ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ನಾನು ಶಾಸಕನಾಗಿದ್ದ ವೇಳೆ ಇಲ್ಲಿನ ನಿವಾಸಿಗಳ ಮನವಿ ಮೇರೆಗೆ ಬುದ್ಧ ವಿಹಾರ ಪ್ರಾರಂಭಿಸುವ ಭರವಸೆ ನೀಡಿದ್ದು, ಇಂದು ಬುದ್ಧ ಪೂರ್ಣಿಮೆಯಂದು ಅದನ್ನು ಪ್ರಾರಂಭಿಸಲಾಗಿದೆ. ನನ್ನ ಅವಧಿಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸ್ಮಾರಕಗಳನ್ನು ನಿರ್ಮಿಸಿದ ಸಂತಸ ನನಗಿದೆ ಎಂದರು.
ಪೂಜ್ಯ ಬಂತೇಧಮ್ಮಪಾಲರಿಂದ ಪ್ರಾರ್ಥನೆ: ಬುದ್ಧ ಪೂರ್ಣಿಮೆ ಅಂಗವಾಗಿ ಮಾಜಿ ಸಚಿವ ಎನ್. ಮಹೇಶ್ ಅವರ ವಂತಿಯಿಂದ ನಿರ್ಮಾಣವಾಗಿದ್ದ ಬುದ್ಧನ ಧ್ಯಾನ ಮಂದಿರವನ್ನು ಪೂಜ್ಯ ಬಂತೇ ಧಮ್ಮಪಾಲ, ಪೂಜ್ಯ ಬಂತೇ ಬೋದಿಪ್ರಿಯರವರು ಪ್ರಾರ್ಥನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಆನಂದ್ ಬಂತೇಜಿರವರು ವಿಡಿಯೋ ಮೂಲಕ ಶುಭ ಸಂದೇಶ ಸಾರಿದರು.ಈ ಸಂಧರ್ಭದಲ್ಲಿ ನಗರಸಭೆ ಸದಸ್ಯೆ ಕವಿತಾ ರಾಜೇಶ್, ಎನ್ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್, ಸಾಹಿತಿ ಮುಳ್ಳೂರು ಶಿವಮಲ್ಲು, ವಕೀಲ ರಾಜೇಂದ್ರ, ನಾಗರಾಜು, ಸಿದ್ದಪ್ಪಾಜಿ, ಜಗದೀಶ್ ಶಂಕನಪುರ, ಸಿದ್ದರಾಜು ಕೆಂಪನಪಾಳ್ಯ, ನಗರಸಭೆ ಮಾಜಿ ಸದಸ್ಯ ಮೂರ್ತಿ, ಯುವ ಮುಖಂಡ ಸಿದ್ದಪ್ಪಾಜಿ, ಶಂಕನಪುರ ಜಗದೀಶ್, ಬಜ್ಜಿ ರಮೇಶ್ ಇನ್ನಿತರರಿದ್ದರು.
ನುಡಿದಂತೆ ನಡೆದ ಮಾಜಿ ಸಚಿವ:ಕೊಳ್ಳೇಗಾಲದ 1ನೇ ವಾರ್ಡ್‌ನ ಸಿದ್ದಾರ್ಥ ನಗರದಲ್ಲಿ ಶಾಸಕರಾಗಿದ್ದ ವೇಳೆ ಕಳೆದ 2 ವರ್ಷಗಳ ಹಿಂದೆ ಬುದ್ಧ ಪೌರ್ಣಮಿಗೆ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಅಲ್ಲಿನ ನಿವಾಸಿಗಳು, ಕೆಲ ಬುದ್ಧನ ಅನುಯಾಯಿಗಳು ಇಲ್ಲೊಂದು ಬುದ್ದ ಮಂದಿರದ ಅಗತ್ಯವನ್ನು ಪ್ರಸ್ತಾಪಿಸಿದ್ದರು. ಶಾಸಕ ಮಹೇಶ್ ಬೇಟಿ ನೀಡಿದ ವೇಳೆ ಅಲ್ಲೊಂದು ಕಬ್ಬಿಣದ ಪುಟ್ಟ ಶೆಡ್‌ನಲ್ಲಿ ಬುದ್ಧನ ವಿಗ್ರಹವಿಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಇದನ್ನು ಮನಗಂಡ ಶಾಸಕರು ಖುದ್ದು ಲಕ್ಷಾಂತರ ರು.ಗಳನ್ನು ವ್ಯಯಿಸಿ ಬುದ್ಧ ಧ್ಯಾನ ಮಂದಿರ ನಿರ್ಮಿಸುವ ಮೂಲಕ 2 ವರ್ಷದೊಳಗೆ ಈಡೇರಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಬುದ್ಧನ ಉಪಾಸಕರು, ಅನುಯಾಯಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.