ಎಲ್ಲ ವರ್ಗಗಳಿಗೂ ಸಮಾನತೆ ಕಲ್ಪಿಸ ಸಂವಿಧಾನ

KannadaprabhaNewsNetwork |  
Published : Nov 28, 2025, 01:06 AM IST
೨೭ಕೆಎಲ್‌ಆರ್-೧೧ಕೋಲಾರದ ಜಿಲ್ಲಾಧಿಕಾರಿ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಂವಿಧಾನ ಶಿಲ್ಪಿ  ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪು?ರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ನಮ್ಮ ಭಾರತ ದೇಶದ ಬೃಹತ್ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ ಧರ್ಮದ ಜನರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ವಿಶ್ವದ ಬೃಹತ್‌ ಸಂವಿಧಾನ

ನಮ್ಮ ಸಂವಿಧಾನ ವಿಶ್ವದಲ್ಲೇ ದೊಡ್ಡ ಲಿಖಿತ ಸಂವಿಧಾನ. ಇದರ ಆಶಯವನ್ನು ತಿಳಿದು ಮೂಲಭೂತ ಹಕ್ಕು ಪಡೆದು, ಕರ್ತವ್ಯಗಳನ್ನು ಪ್ರತಿಯೊಬ್ಬ ಭಾರತೀಯರು ಪಾಲನೆ ಮಾಡಬೇಕು. ಸಂವಿಧಾನ ಎಲ್ಲ ವರ್ಗದ ಜನರಿಗೆ ಸಮಾನತೆಯನ್ನು ಒದಗಿಸುವ ಜತೆಗೆ ತಾರತಮ್ಯ ತೊಡೆದು ಹಾಕಲು ನೂರಾರು ಕಾನೂನುಗಳನ್ನು ರೂಪಿಸಿದ ಬೃಹತ್ ಮಾದರಿ ಸಂವಿಧಾನವಾಗಿ ನಿಂತಿದೆ ಎಂದರು.

ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನ ವಿಶ್ವದ ಶ್ರೇಷ್ಟ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದರು.ಸಂವಿಧಾನ ಕುರಿತು ಜಾಗೃತಿ ಮೂಡಿಸಿ

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಸಂವಿಧಾನ ರಚನಾ ಸಭೆಯಲ್ಲಿ ೨೫೦ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನು ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ದಿನ ಆಚರಿಸಲಾಗುತ್ತಿದೆ ಎಂದರು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ೬೯ ದೇಶ ಸುತ್ತಿ ಅಲ್ಲಿನ ಕಾನೂನಿನ ಸಮಗ್ರ ಅಧ್ಯಯನ ಮಾಡಿ, ಅನ್ಯದೇಶಗಳು ಮೆಚ್ಚಿಕೊಳ್ಳುವ ಅನನ್ಯವಾದ ಭಾರತೀಯ ಸಂವಿಧಾನದ ಕೊಡುಗೆ ನೀಡಿದ್ದಾರೆ. ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮೀಯರು ಹೇಗೆ ಬಾಳಬೇಕು ಎಂಬುದನ್ನು ಹೇಳುತ್ತವೆ. ಆದರೆ ಎಲ್ಲ ಧರ್ಮೀಯರು ಹೇಗೆ ಬಾಳಬೇಕು ಎಂಬುದನ್ನು ನಮ್ಮ ಸಂವಿಧಾನ ಮಾತ್ರ ಹೇಳುತ್ತದೆ ಎಂದರು.

ಸಂವಿಧಾನಕ್ಕೆ ೯೮ ತಿದ್ದುಪಡಿ

ಭಾರತದ ಸಂವಿಧಾನದಲ್ಲಿ ೪೪೮ ವಿಧಿಗಳು, ೨೫ ಭಾಗಗಳು, ೧೨ ಶೆಡ್ಯೂಲ್, ೫ ಅನುಬಂಧಗಳು ಹಾಗೂ ೯೮ ತಿದ್ದುಪಡಿಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ ೨೮೪ ಮಂದಿ ಸದಸ್ಯರಿದ್ದರು. ಅವರಲ್ಲಿ ೧೫ ಮಂದಿ ಮಹಿಳಾ ಸದಸ್ಯರಿದ್ದರು. ಅದರ ಕರಡನ್ನು ೧೯೪೯ರ ನವೆಂಬರ್ ತಿಂಗಳಿನಲ್ಲಿ ಸಲ್ಲಿಸಲಾಯಿತು. ಸಲ್ಲಿಸಿದ ಬಳಿಕವೂ ಅದನ್ನು ಪೂರ್ಣಗೊಳಿಸಲು ಮೂರು ವರ್ಷಬೇಕಾಯಿತು.ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ ೨೮೪ ಮಂದಿ ಸದಸ್ಯರು ೧೯೫೦ರ ಜನವರಿ ೨೪ರಂದು ಈ ದಾಖಲೆಗೆ ಸಹಿ ಮಾಡಿದರು. ೧೯೫೦ರ ಜನವರಿ ೨೬ರಂದು ಇದು ಅಸ್ತಿತ್ವಕ್ಕೆ ಬಂತು. ಭಾರತದ ರಾ?ಲಾಂಛನವನ್ನೂ ಅದೇ ದಿನ ಅಳವಡಿಸಿಕೊಳ್ಳಲಾಯಿತು. ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದರು.ಸ್ಪರ್ಧೆ ವಿಜೇತರಿಗೆ ಬಹುಮಾನ

ಸಂವಿಧಾನ ಜಾಗೃತಿ ಕುರಿತು ಶಾಲೆಗಳಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ಉತ್ತಮವಾಗಿ ಬರೆದಿದ್ದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ಹನೀಫ್, ಎಡಿಸಿ ಮಂಗಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಕುಂಡಿಯಲ್ಲಿ ಸಿಕ್ತು ಲೋಹದ ಹಣತೆ, ಮೂಳೆ : ರಿತ್ತಿ ಕುಟುಂಬಕ್ಕೆ ನಿವೇಶನ
ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ