15 ವರ್ಷವಾದರೂ ಮುಗಿಯದ ಹೊಳೆಮಣ್ಣೂರ ಮನೆ ಹಂಚಿಕೆ ಗೊಂದಲ!

KannadaprabhaNewsNetwork | Published : Mar 13, 2025 12:48 AM

ಸಾರಾಂಶ

ಮಲಪ್ರಭಾ ನದಿ ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ ಮೊದಲ ಗ್ರಾಮ, ಹೊಳೆಮಣ್ಣೂರ ಆಸರೆ ನವಗ್ರಾಮದಲ್ಲಿನ ಮನೆ ಹಾಗೂ ಹಕ್ಕುಪತ್ರ ಹಂಚಿಕೆ ಗೊಂದಲ 15 ವರ್ಷ ಕಳೆದರೂ ಇನ್ನು ಮುಗಿದಿಲ್ಲ. ಜತೆಗೆ ಅಲ್ಲಿ ವಾಸಿಸುವವರಿಗೆ ಯಾವುದೇ ಸೌಲಭ್ಯವೂ ದೊರೆಯುತ್ತಿಲ್ಲ.

ಪಿ.ಎಸ್. ಪಾಟೀಲ

ರೋಣ: ಮಲಪ್ರಭಾ ನದಿ ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ ಮೊದಲ ಗ್ರಾಮ, ಹೊಳೆಮಣ್ಣೂರ ಆಸರೆ ನವಗ್ರಾಮದಲ್ಲಿನ ಮನೆ ಹಾಗೂ ಹಕ್ಕುಪತ್ರ ಹಂಚಿಕೆ ಗೊಂದಲ 15 ವರ್ಷ ಕಳೆದರೂ ಇನ್ನು ಮುಗಿದಿಲ್ಲ. ಇದರಿಂದ ನವಗ್ರಾಮ ಹಾಗೂ ಮೂಲ ಗ್ರಾಮದಲ್ಲಿನ ಕುಟುಂಬಗಳು ತ್ರಿಶಂಕು ಸ್ಥಿತಿಯಲ್ಲಿವೆ.

ಮೂಲ ಗ್ರಾಮದಲ್ಲಿನ ಕುಟುಂಬ ಪ್ರಕಾರ ಮನೆ ಹಂಚಿಕೆ ಮಾಡಿಲ್ಲ, 3 ಮನೆ ಅಗತ್ಯ ಇರುವವರಿಗೆ ಒಂದೇ ಕೊಟ್ಟಿದ್ದಾರೆ. ಒಂದೇ ಮನೆ ಕೊಡಬೇಕಿದ್ದವರಿಗೆ 3ರಿಂದ 4 ಮನೆ ಕೊಟ್ಟಿದ್ದಾರೆ. ಮನೆ ಹಂಚಿಕೆ ಗೊಂದಲ‌ ಇಂದಿಗೂ ಜೀವಂತವಾಗಿದೆ.

ಮಲಪ್ರಭಾ ನದಿ ಉಕ್ಕಿ ಹರಿದಾಗ ಹೊಳೆಮಣ್ಣೂರ ಮೂಲ ಗ್ರಾಮ ಜಲಾವೃತವಾಗಿ, ಸುತ್ತಲ ಸಂಪರ್ಕ ಕಡಿದುಕೊಳ್ಳುತ್ತಿತ್ತು. 2007ರಲ್ಲಿ ಪ್ರವಾಹದಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸಿದರು. ಆಗ ಗ್ರಾಮದ ಹೊರವಲಯದಲ್ಲಿ (ಶಿರೋಳ ರಸ್ತೆಗೆ ಹೊಂದಿಕೊಂಡು) ತಾತ್ಕಾಲಿಕವಾಗಿ ತಗಡಿನ ಶೆಡ್‌ ನಿರ್ಮಿಸಿ ಸಂತ್ರಸ್ತರಿಗೆ ವಾಸಿಸಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ತಗಡಿನ ಶೆಡ್‌ನಲ್ಲಿ ಒಂದು ರಾತ್ರಿ ವಾಸ್ತವ್ಯ ಮಾಡಿದ್ದರು. ಗ್ರಾಮ ಸ್ಥಳಾಂತರಿಸಿ, ಶಾಶ್ವತ ಆಸರೆ ಸೂರುಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.

ಗ್ರಾಮ ಸ್ಥಳಾಂತರಕ್ಕೆ ಜಿಲ್ಲಾಡಳಿತ 16 ಎಕರೆ ಭೂಮಿ ಖರೀದಿಸಿತು. 2008ರಲ್ಲಿ ಮಧ್ಯಂತರ ಚುನಾವಣೆ‌ ನಡೆದು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2009ರಲ್ಲಿ ಮತ್ತೆ ಪ್ರವಾಹ ಉಂಟಾಯಿತು. ಆಗ ನನೆಗುದಿಗೆ ಬಿದ್ದಿದ್ದ ಗ್ರಾಮ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಲಾಯಿತು. ಎಕರೆಗೆ ₹7.1 ಲಕ್ಷದಂತೆ ಒಟ್ಟು 25 ಎಕರೆ (2007ರಲ್ಲಿ ಖರೀದಿಸಿದ 16 ಎಕರೆ ಸೇರಿ) ಭೂಮಿ ಖರೀದಿಸಲಾಯಿತು. ಅಲ್ಲಿ ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದವರು 544 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಒಪ್ಪಿಸಿದರು. ಪ್ರವಾಹಪೀಡಿತ 11 ಗ್ರಾಮಗಳ ಪೈಕಿ ಮೊದಲು ಸ್ಥಳಾಂತರಗೊಂಡಿದ್ದು ಹೊಳೆಮಣ್ಣೂರ ಗ್ರಾಮ.

ಮುಗಿಯದ ಹಕ್ಕುಪತ್ರ ಗೊಂದಲ: 2007ರಲ್ಲಿ ಖಾತೆ ಉತಾರ ಪ್ರಕಾರ 461 ಫಲಾನುಭವಿಗಳನ್ನು ಕಂದಾಯ ಇಲಾಖೆ ಗುರುತಿಸಿ ಮನೆ ಹಂಚಿಕೆಗೆ ಮುಂದಾಯಿತು. ಆಯ್ಕೆ ಸರಿಯಾಗಿಲ್ಲವೆಂದು ಗ್ರಾಮಸ್ಥರು ತಕರಾರು ತೆಗೆದರು. ಇದರಿಂದ ಕಂದಾಯ ಇಲಾಖೆ ಗ್ರಾಪಂಗೆ ಆಯ್ಕೆ ಮಾಡುವ ಜವಾಬ್ದಾರಿ ನೀಡಿತು. ಗ್ರಾಪಂ 2009ರಲ್ಲಿ ಗ್ರಾಮಸಭೆ ಕರೆದು ಖಾತೆ ಉತಾರ ಪ್ರಕಾರ 470 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿತು. ಮನೆ ಇಲ್ಲದವರು ಅರ್ಜಿ ಸಲ್ಲಿಸುವಂತೆ ಗ್ರಾಪಂ ಸೂಚಿಸಿತು.74 ಮನೆಗಳಿಗೆ 200 ಅರ್ಜಿಗಳು ಸಲ್ಲಿಕೆಯಾದವು. ಆಗ ಆಯ್ಕೆ, ಹಕ್ಕುಪತ್ರ ವಿತರಣೆಯಲ್ಲಾದ ತಾರತಮ್ಯದಿಂದ ಗೊಂದಲ ತಾರಕಕ್ಕೇರಿತು. ತಹಸೀಲ್ದಾರ್‌, ಸ್ಥಳೀಯ ಶಾಸಕರು, ಗ್ರಾಪಂ ಅಧಿಕಾರಿಗಳು, ಉಪವಿಭಾಗಾಧಿಕಾರಿ ಮಧ್ಯಸ್ಥಿಕೆಯಲ್ಲಿ ಸಾಕಷ್ಟು ಬಾರಿ ಸಭೆಗಳು ನಡೆಸಲಾಯಿತು. ಅಂತಿಮವಾಗಿ 492 ಫಲಾನುಭವಿಗಳ ಆಯ್ಕೆ ಮಾಡಿ ಮನೆ ಹಂಚಿಕೆ ಮಾಡಲಾಯಿತು. ಇನ್ನು 62 ಮನೆ ಹಂಚಿಕೆ ಬಾಕಿ ಇದೆ.

ಶೇ. 75ರಷ್ಟು ವಾಸ: ಸ್ಥಳಾಂತರ ನವಗ್ರಾಮದಲ್ಲಿ 2019ರ ವರೆಗೆ ಶೇ. 10ರಷ್ಟು ಕುಟುಂಬಗಳು ವಾಸವಿದ್ದವು. 2019ರ ಪ್ರವಾಹದ ಆನಂತರ ಶೇ. 75ರಷ್ಟು ಕುಟುಂಬಗಳು ಹಕ್ಕುಪತ್ರ ಹಂಚಿಕೆ ಗೊಂದಲ ಲೆಕ್ಕಿಸದೆ ನವಗ್ರಾಮದಲ್ಲಿ ತಮಗಿಷ್ಟವಾಸ ಮನೆಯಲ್ಲಿ ಬಂದು ನೆಲೆಸಿದ್ದಾರೆ.

ಇಲ್ಲೂ ಇದೆ ನೀರಿನ ಸಮಸ್ಯೆ: ನವಗ್ರಾಮ ಗಾಡಿಗೋಳಿ ಗ್ರಾಮದಂತೆ ಇಲ್ಲಿಯೂ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜನ ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ. 2021-22ನೇ ಸಾಲಿನ ಜಲ ಜೀವನ ಮಿಷನ್‌ ಯೋಜನೆಯಡಿ ₹59 ಲಕ್ಷ ವೆಚ್ಚದಲ್ಲಿ 370 ಮನೆಗಳಿಗೆ ನೀರು ಪೂರೈಕೆಗಾಗಿ ಪೈಪ್‌ಲೈನ್ ಹಾಗೂ ನಳ ಸಂಪರ್ಕ ಕಲ್ಪಿಸಲಾಗಿದೆ. ಈ ವರೆಗೂ ನೀರು ಪೂರೈಕೆಯಾಗಿಲ್ಲ.

ಬೆರಳೆಣಿಕೆಯಷ್ಟು ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದ್ದು, ಅವು ಬಿರುಕು ಬಿಟ್ಟಿವೆ. ಒಂದೂ ರಸ್ತೆಗೂ ಚರಂಡಿ ನಿರ್ಮಿಸಿಲ್ಲ. ಆಸ್ಪತ್ರೆಯಿಲ್ಲ. ಬಸ್ ನಿಲ್ದಾಣವಿಲ್ಲ, ಉದ್ಯಾನ ಇಲ್ಲ, ಅಂಚೆ ಕಚೇರಿ ಇಲ್ಲ, ಗ್ರಾಪಂ ಕೇಂದ್ರ ಕಚೇರಿ ಮೂಲಗ್ರಾಮದಲ್ಲಿಯೇ ಇದ್ದು, ನವಗ್ರಾಮದ ನಿವಾಸಿಗಳಿಗೆ ತೊಂದರೆಯಾಗಿದೆ. ಗ್ರಾಪಂ ಕಾರ್ಯಾಲಯವನ್ನು ನವಗ್ರಾಮಕ್ಕೆ ಸ್ಥಳಾಂತರಿಸಬೇಕಿದೆ., ಮನೆಗಳ ಶೌಚಾಲಯ ನಿರುಪಯುಕ್ತವಾಗಿದ್ದು, ಮಹಿಳೆಯರಿಗಾಗಿ ಸಮುದಾಯ ಶೌಚಾಲಯ ನಿರ್ಮಿಸುವಂತೆ ಇಲ್ಲಿನ ಮಹಿಳೆಯರ ಆಗ್ರಹವಾಗಿದೆ.

ಕನಿಷ್ಠ ಪಕ್ಷ 2 ದಿನಗಳಿಗೊಮ್ಮೆಯಾದರೂ ನೀರು ಪೂರೆಸಬೇಕು. 10ರಿಂದ 12 ದಿನ ನೀರಿಗೆ ಕಾಯೋದು ಅಂದ್ರ ಬಾಳಾ ಕಷ್ಟ ಆಗುತ್ರಿ. ದಿನದ 24 ತಾಸು ನೀರು ಕೊಡ್ತೇವಿ ಅಂತಾ ಮನೆ ಮನೆಗೆ ನಳ ಕುಂದಿರಿಸಿ 3 ವರ್ಷ ಆಗತ್ರಿ, ಇದುವರೆಗೂ ನೀರು ಬಂದಿಲ್ಲ. ಎಲ್ಲಾ ನಳ‌ ಮುರಿದು ಹೋಗ್ಯಾವ್ರಿ ಎಂದು ಹೊಳೆಮಣ್ಣೂರ ಆಸರೆ ನವಗ್ರಾಮ ನಿವಾಸಿಗಳಾದ ಯಲ್ಲವ್ವ ಮಡಿವಾಳರ, ಮಾರುತಿ ತಳವಾರ ಹೇಳಿದರು.

ಹೊಳೆಮಣ್ಣೂರ ನವಗ್ರಾಮ ಹಾಗೂ ಉಳಿದ ಎಲ್ಲ ಸ್ಥಳಾಂತರ ನವಗ್ರಾಮಗಳ ಮನೆ ಹಂಚಿಕೆ ಗೊಂದಲ ನಿವಾರಣೆಗೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ತಾಪಂ ಇಒ ಹಾಗೂ ನಾನು, ಪಿಡಿಒಗಳೊಂದಿಗೆ ಆಯಾ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಮಗ್ರ ವರದಿ ಸಿದ್ಧಗೊಳಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದು ರೋಣ ತಹಸೀಲ್ದಾರ್‌ ನಾಗರಾಜ ಕೆ. ಹೇಳಿದರು.

ನೀರಿನ ಸಮಸ್ಯೆಯಾಗದಂತೆ ಕ್ರಮ‌ ಕೈಗೊಳ್ಳಲಾಗುವುದು. ಗ್ರಾಪಂ‌ ಕಾರ್ಯಾಲಯ‌ ಕಟ್ಟಡ ನವಗ್ರಾಮದಲ್ಲಿ ನಿರ್ಮಿಸಲು ಸರ್ಕಾರಿ ಅನುದಾನ ಹಾಗೂ ಎನ್ಆರ್‌ಇಜಿ ಯೋಜನೆಯಲ್ಲಿ ಒಟ್ಟು ₹ 22 ಲಕ್ಷದಲ್ಲಿ ಕ್ರಿಯಾಯೋಜನೆ ಸಿದ್ಧಗೊಳಿಸಿ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನವಗ್ರಾಮದಲ್ಲಿ ಮಹಿಳಾ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೊಳೆಮಣ್ಣೂರ ಪಿಡಿಒ ಶಿವನಗೌಡ ಮೆಣಸಗಿ ಹೇಳಿದರು.

Share this article