ಮುಂಡರಗಿ: ಜೀವನಮೌಲ್ಯ ಅಳವಡಿಸಿಕೊಂಡು ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳ ನಿರ್ಮಾಣವಾಗಬೇಕಾದರೆ ಪಾಲಕರು ಪಾತ್ರ ಪ್ರಮುಖವಾಗಿದೆ. ಸಹೋದರತೆ, ಭ್ರಾತೃತ್ವ ಸಾರುವುದು ಮಾನವ ಬಂಧುತ್ವ ವೇದಿಕೆಯ ಪರಿಕಲ್ಪನೆಯಾಗಿದೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿ ಶನಿವಾರ ಜರುಗಿದ ಒಂದು ದಿನದ ಕಾರ್ಯಾಗಾರ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತ ಸಿ.ಕೆ. ಗಣಪ್ಪನವರ ಮಾತನಾಡಿ, ಮನುಷ್ಯನಲ್ಲಿ ವೈಚಾರಿಕತೆ ಬರಬೇಕಾದರೆ ಅರಿವು ಮೂಡಬೇಕು. ಇದಕ್ಕೆ ಶಿಕ್ಷಣದ ಅವಶ್ಯಕತೆ ಇದೆ. ಆಧುನಿಕತೆ ಎಷ್ಟೇ ಮುಂದುವರಿದರೂ ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳು ಇನ್ನೂ ಹೋಗಿಲ್ಲ. ಅವುಗಳನ್ನು ಹೋಗಲಾಡಿಸುವುದಕ್ಕಾಗಿ ಆಗಾಗ್ಗೆ ಜನ-ಜಾಗೃತಿ ಕಾರ್ಯಕ್ರಮಗಳು ಜರುಗುತ್ತಿರಬೇಕು ಎಂದರು.
ಪ್ರೊ. ಸತೀಶ ಪಾಸಿ, ನಿವೃತ್ತ ಶಿಕ್ಷಕ ಎಚ್.ಡಿ. ಪೂಜಾರ, ರಂಗನಾಥ ನಾಯಕ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದಲ್ಲಿ ಅನೇಕ ವೈಚಾರಿಕ ಕಾರ್ಯಗಳನ್ನು ಮಾಡುವದಲ್ಲದೇ ಆಯಾ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಸುರೇಶ ನಾಯಕ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಮೈಲಾರಪ್ಪ ಕಲಕೇರಿ, ಡಿ.ಜಿ. ಪೂಜಾರ, ರಾಜಾಭಕ್ಷಿ ಬೆಟಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೇಘರಾಜ ನಾಯಕ ನಿರೂಪಿಸಿದರು.