ಕಾಂಗ್ರೆಸ್‌ಗೆ ತಿರುಗುಬಾಣದ ಕಮಿಷನ್ ಅಸ್ತ್ರ

KannadaprabhaNewsNetwork |  
Published : Oct 18, 2023, 01:00 AM IST
ಕಾರವಾರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೂಪಾಲಿ ನಾಯ್ಕ, ನಾಗರಾಜ ನಾಯಕ ಮತ್ತಿತರರು ಇದ್ದಾರೆ. | Kannada Prabha

ಸಾರಾಂಶ

ಸೋಮವಾರ ಜಿಲ್ಲೆಯ ವಿವಿಧೆಡೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಕಮಿಷನ್ ಸರ್ಕಾರ ಎಂದು ಬಿಜೆಪಿಯ ವಿರುದ್ಧ ಕಳೆದ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಅದೇ ಕಮಿಷನ್ ವಿಚಾರವಾಗಿ ಬಿಜೆಪಿ ತಿರುಗಿಬಿದ್ದಿದೆ. ಮಂಗಳವಾರ ಜಿಲ್ಲೆಯ ಕೆಲವು ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ.

ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ರು. ಹಣ ಪತ್ತೆಯಾಗಿರುವುದು ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆಯಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಪ್ರಮುಖ ಕಾರಣವಾಗಿದೆ.

ಸೋಮವಾರ ಜಿಲ್ಲೆಯ ವಿವಿಧೆಡೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವೇಳೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ, ತಮ್ಮ ವಿರುದ್ಧ ಕಳೆದ ಚುನಾವಣೆಯಲ್ಲಿ ಕಮಿಷನ್, ಭ್ರಷ್ಟಾಚಾರದ ವಿರುದ್ಧ ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿದ ಗುತ್ತಿಗೆದಾರರು ಎಲ್ಲಿದ್ದಾರೆ. ಗುತ್ತಿಗೆದಾರರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದರೂ ಇವರು ಯಾಕೆ ಈಗ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ಶಾಸಕಿ ವಿರುದ್ಧ ಯಾವುದೆ ದಾಖಲೆ ಇಲ್ಲದೆ ಆರೋಪ ಮಾಡಿದ ಗುತ್ತಿಗೆದಾರರ ವಿರುದ್ಧ ಘೋಷಣೆಯನ್ನೂ ಕೂಗಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ, ಶಿರಸಿ ಕ್ಷೇತ್ರಗಳಲ್ಲಿ ಬಿಜೆಪಿ ಅಲ್ಪ ಮತಗಳಿಂದ ಸೋಲನ್ನು ಅನುಭವಿಸಿತು. ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ್ ಹಾಗೂ ಕುಮಟಾದಲ್ಲಿ ದಿನಕರ ಶೆಟ್ಟಿ ಅಲ್ಪ ಮತಗಳಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್ ನ ಕಮಿಷನ್ ಆರೋಪವೂ ಬಿಜೆಪಿಯ ಮತ ಕಸಿಯುವಲ್ಲಿ ಕೆಲ ಮಟ್ಟಿಗೆ ಸಫಲವಾಗಿದೆ ಎಂದ ಅಭಿಪ್ರಾಯ ಕೆಲವು ಬಿಜೆಪಿಗರದ್ದಾಗಿದೆ.

ಈಗ ಗುತ್ತಿಗೆದಾರರ ಮನೆಯಲ್ಲಿ ನೂರು ಕೋಟಿಗೂ ಹೆಚ್ಚು ಹಣ ಸಿಕ್ಕಿರುವುದು ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಅದೇ ಕಮಿಷನ್ ಅಸ್ತ್ರ ದೊರೆತಂತಾಗಿದೆ. ಇದೆ ಕಾರಣಕ್ಕೆ ಬಿಜೆಪಿ ಮುಖಂಡರು ತೀವ್ರ ಪ್ರತಿಭಟನೆ ನಡೆಸಿದರು. ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಮನೆಯಲ್ಲಿ ದೊರೆತ ಹಣದ ಮೂಲ ಯಾವುದು, ಯಾಕಾಗಿ ಬಳಕೆಯಾಗುತ್ತಿತ್ತು ಎಲ್ಲವುಗಳ ವಿವರ ತನಿಖೆಯಿಂದ ತಿಳಿದುಬರಬೇಕು. ಆದರೆ ಸದ್ಯಕ್ಕಂತೂ ಬಿಜೆಪಿಗೆ ಪ್ರಬಲ ಅಸ್ತ್ರ ದೊರೆತಂತಾಗಿದೆ.ಬಾಕ್ಸ್-

ಮಂಗಳವಾರ ಅಂಕೋಲಾ, ಹೊನ್ನಾವರ, ಸಿದ್ದಾಪುರಗಳಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದೆ. ಸೋಮವಾರ ಕಾರವಾರ, ಶಿರಸಿ, ಹಳಿಯಾಳ, ಕುಮಟಾ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು.

ಫೋಟೋ ಬಳಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!