ಗೌಡರ ಕುಟುಂಬದ ಮೇಲೆ ಮುಗಿಬಿದ್ದ ಕಾಂಗ್ರೆಸ್ಸಿಗರು

KannadaprabhaNewsNetwork | Published : Dec 6, 2024 8:55 AM

ಸಾರಾಂಶ

ಕಾಂಗ್ರೆಸ್ಸಿನ ಜನಕಲ್ಯಾಣ ಸಮಾವೇಶದ ಆರಂಭದಿಂದಲೂ ಕಡೆವರೆಗೂ ಸ್ವತಃ ಸಿಎಂ ಸಿದ್ಧರಾಮಯ್ಯ ಅವರಿಂದ ಹಿಡಿದು ಉಪ ಮುಖ್ಯಮಂತ್ರಿ ಡಿಕೆಶಿ ಹಾಗೂ ಹಲವು ಸಚಿವರು ಕೂಡ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡರು ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಈ ಸಮಾವೇಶ ಹಾಸನದಲ್ಲಿಯೇ ಏಕೆ ನಿಗದಿಯಾಯಿತು ಎನ್ನುವುದು ಸ್ಪಷ್ಟವಾದಂತಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ ನಗರದ ಕೃಷ್ಣಾ ನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್ಸಿನ ಜನಕಲ್ಯಾಣ ಸಮಾವೇಶದ ಆರಂಭದಿಂದಲೂ ಕಡೆವರೆಗೂ ಸ್ವತಃ ಸಿಎಂ ಸಿದ್ಧರಾಮಯ್ಯ ಅವರಿಂದ ಹಿಡಿದು ಉಪ ಮುಖ್ಯಮಂತ್ರಿ ಡಿಕೆಶಿ ಹಾಗೂ ಹಲವು ಸಚಿವರು ಕೂಡ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡರು ಹಾಗೂ ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಈ ಸಮಾವೇಶ ಹಾಸನದಲ್ಲಿಯೇ ಏಕೆ ನಿಗದಿಯಾಯಿತು ಎನ್ನುವುದು ಸ್ಪಷ್ಟವಾದಂತಾಗಿದೆ.ಸಮಾವೇಶದ ಕಡೆಯಲ್ಲಿ ತಮ್ಮ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತಿನ ಆರಂಭದಲ್ಲೇ ಹಲವು ಸ್ವಾಭಿಮಾನಿ ಸಂಘಟನೆಯವರು ಮೈಸೂರಿನಲ್ಲಿ ಒಂದು ದೊಡ್ಡ ಸಮಾವೇಶ ನಡೆಸಬೇಕು ಎಂದು ಒತ್ತಾಯ ಮಾಡಿದರು. ಆದರೆ, ಮೈಸೂರಿನಲ್ಲಿ ಈಗಾಗಲೇ ಸಾಕಷ್ಟು ದೊಡ್ಡ ಸಮಾವೇಶಗಳು ನಡೆದಿವೆ. ಹಾಗಾಗಿ ಈ ಬಾರಿ ಹಾಸನದಲ್ಲಿ ನಡೆಸೋಣ ಎಂದು ನಾನೇ ಹೇಳಿದೆ ಎಂದು ತಿಳಿಸಿದರಾದರೂ ಮಾತು ಮುಂದುವರಿದಂತೆ ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.ನನ್ನನ್ನು ಜೆಡಿಎಸ್ಸಿಂದ ಓಡಿಸಿದ್ದೇ ಎಚ್‌ಡಿಡಿ:ಜಾತ್ಯತೀತ ಜನತಾದಳವನ್ನು ಅಂದಿನಿಂದಲೂ ನಾನೂ ಸೇರಿದಂತೆ ಹಲವರು ಕಟ್ಟಿ ಬೆಳೆಸಿದೆವು. ಆದರೆ, ದೇವೇಗೌಡರು ಯಾರನ್ನೂ ಬೆಳೆಯಲು ಬಿಡಲಿಲ್ಲ. ಎಲ್ಲರನ್ನೂ ತುಳಿಯುತ್ತಾ ಬಂದರು. ನಾವೆಲ್ಲಾ ಕಷ್ಟಪಟ್ಟು ಪಕ್ಷ ಕಟ್ಟಿದ್ದಕ್ಕೆ 1994ರಲ್ಲಿ ಅವರು ಮುಖ್ಯಮಂತ್ರಿಯಾದರು. ಈ ವೇಳೆ ನಾನು ಹುಬ್ಬಳ್ಳಿಯಲ್ಲಿ ಅಹಿಂದಾ ಸಮಾವೇಶ ನಡೆಸಿದೆ ಎನ್ನುವ ಒಂದೇ ಕಾರಣಕ್ಕೆ ನನ್ನನ್ನು ಜೆಡಿಎಸ್‌ನಿಂದ ಹೊರಗಟ್ಟಿದರು ಎಂದು ಅಸಮಾಧಾನ ಹೊರಹಾಕಿದರು.ಅಂದಿನಿಂದ ನನ್ನ ಸಾಮರ್ಥ್ಯದ ಮೇಲೆ ನಾನು ಬೆಳೆದುಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಬರೀ ಅಪಪ್ರಚಾರ ಮಾಡಿಕೊಂಡು ಬಂದ ಇವರು ಈಗಲೂ ಈ ವಯಸ್ಸಿನಲ್ಲೂ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನ್ನ ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದರು. ಕಾಂಗ್ರೆಸ್‌ ಕಿತ್ತೊಗೆಯಿರಿ ಎಂದು ಹೇಳಿದ್ದರು. ಆದರೆ, ಏನಾಯಿತು? ದೇವೇಗೌಡರೆ, ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಿ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಿರಿ. ಬಿಟ್ಹೋದ್ರಾ...? ನೀವು ದೇಶ ಬಿಟ್ಟು ಹೋಗುವುದು ಬೇಡ. ಇಲ್ಲೇ ಇರಿ. ಆದರೆ ವಯಸ್ಸಿಗೆ ತಕ್ಕಂತೆ ಮಾತನಾಡಿ ಎಂದು ಟಾಂಗ್‌ ನೀಡಿದರು.ನಮ್ಮ ಬಗ್ಗೆ ಇಷ್ಟೆಲ್ಲಾ ಮಾತನಾಡುವ ನೀವಾಗಲಿ, ಬಿಜೆಪಿ ಸಖ್ಯ ಮಾಡಿಕೊಂಡು ಕೇಂದ್ರದಲ್ಲಿ ಮಂತ್ರಿಯಾಗಿರುವ ನಿಮ್ಮ ಮಗ ಕುಮಾರಸ್ವಾಮಿಯಾಗಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಣದ ಪಾಲು ಬರದಿರುವ ಬಗ್ಗೆಯಾಗಲಿ, ನಬಾರ್ಡ್‌ ನೆರವು ಕಡಿಮೆಯಾಗಿರುವ ಬಗ್ಗೆಯಾಗಲಿ ಪ್ರಶ್ನಿಸಿದ್ದೀರಾ? ಇಲ್ಲಿ ಸುಮ್ಮನೆ ರೈತರ ಹೆಸರು ಹೇಳಿಕೊಂಡು ಕಣ್ಣೀರು ಹಾಕುತ್ತೀರಿ ಎಂದು ಕಿಡಿಕಾರಿದರು.ಜಾತ್ಯತೀತ ಹೆಸರು ಬದಲಿಸಿ:ಪರಂಸಮಾವೇಶದ ಆರಂಭದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಕೂಡ, ಜೆಡಿಎಸ್‌ ನಾಯಕರು ತಾವು ಜಾತ್ಯತೀತ ಅಂತ ಹೇಳಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಮಂಕುಬೂದಿ ಎರಚಿದ್ದೀರಿ. ಕೋಮುವಾದಿಗಳ ಜತೆ ಸೇರಿಕೊಂಡು ಸಚಿವರಾಗಿದ್ದೀರಿ. ಜಾತ್ಯತೀತ ಎನಿಸಿಕೊಳ್ಳೋಕೆ ನಿಮಗೆ ನೈತಿಕತೆ ಇಲ್ಲ. ಹಾಗಾಗಿ ಜಾತ್ಯತೀತ ಎನ್ನುವುದನ್ನು ಬದಲಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು ನೀವು ಬಿಜೆಪಿ ಜೆಡಿಎಸ್ ಅಲ್ಲಾಡಿಸಲು ಅಗಲ್ಲ. ನಿಮ್ಮನೆ ಐದು ಬಾಗಿಲು ಆಗಿದೆ. ಆದರೆ ನೀವು ನಮಗೆ ಹೇಳ್ತೀರಾ ಎಂದರು. ನಿಮ್ಮಂತೆ ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಯಾವ ಪಕ್ಷ ಜಾತ್ಯತೀತ ಎಂದು ಹೇಳಿಕೊಂಡು ಹಾಸನದ ಜನತೆಗೆ ಮಂಕು ಬೂದಿ ಎರಚುತ್ತಿದ್ದರು. ನೀವು ಕೋಮುವಾದಿ ಬಿಜೆಪಿ ಜೊತೆ ಸೇರಿ ಮಂತ್ರಿ ಆಗಿದಿರಲ್ಲ ನಿಮಗೆ ನಾಚಿಕೆ ಆಗಲ್ವ. ಮೊದಲು ಜಾತ್ಯತೀತ ಎನ್ನೋದನ್ನ ಬದಲಾಯಿಸಿ ಎಂದು ಕುಮಾರಸ್ವಾಮಿ ಹೆಸರು ಹೇಳದೆ ಪರಮೇಶ್ವರ್ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಮುನಿಯಪ್ಪ, ಮಹದೇವಪ್ಪ, ಜಮೀರ್‌ ಅಹಮದ್‌, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್‌.ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಾವೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಚಿವರು, ಕಾಂಗ್ರೆಸ್ ನ ಬಹುತೇಕ ಶಾಸಕರು ಪಾಲ್ಗೊಂಡಿದ್ದರು.ಅಧಿಕೃತವಾಗಿ ವಂದೇ ಮಾತರಂ ಹಾಡಿನ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಸಂಗೀತ ನಿರ್ದೇಶಕ ಹಾಗೂ ಹಾಸ್ಯ ನಟ ಸಾಧು ಕೋಕಿಲ ಹಾಗೂ ಸೇವಾದಳ ಕಾರ್ಯಕರ್ತರಿಂದ ವಂದೇ ಮಾತರಂ ಗಾಯನ ನಡೆಯಿತು. --------ಬಾಕ್ಸ್.........ಮನೆ, ಕೋರ್ಟ್‌ಗೆ ಅಲೆಯಬೇಕು: ಖರ್ಗೆಸಮಾವೇಶದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ "ರೇವಣ್ಣ ಅವರಿಗೆ ಇನ್ನು ಮುಂದೆ ಏನಿದ್ದರೂ ಮನೆ- ಕೋರ್ಟ್‌ಗೆ ಅಲೆಯಬೇಕಷ್ಟೆ. ಅದನ್ನು ಬಿಟ್ಟು ಕಾಂಗ್ರೆಸ್‌ ಕಿತ್ತೊಗೆಯುತ್ತೇನೆ ಎನ್ನುವುದೆಲ್ಲಾ ಕನಸು " ಎಂದಿದ್ದಾರೆ. ರೇವಣ್ಣ ಅವರಿಗೆ ಅವರ ಮಕ್ಕಳು ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆಯಲ್ಲಾ. ಈ ಜಿಲ್ಲೆಯ ಮಹಿಳೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ಇವರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.--------ಬಾಕ್ಸ್........ಕಿತ್ತಾಕೋಕೆ ಆಲೂಗಡ್ಡೆ ಗಿಡ ಅಲ್ಲವೇದಿಕೆಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಜೆಡಿಎಸ್‌ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಬುಡಸಮೇತ ಕಿತ್ತುಹಾಕುತ್ತೇವೆ ಎಂದು ಹೇಳುತ್ತಿದ್ದೀರಲ್ಲಾ ದೇವೇಗೌಡರೇ, ಇದು ಕಿತ್ತಾಕೋಕೆ ಆಲೂಗಡ್ಡೆ ಗಿಡ ಅಲ್ಲ, ಕಡ್ಲೆಕಾಯಿ ಗಿಡ ಅಲ್ಲ. ಎಲ್ಲಾ ಕಡೆ ಹೋಗಿ ಕಣ್ಣೀರು ಹಾಕ್ತೀರಲ್ಲಾ. ನಿಮ್ಮ ಮಗ ಮಾಜಿ‌ಮುಖ್ಯಮಂತ್ರಿ, ನೀವು ಮಾಜಿ ಪ್ರಧಾನಮಂತ್ರಿ. ಆದ್ರೂ ನೀವು ಚನ್ನಪಟ್ಟಣದಲ್ಲಿ ಸೋತು ಹೋದ್ರಿ. ಇನ್ನು ರಾಜ್ಯದಲ್ಲಿ ಗೆಲ್ತೀರಾ..? ಈ ಹಾಸನ ಹಾಗೂ ಈ ರಾಜ್ಯದಲ್ಲಿ ದೇವೇಗೌಡರ ಸಾಕ್ಷಿಗುಡ್ಡೆ ಏನು? ಎಂದು ಪ್ರಶ್ನಿಸಿದರು.-----ಬಾಕ್ಸ್........ತಿಲಕ ನಿರಾಕರಿಸಿದ ಸಿದ್ದುಕಾರ್ಯಕ್ರಮ ಮುಗಿದ ಮೇಲೆ ನಗರದ ಹೊರವಲಯದ ಹೊಯ್ಸಳ ರೆಸಾರ್ಟ್‌ಗೆ ತೆರಳಿದಾಗ ರೆಸಾರ್ಟ್‌ನ ಸಿಬ್ಬಂದಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿ ತಿಲಕ ಇಡಲು ಹೋದ ವೇಳೆ ನಿರಾಕರಣೆ ಮಾಡಿದರು. ಸಿಎಂಗೆ ತಿಲಕ ಅಷ್ಟೇ ಸರ್‌ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರೂ ಬೇಡ, ಬೇಡ ಎಂದು ತಿಲಕ ನಿರಾಕರಿಸಿದ ಸಿಎಂ-ಡಿಸಿಎಂ ಮುಂದೆ ನಡೆದರು.

Share this article