- ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಲಿ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರ ಒತ್ತಾಯ - - -
ಬಾಂಗ್ಲಾ ದೇಶದಲ್ಲಿ ಮಾತ್ರವಲ್ಲ, ಭಾರತದಲ್ಲೇ ಹಿಂದೂಗಳ ಸ್ಥಿತಿ ಹೀನಾಯವಾಗಿದೆ. ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಶಯ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆ, ದೌರ್ಜನ್ಯ, ಹತ್ಯೆ ಪ್ರಕರಣ ಹೆಚ್ಚುತ್ತಿವೆ. ಹಿಂದೂಗಳ ಹತ್ಯೆ, ದೌರ್ಜನ್ಯ, ಹಲ್ಲೆ ಘಟನೆಗಳಿಂದ ಬಾಂಗ್ಲಾದಲ್ಲಿ ಹಿಂದೂಗಳು ನಲುಗುತ್ತಿದ್ದಾರೆ. ಭಾರತದ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರದೊಳಗಿನ ಸಮಸ್ಯೆಗಳು, ಒತ್ತಡಗಳು ಏನಿವೆಯೋ ಗೊತ್ತಿಲ್ಲ. ಆದರೆ, ಕೇಂದ್ರ ಸರ್ಕಾರವು ಹಿಂದೂಗಳ ರಕ್ಷಣೆಗೆ ತ್ವರಿತವಾಗಿ ಕ್ರಮಕ್ಕೆ ಮುಂದಾಗಲಿ ಎಂದರು.ದೇಶಾದ್ಯಂತ ಗೋ ಹತ್ಯೆ ನಿಷೇಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ತೋರಬೇಕಿದೆ. ಗೋಮಾತೆಯು ಹಿಂದೂಗಳ ಆರಾಧ್ಯ ದೈವವಾಗಿದೆ. ದೇಶದಲ್ಲಿ ಗೋ ಹತ್ಯೆ ನಿಷೇಧ ಆಗಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಆಶಯವಾಗಿದೆ. ಗೋ ಹತ್ಯೆ ತಡೆಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಗೋಹತ್ಯೆ ನಿಷೇಧವಾಗುವಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ, ಸಮಾಜದ ಜವಾಬ್ದಾರಿಯೂ ಇದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ, ಶಿಕ್ಷಣಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ವೇದಾಧ್ಯಯನಕ್ಕೆ ಆದ್ಯತೆ ಸಿಗಬೇಕು. ದಾವಣಗೆರೆ ಭಾಗದಲ್ಲೂ ಸೂಕ್ತ ಸ್ಥಳಾವಕಾಶ ಸಿಕ್ಕರೆ ವೇದಾಧ್ಯಯನ ಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು. ಆದರೆ, ಜಾಗ ಸಿಗುವುದೇ ನಮ್ಮಂತಹವರಿಗೆ ಕಷ್ಟವಾಗಿದೆ. ಒಂದುವೇಳೆ ಜಾಗ ಸಿಕ್ಕರೆ ವೇದಾಧ್ಯಯನ ಕೇಂದ್ರದ ಜೊತೆಗೆ ಬೇರೆ ಬೇರೆ ಯೋಜನೆಗಳೂ ಇವೆ, ಅವುಗಳನ್ನೂ ಆರಂಭಿಸಬಹುದು ಎಂದು ವಿವರಿಸಿದರು.
- - -
* ಮನೆಗೆ ಪೇಜಾವರರ ಪಾದಸ್ಪರ್ಶ, ಭಕ್ತರು ಪುನೀತ ದಾವಣಗೆರೆ ಮಹಾನಗರದಲ್ಲಿ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಶ್ರೀಗಳು ಕಳೆದ ಎರಡು ದಿನಗಳಿಂದ ನಗರದ ವಿವಿಧ ಭಕ್ತರ ಮನೆಗಳಿಗೆ ತೆರಳಿ, ಕುಟುಂಬ ವರ್ಗ, ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿ, ಆಶೀರ್ವದಿಸುತ್ತಿದ್ದಾರೆ. ನಗರದಲ್ಲಿ ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ನಿವಾಸಕ್ಕೂ ಶ್ರೀಗಳು ಭೇಟಿ ನೀಡಿದ್ದರು. ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಮ್ಮ ಕನಸು ರಾಮಮಂದಿರ ಮಾತ್ರವಲ್ಲ, ರಾಮ ರಾಜ್ಯ ಆಗಬೇಕು ಎಂಬುದಾಗಿದೆ. ರಾಮ ರಾಜ್ಯವೆಂದರೆ ಎಲ್ಲೆಡೆ ಸಮೃದ್ಧಿ. ಪ್ರಜೆಗಳು ಅಂದರೆ ನಾವೆಲ್ಲರೂ ರಾಮ ಆಗಬೇಕು. ಪ್ರಜೆಗಳೆಲ್ಲ ರಾಮನ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು ಎಂಬುದಾಗಿದೆ ಎಂದು ತಿಳಿಸಿದರು.
- - -