
ಕನ್ನಡಪ್ರಭ ವಾರ್ತೆ ಮೈಸೂರು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಮೈಸೂರಿನಲ್ಲಿ ಒಟ್ಟು 234 ಪಾರಂಪರಿಕ ಕಟ್ಟಡಗಳಿದ್ದು, ಈ ಪೈಕಿ 129 ಅಧಿಕೃತ ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಸ್ಕೃತ ಪಾಠಶಾಲೆ, ಪ್ರಾಚ್ಯವಸ್ತು ಸಂಗ್ರಹಾಲಯಗಳ ಕೇಂದ್ರ ಸೇರಿದಂತೆ ಅನೇಕ ಕಟ್ಟಡಗಳು ದುಸ್ಥಿತಿಗೆ ತಲುಪಿವೆ ಎಂದು ದೂರಿದರು.
ಬಿಎಂಶ್ರೀ, ಕುವೆಂಪು, ಡಾ. ದೇಜಗೌ, ಎಸ್.ಎಂ.ಕೃಷ್ಣ, ರಾಧಾಕೃಷ್ಣನ್, ಆರ್.ಕೆ. ನಾರಾಯಣ ಸೇರಿದಂತೆ ಅನೇಕ ಮಹನೀಯರು ಓದಿದ ತಿರುಗಾಡಿದ ಮಹಾರಾಜ ಕಾಲೇಜು ಮತ್ತು ಹಾಸ್ಟೆಲ್ ತೀರಾ ದುಸ್ಥಿತಿಯಲ್ಲಿದೆ. ಅಂತೆಯೇ ಯುವರಾಜ ಕಾಲೇಜಿನ ಗ್ರಂಥಾಲಯ ಕಟ್ಟಡದ ಭಾಗವು ಅದೋಗತಿಗೆ ತಲುಪಿದೆ. ಮಹಾರಾಜ ಕಾಲೇಜಿಗೆ 170 ವರ್ಷವಾದರೆ, ಯುವರಾಜ ಕಾಲೇಜು ಶತಮಾನೋತ್ಸವ ದಾಟಿದೆ. ಇಂತಹ ಕಟ್ಟಡಗಳನ್ನು ಸಂರಕ್ಷಿಸಬೇಕಿರುವುದು ನಮ್ಮ ಕರ್ತವ್ಯ ಎಂದರು.ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಯೋಗನಗರಿ ಎಂದು ಹೆಸರುಗಳಿಸಲು ಕಾರಣರಾದ ಕೃಷ್ಣಮಾಚಾರ್ಯರು, ಬಿವಿಕೆ ಅಯ್ಯಂಗಾರ್‌ಮುಂತಾದವರು ಇಲ್ಲಿ ಯೋಗ ತರಗತಿ ಆರಂಭಿಸಿದ್ದರು. ಅಂತಹ ಕಟ್ಟಡಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಯುವರಾಜ ಕಾಲೇಜು ಹಿಂಭಾಗದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸುಮಾರು 46 ಸಾವಿರ ತಾಳೆಗರಿಗಳು ಇದೆ. ಕೌಟಿಲ್ಯನ ಅರ್ಥಶಾಸ್ತ್ರದ ತಾಳೆಗರಿಗಳೂ ಇವೆ. ಇಂತಹ ಕಟ್ಟಡ ನಮ್ಮ ಪಾರಂಪರಿಕತೆಯ ಪ್ರತೀಕದಂತಿದೆ ಎಂದರು.
ಲಲಿತಮಹಲ್ ಕಟ್ಟಡದಲ್ಲಿಯೂ ಗಿಡಗಳು ಬೆಳೆದಿದೆ. ಅಗ್ನಿಶಾಮಕ ಠಾಣೆ ಕುಸಿದು ಎಷ್ಟೋ ವರ್ಷವಾಯಿತು. ಇನ್ನು ನಗರದ ಮಹಾರಾಣಿ ಕಾಲೇಜು, ಹಳೇ ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಬಸ್‌ನಿಲ್ದಾಣದ ಎದುರು, ಸರ್ಕಾರಿ ಅತಿಥಿಗೃಹದ ಎದುರು, ಮಹಾರಾಣಿ ಕಾಲೇಜು ಸಮೀಪದ ಕಮಾನ್‌ಗೇಟು, ವೀರನಗೆರೆಯ ಕಾವಲು ಕಂಬಗಳು ಗಿಡಗಳಿಂದ ಆವೃತ್ತವಾಗಿದೆ ಎಂದರು.
ನಮ್ಮ ಈ ಮನವಿಗೆ ಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಸಂಸದರು, ಶಾಸಕರು ಮತ್ತು ನಗರ ಪಾಲಿಕೆ ಎಲ್ಲಾ ಮಾಜಿ ಸದಸ್ಯರೊಡನೆ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿ ಗಮನ ಸೆಳೆಯುವುದಾಗಿ ಅವರು ಹೇಳಿದರು.