ಭಾರತಕ್ಕೆ ಸಂವಿಧಾನವೇ ಆಧಾರಸ್ತಂಭ: ನಿಖಿಲ ಕತ್ತಿ

KannadaprabhaNewsNetwork | Published : Jan 27, 2025 12:47 AM

ಸಾರಾಂಶ

ಸಂವಿಧಾನದ ಶ್ರೇಷ್ಠತೆ, ಆಶಯಗಳನ್ನು ಪಾಲಿಸುವ ಹೊಣೆಗಾರಿಕೆ ನಮ್ಮದು. ಏಕತೆ, ಭಾತೃತ್ವ, ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವೆಲ್ಲರೂ ಸಂಕಲ್ಪ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದ್ದು, ಅದಕ್ಕೆ ಸಂವಿಧಾನವೇ ಆಧಾರಸ್ತಂಭವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಂವಿಧಾನದ ಶ್ರೇಷ್ಠತೆ, ಆಶಯಗಳನ್ನು ಪಾಲಿಸುವ ಹೊಣೆಗಾರಿಕೆ ನಮ್ಮದು. ಏಕತೆ, ಭಾತೃತ್ವ, ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವೆಲ್ಲರೂ ಸಂಕಲ್ಪ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದ್ದು, ಅದಕ್ಕೆ ಸಂವಿಧಾನವೇ ಆಧಾರಸ್ತಂಭವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಇಲ್ಲಿನ ಎಸ್.ಕೆ.ಹೈಸ್ಕೂಲ್‌ನಲ್ಲಿ ತಾಲೂಕು ಆಡಳಿತ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರು ಸಶಕ್ತ ಸಂವಿಧಾನ ರಚಿಸಿದ್ದರಿಂದ ಎಲ್ಲರೂ ಮುಕ್ತವಾಗಿ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ. ಜಗತ್ತಿಗೇ ಮಾದರಿಯಾದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ, ಪ್ರಜಾಪ್ರಭುತ್ವ ಸಾಮಾಜಿಕ ಸಂಸ್ಥೆ. ಅದು ಜಾತಿ, ಧರ್ಮ, ಭಾಷೆ, ಲಿಂಗ, ಅಂತಸ್ತು ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನು ಮೀರಿದ, ವಿವಿಧತೆಯಲ್ಲಿ ಏಕತೆ ಸಾರುವ ವಿಶಾಲತೆಯನ್ನು ತನ್ನೊಳಗೆ ಅಡಗಿಸಿಕೊಂಡು, ವಿಶ್ವ ಭಾತೃತ್ವ, ಸಹೋದರತೆ, ಸಮಾನ ಅವಕಾಶಗಳ ಸರ್ವ ಸಮತೆ ಹಾಗೂ ಸಕಲ ಜೀವ ಸಂಕಲಕ್ಕೂ ಸದಾ ಒಳಿತನ್ನೇ ಬಯಸುವ ಒಂದು ವಿಶಿಷ್ಟವಾದ ಕಾನೂನು ಮತ್ತು ಆಡಳಿತ ವ್ಯವಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ತಾಪಂ ಇಒ ಟಿ.ಆರ್.ಮಲ್ಲಾಡದ, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ ಅವಲಕ್ಕಿ, ಸಿಪಿಐ ಮಹಾಂತೇಶ ಬಸ್ಸಾಪುರ, ತಾಲೂಕು ಅಧಿಕಾರಿಗಳಾದ ಪ್ರಭಾವತಿ ಪಾಟೀಲ, ಪ್ರವೀಣ ಮಾಡ್ಯಾಳ, ಎಸ್.ಎ.ಮಾಹುತ, ಎಚ್.ಹೊಳೆಪ್ಪ, ಸವಿತಾ ಹಲಕಿ, ಮುಖಂಡರಾದ ಉದಯ ಹುಕ್ಕೇರಿ, ರಾಜು ಮುನ್ನೋಳಿ, ಭೀಮಶಿ ಗೋರಖನಾಥ, ಶಹಜಹಾನ ಬಡಗಾಂವಿ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಹಾಗೂ ವಿವಿಧ ದಳಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಸಾರುವ ನೃತ್ಯ ಪ್ರದರ್ಶಿಸಿದರು.

Share this article