ಇಂದು ನಾವು ಸ್ವತಂತ್ರ, ಗೌರವದಿಂದ ಮತ್ತು ನಿರಾಳವಾಗಿ ಬದುಕಲು ಸಾಧ್ಯವಾಗಿರುವುದರ ಹಿಂದೆ ಅನೇಕ ಮಹನೀಯರ ತ್ಯಾಗ, ಪರಿಶ್ರಮ ಹಾಗೂ ನಿರಂತರ ಹೋರಾಟವಿದೆ.
ಸಂವಿಧಾನ ದಿನಾಚರಣೆಯಲ್ಲಿ ಮಹಾನಗರ ಪಾಲಿಕೆ ಮಹಾಪೌರ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಇಂದು ನಾವು ಸ್ವತಂತ್ರ, ಗೌರವದಿಂದ ಮತ್ತು ನಿರಾಳವಾಗಿ ಬದುಕಲು ಸಾಧ್ಯವಾಗಿರುವುದರ ಹಿಂದೆ ಅನೇಕ ಮಹನೀಯರ ತ್ಯಾಗ, ಪರಿಶ್ರಮ ಹಾಗೂ ನಿರಂತರ ಹೋರಾಟವಿದೆ. ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ರಾಜಕೀಯ ಹಕ್ಕುಗಳು ಮತ್ತು ಅಧಿಕಾರದಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು ಎಂಬ ಆಶಯದೊಂದಿಗೆ ಹೋರಾಡಿದ ಮಹನೀಯರ ಸೇವೆ ಸದಾ ಸ್ಮರಣೀಯ ಎಂದು ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಬು ಜಗಜೀವನ್ ರಾಮ್, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಕಂಡ ಕನಸು, ಅವರು ನಡೆಸಿದ ಹೋರಾಟಗಳು ಹಾಗೂ ಸಾಧನೆಗಳ ಫಲವಾಗಿ ಇಂದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನಬದ್ಧ ಹಕ್ಕುಗಳು ಮತ್ತು ಅವಕಾಶಗಳು ಲಭಿಸಿವೆ.ಇಂತಹ ಮಹನೀಯರ ಕೊಡುಗೆ ಯುವ ಪೀಳಿಗೆ ಅರಿತುಕೊಳ್ಳಬೇಕು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಭಾರತದ ಸಂವಿಧಾನ ಕೇವಲ ಪುಸ್ತಕ ಅಥವಾ ಆಡಳಿತ ನಡೆಸುವ ಕಾನೂನು ಚೌಕಟ್ಟಲ್ಲ. ಅದೊಂದು ಜೀವನ ವಿಧಾನ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಆಶಯ ಅರಿತುಕೊಂಡು ದೈನಂದಿನ ಬದುಕಿನಲ್ಲಿ ಪಾಲಿಸಬೇಕು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಸಂವಿಧಾನದ ಪ್ರಮುಖ ಆಶಯಗಳಾಗಿವೆ.ಈ ನಾಲ್ಕು ಮೌಲ್ಯ ಕೇವಲ ಭಾಷಣ ಮತ್ತು ಪುಸ್ತಕಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನ ಭಾಗವಾಗಬೇಕು.ಅವುಗಳನ್ನು ಹೃದಯ ಪೂರ್ವಕವಾಗಿ ಪಾಲಿಸಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಆಶಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಮಾತನಾಡಿ, ಭಾರತದ ಸಂವಿಧಾನ ಆಡಳಿತದ ಕಾನೂನು ಗ್ರಂಥವಷ್ಟೇ ಅಲ್ಲ; ಅದು ದೇಶದ ಪ್ರತಿಯೊಬ್ಬ ನಾಗರಿಕನ ಶಕ್ತಿ, ಹಕ್ಕು ಮತ್ತು ಭವಿಷ್ಯದ ಭದ್ರತೆಯಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಮಾತನಾಡಿ,ಯುವಜನರಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಯುವ ಸಂಸತ್ ಆಯೋಜಿಸಲಾಗಿತ್ತು. ಜಿಲ್ಲಾ ಮಟ್ಟದ ಸ್ಪರ್ಧೆಯ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ ಒಬ್ಬರಂತೆ ಐವರು ವಿದ್ಯಾರ್ಥಿಗಳನ್ನು ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವ ಸಂಸತ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ ಕಳುಹಿಸಲಾಗಿದೆ. ರಾಜ್ಯದ 32 ಜಿಲ್ಲೆಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿದ್ಯಾರ್ಥಿ ಮಾರೇಶ್ ಅವರು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದರು. ಇದೇ ವೇಳೆ ಸಂವಿಧಾನದ ಪ್ರಸ್ತಾವನೆ ಬೋಧಿಸಲಾಯಿತು. ಕರ್ನಾಟಕ ನಗರಾಭಿವೃದ್ಧಿ ಮೂಲಸೌಕರ್ಯ ಹಾಗೂ ಹಣಕಾಸು ನಿಗಮದ ನಿರ್ದೇಶಕ ಎಚ್. ಹುಸೇನಪ್ಪ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕ ಎಚ್.ಸಿದ್ದೇಶ್, ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.