ಹಗರಿಬೊಮ್ಮನಹಳ್ಳಿ: ಬ್ರಿಟಿಷರ ಆಳ್ವಿಕೆಯಿಂದ ದೇಶ ಸಾರ್ವಭೌಮ ಗಣರಾಜ್ಯವಾದ ನಂತರ 1950 ಜನವರಿ 26ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಯಿತು ಎಂದು ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಭಾರತದ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಇಡೀ ಭಾರತ ಒಂದು ಎಂದು ಭಾವನೆ ಮೂಡಿದ್ದು, ಈ ಗಣರಾಜ್ಯೋತ್ಸವದ ದಿನದಂದು. ನಮ್ಮ ಸಂವಿಧಾನ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ತಹಶೀಲ್ದಾರ್ ಆರ್.ಕವಿತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದೆ. ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ ಹೊಂದಿರುವ ಭಾರತ, ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಗೊಳಿಸಿದೆ. ಪ್ರತಿಯೊಬ್ಬರು ದೇಶದ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ಸರ್ವರಿಗೂ ಸಮಾನತೆಯನ್ನು ಒದಗಿಸಿದೆ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಪುರಸಭೆ ಸದಸ್ಯರಾದ ದೀಪಕ್, ಪವಾಡಿ ಹನುಮಂತಪ್ಪ, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಇಒ ಪರಮೇಶ್ವರಪ್ಪ, ತಾಲೂಕು ವೈದ್ಯಾಧಿಕಾರಿ ಪ್ರವೀಣ್, ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಕನ್ನಿಹಳ್ಳಿ ಚಂದ್ರಶೇಖರ ಇತರರಿದ್ದರು.
ಇದೇ ವೇಳೆ ವಿವಿಧ ಸೇವೆಯಲ್ಲಿ ಸಾಧನೆಗೈದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ, ದೇಶಾಭಿಮಾನಿ, ರೈತ ಗೀತೆಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.