ಕನ್ನಡಪ್ರಭ ವಾರ್ತೆ ಹಾಸನ
ಇಡೀ ದೇಶದಲ್ಲಿ ಯಾವ ರಾಜ್ಯದಲ್ಲಿ ಇಲ್ಲದಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಪರಿಕಲ್ಪನೆ ಕರ್ನಾಟಕದಲ್ಲಿ ಮಾತ್ರ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಶ್ಲಾಘನೆ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಮತ್ತು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಿತ ಶಾಸ್ತ್ರ ವೇದಿಕೆ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೨೦೨೪-೨೫ನೇ ಸಾಲಿನ ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೌಲ್ಯಮಾಪನಕ್ಕೆ ಕೇಂದ್ರದಲ್ಲಿ ಕೊಡುವ ರಿಯಾಯಿತಿಯನ್ನು ನಾವು ಇಲ್ಲು ಕೊಡುವ ಒಂದು ಅನಿವಾರ್ಯತೆ ರಾಜ್ಯ ಮಟ್ಟದಲ್ಲಿ ಇರುತ್ತದೆ. ನಾವು ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ದೋಷಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡೋಣ. ಇತ್ತೀಚಿನ ಶೈಕ್ಷಣಿಕದಲ್ಲಿ ಕೆಲವು ಸಂಗತಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಬಗ್ಗೆ ತೆಗೆದುಕೊಂಡಿರುವ ನಿಲುವುಗಳು, ನಿರ್ಣಯಗಳು ಇವುಗಳು ಎಷ್ಟರ ಮಟ್ಟಿಗೆ ಸರಿ, ತಪ್ಪು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎನ್ನುವುದರ ಬಗ್ಗೆ ನನ್ನ ವೈಯಕ್ತಿಕ ಬೇಸರವಿದೆ ಎಂದರು.ಇಡೀ ದೇಶದಲ್ಲೆ ಯಾವ ರಾಜ್ಯದಲ್ಲಿ ಇಲ್ಲದಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಪರಿಕಲ್ಪನೆ ಕರ್ನಾಟಕದಲ್ಲಿ ಮಾತ್ರ ಇರುವುದು. ಈ ಪರಿಕಲ್ಪನೆ ಮತ್ತು ಈ ವ್ಯವಸ್ಥೆ ಶೈಕ್ಷಣಿಕ ಕ್ಷೇತ್ರಕ್ಕೆ ಬಹಳ ಪ್ರಗತಿದಾಯಕವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಹಳ ಪಾಸಿಟಿವ್ ಆಗಿರುವ ಈ ಪರಿಕಲ್ಪನೆಯನ್ನು ನಾವು ಬೇರೆ ಬೇರೆ ಕಾರಣಕ್ಕೆ ನಾಶ ಮಾಡುವುದು ಬೇಡ. ಇನ್ನು ಹೆಚ್ಚಿನ ರೀತಿ ನಮ್ಮ ಮಕ್ಕಳನ್ನು ತಯಾರು ಮಾಡುವ ಬಗ್ಗೆ ಆಲೋಚನೆ ಮಾಡಬೇಕೆ ಹೊರತು ಹಿಂದಕ್ಕೆ ತಳ್ಳುವುದು ಅಷ್ಟು ಸೂಕ್ತವಾದ ಬೆಳೆವಣಿಗೆಯಲ್ಲ ಎಂಬುದು ನನ್ನ ವೈಯಕ್ತಿಕವಾದ ಗ್ರಹಿಕೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು, ಇಲಾಖೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳು ಒಂದು ವೇದಿಕೆಯನ್ನು ಮಾಡಿಕೊಂಡು ಸರ್ಕಾರದ ಗಮನಸೆಳೆಯುವ ಮತ್ತು ಮನವರಿಕೆ ಮಾಡುವ ಕೆಲಸ ಮಾಡಬೇಕು. ಸರಕಾರದ ಕಣ್ಣು ತೆರೆಸಬೇಕು ಎಂದು ಸಲಹೆ ನೀಡಿದರು.
ಗಣಿತಶಾಸ್ತ್ರದ ಪ್ರಾಧ್ಯಾಪಕ ವಾಸುದೇವ್ ಅವರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದನ್ನು ಸ್ವಾಗತಿಸುತ್ತೇನೆ. ಸುಮ್ಮನೆ ಅನುಷ್ಠಾನಕ್ಕಾಗಿ ಯೋಜನೆಗಳಲ್ಲ. ಅನುಷ್ಠಾನದಿಂದ ಆಗುವ ಪ್ರಯೋಜನಗಳು ಸಂಗತಿ ಬಗ್ಗೆ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಬೇಕು. ಯಾವ ಜಿಲ್ಲೆಯಲ್ಲಿಯೂ ಇಲ್ಲದಿರುವ ಕ್ರಿಯಾಶೀಲತೆ ಹಾಸನ ಜಿಲ್ಲೆಯ ಪದವಿಪೂರ್ವ ಶಿಕ್ಷಕ ಮಿತ್ರರಲ್ಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ೨೦೨೪ರಲ್ಲಿ ಕಾಲೇಜಿನ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲೆ ಬಿ.ಡಿ. ಸುಜಾತ, ನಿವೃತ್ತ ಉಪನ್ಯಾಸಕರಾದ ಎಚ್.ಡಿ. ರುದ್ರೇಶ್, ಕೆ. ಮಂಜುನಾಥ್ ಪ್ರಸಾದ್ ಹಾಗೂ ಗಣಿತ ಶಾಸ್ತ್ರದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಿ ಗೌರವಿಸಿದರು. ಕಾರ್ಯಾಗಾರದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಗಣಿತಶಾಸ್ತ್ರ ವೇದಿಕೆ ಅಧ್ಯಕ್ಷ ಡಿ.ವಿ. ಸುರೇಶ್, ಹಾಸನ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಆರ್. ನಟೇಶ್, ಮಹಾ ಪೋಷಕರು ಎಸ್. ಲೋಕೇಶ್, ಉಪನ್ಯಾಸಕರ ಸಂಘದ ಅಧ್ಯಕ್ಷ ಎಚ್.ಟಿ. ಸುರೇಶ್, ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎನ್.ವಿ. ಗಿರೀಶ್, ಸಂಪನ್ಮೂಲ ವ್ಯಕ್ತಿ ಕೆ.ಎಚ್. ವಾಸುದೇವ್, ಹಾಸನ ಜಿಲ್ಲಾ ಪದವಿಪೂರ್ವ ಕಾಲೇಜುಗಳ ವೇದಿಕೆ ಮಹಾ ಪೋಷಕರು ನಂದಿನಿ, ಉಪಾಧ್ಯಕ್ಷರು ಪುರುಷೋತ್ತಮ್, ಅನಂತಪದ್ಮನಾಭ ಸ್ವಾಮಿ, ಕಾರ್ಯದರ್ಶಿ ಡಿ. ಶೋಭಾ, ಖಜಾಂಚಿ ಪ್ರಾಣೇಶ್ ರಾವ್ ಉಪಸ್ಥಿತರಿದ್ದರು.