ರಾಮನಗರ: ರಾಮನಗರದ ಪ್ರತಿ ಮನೆಗೆ ನೆಟ್ಕಲ್ ಯೋಜನೆಯ ಕುಡಿಯುವ ನೀರು ಪೂರೈಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ವಾಸ್ತವ ಮಾಹಿತಿ ಸಂಗ್ರಹಿಸಲು ನಗರಸಭೆ ರಚಿಸಿದ್ದ ಸಮಿತಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದೆ.
ಈ ಸಮಿತಿ 11 ದಿನಗಳಿಂದ ಪ್ರತಿಯೊಂದು ವಾರ್ಡಿನ ಸದಸ್ಯರೊಂದಿಗೆ ಬೀದಿಗಳಿಗೆ ಭೇಟಿ ನೀಡಿ ನಾಗರಿಕರೊಂದಿಗೆ ಮಾತುಕತೆ ನಡೆಸಿ ಕುಡಿವ ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪದೋಷಗಳ ಪಟ್ಟಿ ಮಾಡಿದೆ. ಕೆಲ ತುರ್ತು ಕಾಮಗಾರಿಗಳನ್ನು ಸ್ಥಳದಲ್ಲಿಯೇ ಮಾಡಿಸಿದ್ದಾರೆ.
ದಿನವೊಂದಕ್ಕೆ ಪ್ರತಿ ಮನೆಗೆ ಅಗತ್ಯವಿರುವ ಪ್ರಮಾಣದಷ್ಟು ನೀರು ಪೂರೈಸುತ್ತಿಲ್ಲ. ಹಳೆ ವ್ಯವಸ್ಥೆಯಲ್ಲಿದ್ದ ಕೊರತೆಯೇ ಹೊಸ ವ್ಯವಸ್ಥೆಯಲ್ಲೂ ಮುಂದುವರಿದಿದೆ. ಜನರಿಂದ ನೀರಿನ ಸಮಸ್ಯೆಗಳ ದೂರು ಸ್ವೀಕರಿಸಲು ದೂರು ಸ್ವೀಕಾರ ಕೇಂದ್ರ ಆರಂಭಿಸಬೇಕೆಂಬ ಸಲಹೆ ನಾಗರಿಕರು ಸಮಿತಿಗೆ ನೀಡಿದ್ದಾರೆ. 3ನೇ ವಾರ್ಡ್‌ನಲ್ಲಿ ಯತೇಚ್ಛವಾಗಿ ನೀರು ಸೋರಿಕೆಯಾಗುತ್ತಿದ್ದು, ಶೇ. 50ರಷ್ಟು ಮನೆಗಳಿಗೆ ನಳ ಸಂಪರ್ಕವನ್ನೇ ನೀಡಿಲ್ಲ. ಪ್ರತಿಯೊಂದು ವಾರ್ಡಿನ ಕೆಲ ಬೀದಿಗಳಲ್ಲಿ ನೀರು ಸೋರುತ್ತಿದ್ದರೆ, ಮನೆಗಳಿಗೆ ನಳ ಸಂಪರ್ಕವನ್ನೂ ನೀಡದಿರುವುದು ಸಮಿತಿ ಭೇಟಿ ವೇಳೆ ಗೊತ್ತಾಗಿದೆ.ಯಾರಬ್ ನಗರ, ಎಂ.ಜಿ.ರಸ್ತೆ, ಟಿಪ್ಪು ನಗರ, ರೆಹಮಾನಿಯ ನಗರ ಬಡಾವಣೆಗಳಲ್ಲಿ ಜಲ ಮಂಡಳಿ ಕುಡಿವ ನೀರಿನ ಪೈಪ್ ಅಳವಡಿಸಿದ್ದರೆ, ನಗರಸಭೆ ಸಿಬ್ಬಂದಿ ಜೆಸಿಬಿ ಬಳಸಿ ಚರಂಡಿ ಸರಿಪಡಿಸುವ ವೇಳೆ ಪೈಪ್ ಗಳನ್ನು ಹಾನಿ ಮಾಡಿದ್ದಾರೆ. ಇದನ್ನು ದುರಸ್ತಿ ಪಡಿಸುವ ಕೆಲಸ ಆಗಿಲ್ಲ.
24ನೇ ವಾರ್ಡಿನಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಸಮಿತಿ ಸದಸ್ಯರು ಭೇಟಿ ನೀಡಿದಾಗ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿತು. ತಕ್ಷಣ ಜಲ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿ ಶಾಲೆಗೆ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಸಮಿತಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ 20 ವಾರ್ಡುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ವಸ್ತು ಸ್ಥಿತಿಯ ಮಾಹಿತಿ ಕಲೆ ಹಾಕಿರುವ ಸಮಿತಿ ಸದಸ್ಯರು, ಉಳಿದ 11 ವಾರ್ಡುಗಳಿಗೆ ಭೇಟಿ ನೀಡುವುದಷ್ಟೇ ಬಾಕಿಯಿದೆ. ಅದೆಲ್ಲವನ್ನು ಪೂರ್ಣಗೊಳಿಸಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಸಮಿತಿ ಸಂಪೂರ್ಣ ವರದಿಯನ್ನು ಸಲ್ಲಿಸಲಿದೆ.
ಕೋಟ್ .................
22ಕೆಆರ್ ಎಂಎನ್ 4.ಜೆಪಿಜಿ