ನಗರಸಭೆ ತೆರಿಗೆ ದಾಳಿಗೆ ವ್ಯಾಪಾರಿ ವಲಯ ಕೆಂಡ

KannadaprabhaNewsNetwork |  
Published : Aug 24, 2024, 01:17 AM IST
23ಕೆಪಿಆರ್‌ಸಿಆರ್ 04 | Kannada Prabha

ಸಾರಾಂಶ

ರಾಯಚೂರು ನಗರಸಭೆ ಅಧಿಕಾರಿಗಳು ತೆರಿಗೆ ಪಾವತಿಸದ, ಪರವಾನಿಗೆ ನವೀಕರಿಸಿದ ಮಳಿಗೆಗಳಿಗೆ ಬೀಗ ಹಾಕಿ ಸೀಲ್‌ ಜಡೆದಿರುವುದು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಮೂಲಭೂತ ಸವಲತ್ತು ಕೇಳಬೇಡಿ, ತೆರಿಗೆ ತಪ್ಪದೇ ಪಾವತಿಸಿ, ಪರವಾನಗಿ ಮರೆಯದೆ ನವೀಕರಿಸಿ ಎನ್ನುವ ನಗರಸಭೆ ಧೋರಣೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಇಲ್ಲಿನ ನಗರಸಭೆ ಅಧಿಕಾರಿಗಳು ಅಂಗಡಿ-ಮುಂಗಟ್ಟು, ಹೋಟೆಲ್‌, ಬಾರ್‌ ಹಾಗೂ ರೆಸ್ಟೋರೆಂಟ್‌ ಸೇರಿ ಇತರೆ ವಾಣಿಜ್ಯ ಮಳಿಗೆಗಳ ಮೇಲೆ ಏಕಾಏಕಿ ದಾಳಿ ನಡೆಸಿ, ತೆರಿಗೆ ಪಾವತಿಸದ ಹಾಗೂ ಪರವಾನಗಿ ಪಡೆಯದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ನಗರಸಭೆ ಈ ನಡೆಗೆ ಇಡೀ ವ್ಯಾಪರಿ ವಲಯ ಕೆಂಡಾಮಂಡಲವಾಗಿದೆ.

ನಗರದ ನಿವಾಸಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಅಗತ್ಯ ಸ್ವಚ್ಛತೆ, ಶುದ್ಧ ಕುಡಿವ ನೀರು, ಬೀದಿ ದೀಪ, ರಸ್ತೆ ಹಾಗೂ ಮತ್ತಿತರ ಅಗತ್ಯ ಸವಲತ್ತು ನೀಡದೇ ಬರೀ ತೆರಿಗೆ ಪಾವತಿಗೆ ಮುಗಿಬಿದ್ದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ನಗರಸಭೆ ಅಧಿಕಾರಿಗಳು ಬುಧವಾರ ನಗರದ ವಿವಿಧ ಪ್ರದೇಶಗಳಲ್ಲಿನ ವಾಣಿಜ್ಯ ಮಳಿಗೆ, ಅಂಗಡಿ ಮೇಲೆ ದಾಳಿ ಮಾಡಿ ತೆರಿಗೆ ಕಟ್ಟದ, ವ್ಯಾಪಾರದ ಪರವಾನಗಿ ನವೀಕರಿಸದ, ಆಸ್ತಿ ಹಾಗೂ ನೀರಿನ ಕರ ಕಟ್ಟದವರ ಮೇಲೆ ದಾಳಿ ಮಾಡಿ, ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಬೀಗ ಜಡಿದಿದ್ದಾರೆ. ಅಷ್ಟೇ ಅಲ್ಲದೇ ನಳದ ತೆರಿಗೆ ಪಾವತಿಸದವರ ಸಂಪರ್ಕವನ್ನು ಕೂಡ ಕಡಿತ ಮಾಡಿದ್ದಾರೆ. ಮುನ್ಸೂಚನೆ ನೀಡದೇ ಏಕಾಏಕಿ ನಡೆಸಿರುವ ನಗರ ಸಭೆಯ ಕಾರ್ಯಾಚರಣೆಗೆ ಇಡೀ ವಾಣಿಜ್ಯೋದ್ಯಮ ಸಂಘ, ವಿವಿಧ ವ್ಯಾಪಾರ-ವಹಿವಾಟಿನ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ನಗರಸಭೆಯು 2018 ರಿಂದ ಶುಲ್ಕ ಸಂಗ್ರಹಿಸುವ ಅಧಿಕಾರ ಹೊಂದಿದೆ. ಕೊರೋನಾ ಸಮಯದಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ ಮತ್ತು ಯಾವುದೇ ವ್ಯಾಪಾರ ಚಟುವಟಿಕೆಯನ್ನು ಮಾಡಲಾಗಿಲ್ಲ. ಆ ಅವಧಿಗೆ ತೆರಿಗೆ ಪಾವತಿಸುವುದು ಕಷ್ಟವಾಗಿದೆ. ಒಂದು ಸಮಿತಿಯನ್ನು ರಚಿಸಲು ಮತ್ತು ಈ ಎಲ್ಲ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಬೇಕು, ಅಗತ್ಯವಿದ್ದರೆ ಕಾನೂನು ತಜ್ಞರನ್ನು ನೇಮಿಸಿಕೊಳ್ಳಬೇಕು ಎನ್ನುವ ಬಗ್ಗೆ ವ್ಯಾಪಾರ ಸಂಘಟನೆಗಳು ನಿರ್ಧಾರ ಮಾಡಿವೆ.

ಸಿಎಂಸಿ ವಿರುದ್ಧ ಅಸಮಧಾನ: ನಗರಸಭೆ ನಡೆಗೆ ವ್ಯಕ್ತವಾಗಿರುವ ಆಕ್ಷೇಪ ಹಿನ್ನೆಲೆಯಲ್ಲಿ ಜಿಲ್ಲೆ ಎಲ್ಲಾ ವ್ಯಾಪಾರಿ ಸಂಘ ಸಂಸ್ಥೆಗಳು, ಆರ್‌ಡಿಸಿಸಿಐ ಸದಸ್ಯರು ಸಭೆ ನಡೆಸಿ ಹಲವಾರು ವಿಚಾರಗಳನ್ನು ಚರ್ಚಿಸಿದ್ದಾರೆ. ಅಂಗಡಿಗಳನ್ನು ಸೀಲ್ ಮಾಡುವ ಮುನ್ನ ವ್ಯಾಪಾರಿಗಳಿಗೆ ನೋಟಿಸ್ ನೀಡಿಲ್ಲ. ಇದರ ವಿರುದ್ಧ ರಾಯಚೂರು ಬಂದ್ ಮಾಡಿ ಪ್ರತಿಭಟಿಸಬೇಕು ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.

ಸಿಎಂಸಿಯಿಂದ ಅಂಗಡಿಗಳನ್ನು ಸೀಲಿಂಗ್ ಮಾಡುವುದು ಅನಪೇಕ್ಷಿತ ಮತ್ತು ಉದ್ಯಮಿಗಳ ಖ್ಯಾತಿಗೆ ಧಕ್ಕೆ ತರುವ ಅಸಭ್ಯ ಕಾರ್ಯವಾಗಿದೆ ಎಂದು ಅಸಮಧಾನಗಳು ವ್ಯಕ್ತವಾಗಿವೆ. ನೋಂದಾಯಿತ ಸಂಸ್ಥೆಗಳು, ವ್ಯಾಪಾರ, ಅಂಗಡಿಗಳು, ಸ್ಥಾಪನೆಯು ಈ ಟ್ರೇಡ್ ಲೈಸೆನ್ಸ್ ಪೂರ್ವ ವೀಕ್ಷಣೆಯ ಅಡಿಯಲ್ಲಿ ಬರುವುದಿಲ್ಲ, ಮುನ್ಸಿಪಾಲ್ ಕಾಯ್ದೆ ಪ್ರಕಾರ ಶುಲ್ಕ 500 ರು. ಮಿರಬಾರದು. ಆದರೆ ಈಗಿನ ಶುಲ್ಕವು ಅತಿ ಹೆಚ್ಚಾಗಿದೆ. ಸಿಎಂಸಿ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು