀರ್ವಾದ ಇಲ್ಲದೇ ದೋಚಲು ಸಾಧ್ಯವಿಲ್ಲ ಎಂದರು.

ಇಲಾಖೆ ಮಂತ್ರಿಗಳ ಮೌಖಿಕ ಸೂಚನೆಯ ಬಗ್ಗೆ ಉಲ್ಲೇಖಿಸಲಾಗಿದೆ. ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ನಮ್ಮ ಸರ್ಕಾರದ ಸಂದರ್ಭದಲ್ಲಿ ಈಶ್ವರಪ್ಪ ವಿಷಯ ಬಂದಾಗ, ಡಿಕೆಶಿ, ಸಿದ್ದರಾಮಯ್ಯ ಕೂಗಿದ್ದೇ ಕೂಗಿದ್ದು. ಈಗ ನಿಮ್ಮ ನೈತಿಕತೆ ಎಲ್ಲಿ ಹೋಗಿದೆ? ಸಿಐಡಿಗೆ ತನಿಖೆಗೆ ಕೊಟ್ಟಿದ್ದಾರೆ. ಅವರು ಹಾಲಿ ಸಚಿವರ ವಿರುದ್ಧ ತನಿಖೆ ಮಾಡಲು‌ ಸಾಧ್ಯವೇ? ಮುಕ್ತ ತನಿಖೆ ನಡೆಯಲ್ಲ, ಹಣ ವಾಪಸ್ ಬರಲ್ಲ, ಅದಕ್ಕಾಗಿ ಈ ಪ್ರಕರಣದ ತನಿಖೆ ಸಿಬಿಐಗೆ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ₹10 ಕೋಟಿಗಿಂತ ಹೆಚ್ಚು ಹಣ ಅವ್ಯವಹಾರವಾಗಿದ್ದರೆ ಸಿಬಿಐಗೆ ಕೊಡಬೇಕು ಎಂದಿದೆ. ರಾಜ್ಯ ಅಷ್ಟೇ ಅಲ್ಲ, ಬ್ಯಾಂಕ್ ಕೂಡಾ ಭಾಗಿಯಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯದವರು ಭಾಗಿದಾರರಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. 14 ಅಕೌಂಟ್ ಹಿಡಿದು ವಿಚಾರಣೆ ನಡೆಸಿದರೆ ಎಲ್ಲ ಗೊತ್ತಾಗುತ್ತದೆ ಎಂದರು.

ಚುನಾವಣಾ ಫಂಡಿಂಗ್‌: ನೇರವಾಗಿ ಈ ಹಣ ಲೋಕಸಭಾ ಚುನಾವಣಾ ಫಂಡಿಂಗ್‌ಗಾಗಿ ಹೋಗಿದೆ ಎಂದು ಆರೋಪಿಸಿದ ಅವರು, ಮುಕ್ತವಾದ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ಕೊಡಬೇಕು. ಮಂತ್ರಿಗಳ ರಾಜೀನಾಮೆ ಪಡೆಯಬೇಕು. ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ ಎನ್ನುವ ಗೃಹ ಸಚಿವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಕೇಸ್ ಗಿಂತನೂ ಇದು ಗಂಭೀರವಾದ ಕೇಸ್, ಯಾವ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆಗಿದೆ ಆ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆ ಘಟನೆ‌ ನಡೆದಿಲ್ಲವಾಗಿದ್ದರೆ ಕೇಸ್ ಹೊರಗಡೆ ಬರುತ್ತಿರಲಿಲ್ಲ. ಯಾವ ದುಡ್ಡು ಎಲ್ಲಿ ಹೋಗಿದೆ ಎನ್ನುವುದನ್ನು ಕ್ಲೀಯರ್ ಆಗಿ ಡೆತ್ ನೋಟನಲ್ಲಿ ಬರೆದಿದ್ದಾರೆ. ಡೆತ್ ನೋಟ್ ಬಹಳ ಗಂಭೀರ ವಿಚಾರ, ಈಶ್ವರಪ್ಪ ವಿಚಾರದಲ್ಲಿ ಡೆತ್ ನೋಟ್ ಇರಲಿಲ್ಲ ಎನ್ನುವುದನ್ನು ಗಮನಿಸಬೇಕು. ಆದರೂ ಕೂಡಾ ಈಶ್ವರಪ್ಪ ನೈತಿಕ ಹೊಣೆ ಹೊತ್ತು ಅಂದು ರಾಜೀನಾಮೆ ನೀಡಿದ್ದರು ಎಂದರು.

ಮಹಾತ್ಮ ಗಾಂಧಿ ವಿಷಯವಾಗಿ ಮೋದಿ ಹೇಳಿಕೆ ವಿಚಾರ ಕುರಿತು ಮಾತನಾಡಿ, ಮೋದಿ ಅವರು ಯಾವ ಕಾಂಟೆಸ್ಟ್ ನಲ್ಲಿ ಹೇಳಿದ್ದಾರೆ ಅರ್ಥ ಮಾಡಿಕೊಳ್ಳಬೇಕು. ಮೋದಿ ಗುಜರಾತ್ ನವರು. ಅವರಿಗೆ ಗೊತ್ತಿಲ್ಲ ಅಂತಲ್ಲ, ಅವರು ಹೇಳುವ ತಾತ್ಪರ್ಯವಿಷ್ಟೇ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಗಾಂಧಿ ಅವರನ್ನು ಪರದೆ ಹಿಂದೆ ಇಟ್ಟಿದ್ದರು. ಈಗ ಗಾಂಧಿ ಕುಟುಂಬ ಮುಂದೆ ಬಂದಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಎಲ್ಲೇ ಹೋದರೂ ನೆಹರು ಹೆಸರು ಮಾತ್ರ ಬರುತ್ತಿತ್ತು. ಮಹಾತ್ಮ ಗಾಂಧಿ ಹಿಂದೆ ಸರಿದರು ಎನ್ನುವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ