ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ಹಾದುಹೋಗಿರುವ ಬೈಚನಹಳ್ಳಿ, ಹೆತ್ತಗೌಡನಹಳ್ಳಿ ಮಾರ್ಗದ ಹಿರೀಸಾವೆ- ಚೆಟ್ಟಹಳ್ಳಿ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಕನಸು ನನಸಾಗದಿರುವ ಮಾತಿರಲಿ, ಡಾಂಬರು ಕಿತ್ತು ಅದ್ವಾನವೆದ್ದು ಹಾಳಾಗಿರುವ ಗುಂಡಿಮಯ ರಸ್ತೆ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ, ಪರಿಣಾಮವಾಗಿ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ನರಕದ ಸದೃಶ್ಯವಾಗಿದೆ.ಚನ್ನರಾಯಪಟ್ಟಣ- ಹೊಳೆನರಸೀಪುರ ಮಾರ್ಗವಾಗಿ ಬೂವನಹಳ್ಳಿ ಕ್ರಾಸ್ ಗಡಿ ಭಾಗದಿಂದ ಕಳ್ಳಿಮುದ್ದನಹಳ್ಳಿ, ಹೆತ್ತಗೌಡನಹಳ್ಳಿ, ಬೈಚನಹಳ್ಳಿ, ಹೊಡಿಕೆಕಟ್ಟೆ, ಚಿಕ್ಕಗಾವನಹಳ್ಳಿ, ದೇವರಹಳ್ಳಿ, ಹೊನ್ನವಳಿ ಬಳಿ ಅಲ್ಲಲ್ಲಿ ಡಾಂಬರು ಕಿತ್ತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅರಕಲಗೂಡಿನ ಚನ್ನಬಸವೇಶ್ವರ ವೃತ್ತದಿಂದ ಆರಂಭವಾಗುವ ಗುಂಡಿ ಹೊಂಡಗಳು ಚನ್ನರಾಯಪಟ್ಟಣದ ಗನ್ನಿಕಡ ತನಕ ಹೆಜ್ಜೆಗೊಂದು ಬಾಯ್ತೆರೆದು ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ.
ಕರಾವಳಿ, ಕೊಡಗು ಜಿಲ್ಲೆಯಿಂದ ಅರಕಲಗೂಡು ಮಾರ್ಗವಾಗಿ ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಆದರೆ ಅರಕಲಗೂಡಿನಿಂದ ಹೊಳೆನರಸೀಪುರ, ಚನ್ನರಾಯಪಟ್ಟಣವರೆಗೆ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ಬೆಂಗಳೂರು, ಮೈಸೂರು ಕಡೆಗೆ ಸಂಚರಿಸುವ ವಾಹನಗಳು ಬೇರೆ ಮಾರ್ಗ ಹಿಡಿದು ಸುತ್ತಿ ಬಳಸುವ ದುಸ್ಥಿತಿ ಬಂದೊದಗಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳ ಅಪಘಾತ ದಿನನಿತ್ಯ ತಪ್ಪದಾಗಿದೆ. ಮೈಸೂರಿಗೆ ತೆರಳಲು ಹೊಳೆನರಸೀಪುರ ಮಾರ್ಗದ ಬದಲು ಅರಕಲಗೂಡಿನಿಂದ ಕೇರಳಾಪುರ ಇಲ್ಲವೇ ಪಿರಿಯಾಪಟ್ಟಣ ಮಾರ್ಗವಾಗಿ ವಾಹನಗಳು ಓಡಾಡುವಂತಾಗಿದೆ.ಹೊಳೆನರಸೀಪುರ ಮಾರ್ಗದ ರಸ್ತೆ ಹಾಳಾದ ಕಾರಣ ಇತ್ತೀಚೆಗೆ ಅರಕಲಗೂಡಿನಿಂದ ರಾಮನಾಥಪುರ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಚಾಲಕ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು.
ತಾಲೂಕಿನಲ್ಲಿ ಪ್ರಮುಖವಾಗಿ ಮಾಗಡಿ- ಸೋಮವಾರಪೇಟೆ, ಹಾಸನ- ಪಿರಿಯಾಪಟ್ಟಣ ಹಾಗೂ ಹೊಳೆನರಸೀಪುರ, ಅರಕಲಗೂಡು- ಮಲ್ಲಿಪಟ್ಟಣ ಮಾರ್ಗವಾಗಿ ಹಿರೀಸಾವೆ ಚೆಟ್ಟಹಳ್ಳಿ ಹೆದ್ದಾರಿ ಹಾದುಹೋಗಿದೆ. ದಶಕದ ಹಿಂದೆ ತಾಲೂಕಿನಲ್ಲಿ ಹೊಳೆನರಸೀಪುರ, ಅರಕಲಗೂಡು ಮಾರ್ಗದ ರಸ್ತೆ ಸುಸ್ಥಿತಿಯಲ್ಲಿತ್ತು. ಹಾಸನ- ಪಿರಿಯಾಪಟ್ಟಣ, ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ದುಸ್ಥಿತಿ ಮಾತ್ರ ಕೇಳುವವರೇ ಇರಲಿಲ್ಲ. ಎಚ್.ಡಿ. ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಹೊಳೆನರಸೀಪುರ- ಅರಕಲಗೂಡು ಮಾರ್ಗದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಎಚ್.ಸಿ. ಮಹದೇವಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಹಾಸನ- ಪಿರಿಯಾಪಟ್ಟಣ, ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇದೀಗ ಇವೆರಡು ಪ್ರಮುಖ ಹೆದ್ದಾರಿಗಳು ಅಭಿವೃದ್ಧಿ ಭಾಗ್ಯ ಕಂಡಿವೆ. ಒಂದು ಕಾಲಕ್ಕೆ ತಾಲೂಕಿನಲ್ಲಿಯೇ ಸುಸ್ಥಿತಿಯಲ್ಲಿದ್ದ ಹೊಳೆನರಸೀಪುರ, ಅರಕಲಗೂಡು ಮಾರ್ಗದ ರಸ್ತೆ ದುಸ್ಥಿತಿ ಈಗ ಹೇಳತೀರದಾಗಿದೆ.ಪ್ರವಾಸಿಗರಿಗೆ ನರಕ ಪ್ರದರ್ಶನ:
ಒಂದೆಡೆ ಈ ಭಾಗದ ಜನರಿಗೆ ರಸ್ತೆ ಸಂಚಾರ ದಿನನಿತ್ಯ ಯಮ ಯಾತನೆ ನೀಡುತ್ತಿದ್ದರೆ ಮತ್ತೊಂದೆಡೆ ಬೆಂಗಳೂರು ಹಾಗೂ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಕೊಡಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಘಾಟಿಗೆ ತೆರಳಲು ಪ್ರಮುಖವಾಗಿ ಈ ಮಾರ್ಗವನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲಿ ಪಶ್ಚಿಮ ಘಟ್ಟದ ಪ್ರವಾಸಿತಾಣಗಳಿಗೆ ತೆರಳುವ ಪ್ರವಾಸಿಗರ ಓಡಾಟ ಮತ್ತಷ್ಟು ಹೆಚ್ಚಳವಾಗುತ್ತದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗಿಂತ ಹೆಚ್ಚಾಗಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಕಾರುಗಳು, ದ್ವಿಚಕ್ರ ವಾಹನಗಳ ದಟ್ಟಣೆಯಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯ ಕಿರಿಕಿರಿ ಕೂಡ ತಪ್ಪುತ್ತಿಲ್ಲ. ದುರಾದೃಷ್ಟವಶಾತ್ ರಸ್ತೆ ವಿಸûರಣೆಯಾಗಿ ಅಭಿವೃದ್ಧಿ ಕಾಣದೇ ಪ್ರಯಾಣಿಕರಿಗೆ ಗುಂಡಿಗಳ ನರಕ ದರ್ಶನವಾಗುತ್ತಿದ್ದು ಭಯ ಬೀಳುವಂತಾಗಿದೆ.ಪಶ್ಚಿಮ ಘಟ್ಟಗಳ ಮಲೆನಾಡ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಹಾಸನ- ಸಕಲೇಶಪುರ ಕಡೆಯಿಂದ ಸುತ್ತಿ ಬಳಸುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೂ ಹೆಚ್ಚಾಗಿ ಸಮೀಪದ ಈ ಮಾರ್ಗದ ರಸ್ತೆಯನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಚನ್ನರಾಯಪಟ್ಟಣದ ಗನ್ನಿಕಡದಿಂದ ಶುರುವಾಗುವ ಗುಂಡಿ, ಹೊಂಡಗಳು ಪ್ರಯಾಣಿಕರಿಗೆ ಹೊಳೆನರಸೀಪುರ ಹಾಗೂ ಅರಕಲಗೂಡು ತಲುಪುವ ತನಕ ತಲೆನೋವಾಗಿ ಪರಿಣಮಿಸಿದೆ.
ಇಷ್ಟಲ್ಲದೆ ಬೈಚನಹಳ್ಳಿ ಸುತ್ತಮುತ್ತಲ ಹಳ್ಳಿಗಳ ಜನರು ಪ್ರತಿನಿತ್ಯದ ವ್ಯವಹಾರಗಳಿಗಾಗಿ ಅರಕಲಗೂಡು, ಹೊಳೆನರಸೀಪುರಕ್ಕೆ ವಾಹನಗಳಲ್ಲಿ ಸರ್ಕಸ್ ಮಾಡಿಕೊಂಡು ಚಲಿಸಬೇಕಿದೆ. ರಸ್ತೆ ಅಲ್ಲಲ್ಲಿ ಕೊರಕಲು ಬಿದ್ದು ಮಂಡಿಯುದ್ದ ಪ್ರಪಾತಕ್ಕೆ ಕುಸಿದಿದೆ. ತೀವ್ರ ಹದಗೆಟ್ಟಿರುವ ರಸ್ತೆಯಲ್ಲಿ ರಾತ್ರಿ ವೇಳೆ ಗುಂಡಿ ಹೊಂಡಕ್ಕೆ ಇಳಿದು ಅಪಾಯವನ್ನು ಲೆಕ್ಕಿಸದೆ ಸಂಚರಿಸುವ ದುಸ್ಥಿತಿ ಎದುರಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿರುವ ಗುಂಡಿಗಳನ್ನು ಮುಚ್ಚಿ ರಸ್ತೆ ಅಭಿವೃದ್ಧಿ ಪಡಿಸಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ----------* ಹೇಳಿಕೆಗಳು
1.- ಬೈಚನಹಳ್ಳಿ ಮಾರ್ಗದ ರಸ್ತೆ ಡಾಂಬರು ಕಿತ್ತು ಹಾಳಾಗಿದ್ದು ಅಪಘಾತಗಳ ತಾಣವಾಗಿ ಪ್ರತಿನಿತ್ಯ ಓಡಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿ ಪಡಿಸುವುದನ್ನೇ ಮರೆತಿದ್ದಾರೆ. ರಸ್ತೆ ಅಭಿವೃದ್ಧಿಗೆ ಮುಂದಾಗದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. - ಕೆ.ಟಿ. ಲೋಕೇಶ್, ಕಳ್ಳಿಮುದ್ದನಹಳ್ಳಿ ಗ್ರಾಮಸ್ಥ2.ಅರಕಲಗೂಡು ಮಾರ್ಗದ ಹಿರೀಸಾವೆ- ಚೆಟ್ಟಹಳ್ಳಿ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಸಾಧ್ಯತೆ ಇದೆ. ಕೇಂದ್ರ ರಸ್ತೆ ನಿಗಮದಿಂದ (ಸಿ.ಆರ್.ಎಫ್) 4 ಕೋಟಿ ರು. ಅನುದಾನ ಬಂದಿದ್ದು ಮಲ್ಲಿಪಟ್ಟಣ ಮಾರ್ಗ ಅಭಿವೃದ್ಧಿ ಪಡಿಸಲಾಗಿದೆ. ಬೈಚಹಳ್ಳಿ, ಹೊಳೆನರಸೀಪುರ ಮಾರ್ಗದ ರಸ್ತೆ ನಮ್ಮ ಸುಪರ್ದಿಗೆ ಬಂದಿಲ್ಲ. ಸಿಆರ್‌ಎಫ್. ಅನುದಾನ ಕೂಡ ಬಂದಿಲ್ಲ, ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆ ಮಾಡಬೇಕು. - ನಾಗವೇಣಿ, ಸಹಾಯಕ ಕಾರ್ಯಪಾಪಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಹೊಳೆನರಸೀಪುರ ಉಪವಿಭಾಗ
3 -ಚಿಕ್ಕಗಾನವಹಳ್ಳಿ, ದೊಡ್ಡಗಾವನಹಳ್ಳಿ ನಡುವಿನ ಗುಂಡಿ ಹೊಂಡಳನ್ನು ಮುಚ್ಚಿ ದುರಸ್ತಿ ಪಡಿಸಲು 2 ಕೋಟಿ ರು. ಅನುದಾನ ಬಂದಿದೆ. ಮಳೆಗಾಲ ಮುಗಿದ ನಂತರ ದುರಸ್ತಿ ಪಡಿಸಲಾಗುವುದು. ಅರಕಲಗೂಡು- ಹೊಳೆನರಸೀಪುರ ಮಾರ್ಗದ ರಸ್ತೆ ಪೂರ್ತಿ ಹಾಳಾಗಿದ್ದು ಅಭಿವೃದ್ಧಿ ಪಡಿಸಲು ಅನುದಾನ ಸಾಕಾಗುವುದಿಲ್ಲ. ಅನುದಾನಕ್ಕಾಗಿ ಸಂಸದರೂ ಕೂಡ ಮನವಿ ಮಾಡಿದ್ದಾರೆ. ರಸ್ತೆ ಹೆಚ್ಚು ಹಾಳಾದ ಕಡೆ ಅಭಿವೃದ್ಧಿ ಪಡಿಸಲು ಅನುದಾನ ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಅಭಿವೃದ್ಧಿ ಪಡಿಸಲಾಗುವುದು. - ಸಾಗರ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್, ಅರಕಲಗೂಡು