ಕುಂಟುತ್ತಾ ಸಾಗಿದೆ ಪೌರಕಾರ್ಮಿಕರ ವಸತಿ ಗೃಹಗಳ ನಿರ್ಮಾಣ

KannadaprabhaNewsNetwork | Published : Oct 16, 2023 1:45 AM

ಸಾರಾಂಶ

ಕುಂಟುತ್ತಾ ಸಾಗಿದೆ ಪೌರಕಾರ್ಮಿಕರ ವಸತಿ ಗೃಹಗಳ ನಿರ್ಮಾಣ
ಗೃಪಭಾಗ್ಯ ಯೋಜನೆಯಡಿ ಜಿ ಪ್ಲಸ್ ಮಾದರಿಯ 16 ಮನೆಗಳ ನಿರ್ಮಾಣ ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ ಇತ್ತೀಚೆಗಷ್ಟೇ ಸ್ವಚ್ಚ ಸರ್ವೇಕ್ಷಣ್ ಕಾರ್ಯಕ್ರಮದಡಿ, ಪುರಸಭೆ ಸದಸ್ಯರು, ಪೌರಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಗಳ ಸಂಪೂರ್ಣ ಸಹಕಾರ ದಿಂದ ತರೀಕೆರೆ ಪಟ್ಟಣವನ್ನು ಕಸಮುಕ್ತ ಪಟ್ಟಣವನ್ನಾಗಿಸುವಲ್ಲಿ ಹಗಲಿರುಳೂ ಶ್ರಮಿಸಿ ಯಶಸ್ಸು ಸಾಧಿಸುವಲ್ಲಿ ಧಿಟ್ಟ ಹೆಜ್ಜೆ ಇಟ್ಟು ಇಡೀ ರಾಜ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದ ತರೀಕೆರೆ ಪುರಸಭೆ ಇದೀಗ ಪೌರಕಾರ್ಮಿಕರಿಗೆ ವಿಶಾಲವಾದ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸಿ ಕೊಡುವುದರತ್ತ ವಿಶೇಷ ಗಮನ ಹರಿಸಿದೆ. ತರೀಕೆರೆ ಪುರಸಭೆಯಿಂದ ಪಟ್ಟಣದ ವಾರ್ಡ್ ನಂ.23ರ ಬಾಪೂಜಿ ಕಾಲೋನಿಯಲ್ಲಿ ಈ ಹಿಂದೆ ಪೌರಕಾರ್ಮಿಕರ ಮನೆಗಳಿದ್ದ ಸ್ಥಳದಲ್ಲೆ ಇದೀಗ ಜಿ ಪ್ಲಸ್ ಮಾದರಿಯಲ್ಲಿ ಮೇಲೊಂದು ಮತ್ತು ಕೆಳಗೊಂದು ಈ ರೀತಿ 16 ಮನೆಗಳನ್ನು ನಿರ್ಮಿಸುತ್ತಿದೆ, ಇನ್ನೇನು ಈ ಮನೆಗಳ ನಿರ್ಮಾಣ ಕಾಮಗಾರಿ ಮುಗಿಯುವ ಹಂತ ತಲುಪುತ್ತಿದೆ ಎನ್ನುವ ಆಶಾದಾಯಕ ಸಂದರ್ಭದಲ್ಲಿ ಈ ಮನೆಗಳ ನಿರ್ಮಾಣ ಕಾರ್ಯ ಮಾತ್ರ ಕುಂಟುತ್ತಲೆ ಸಾಗಿದೆ. ಜಿ. ಪ್ಲಸ್ ಮಾದರಿಯ ಮನೆಗಳನ್ನು ಪುರಸಭೆ ಪೌರಕಾರ್ಮಿಕರಿಗೆ ಮೀಸಲಿಟ್ಟಿದೆ. ಪೌರಕಾರ್ಮಿಕರು ತಮ್ಮ ನೌಕರಿಯಿಂದ ನಿವೃತ್ತಿ ನಂತರವು ಈ ಮನೆಗಳಲ್ಲೇ ವಾಸ ಮಾಡಬಹುದಾಗಿದೆ, ಈ ಮನೆಗಳಿಗೆ ನೀರು, ವಿದ್ಯುತ್, ರಸ್ತೆ, ಚರಂಡಿ ಇತ್ಯಾದಿ ಮೂಲಸೌಲಭ್ಯ ಒದಗಿಸಿ ಕೊಡಲಾಗುತ್ತಿದೆ. ತುಸು ವಿಶಾಲವಾದ ಅಳತೆಯಲ್ಲೇ ನಿರ್ಮಾಣವಾಗುತ್ತಿರುವ ಈ ಹೊಸ ಮನೆಗಳಲ್ಲಿ ಮುಂದುಗಡೆ ಒಂದು ಹಾಲ್, ಸಿಂಗಲ್ ಬೆಡ್ ರೂಮು, ಅಡಿಗೆ ಮನೆ, ಸ್ನಾನದ ಮನೆ, ಅಚ್ಚುಕಟ್ಟಾದ ಶೌಚಾಲಯ ಇತ್ಯಾದಿ ಎಲ್ಲ ಸೌಲಭ್ಯ ಒಳಗೊಂಡಂತೆ ನಿರ್ಮಾಣವಾಗುತ್ತಿದೆ. ಎಲ್ಲ 16 ಮನೆಗಳಿಗೆ ಉತ್ತಮ ಗಾಳಿ ಬೆಳಕು ಪ್ರವೇಶಿಸುವಂತಹ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಮನೆಗೆ 7.5 ಲಕ್ಷ ರು. ಗೃಹಭಾಗ್ಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಜಿ, ಪ್ಲಸ್ ಮಾದರಿಯ ಈ ಹೊಸ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರತಿ ಮನೆಗೆ 1.5 ಲಕ್ಷ ರು ಮತ್ತು ರಾಜ್ಯ ಸರ್ಕಾರ ಪ್ರತಿ ಮನೆಗೆ 6 ಲಕ್ಷ ರು .ಅರ್ಥಿಕ ನೆರವು ನೀಡುತ್ತಿದೆ. ಮನೆಗಳ ನಿರ್ಮಾಣ ಹೆಚ್ಚುವರಿಯಾದಲ್ಲಿ ಫಲಾನುಭವಿಗಳು ಭರಿಸುತ್ತಾರೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ---ಕೋಟ್--- ಆಶಯ ಈಡೇರಿಕೆ: ಶ್ರೀನಿವಾಸ್‌ ಇಡೀ ಪಟ್ಟಣವನ್ನು ಸ್ವಚ್ಚಗೊಳಿಸುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಹಗಲಿರುಳೂ ಶ್ರಮಿಸುತ್ತಿರುವ ನಮ್ಮ ಪೌರ ಕಾರ್ಮಿಕರಿಗೆ ಅಚ್ಚುಕಟ್ಟಾದ ಮನೆಗಳನ್ನು ನಿರ್ಮಿಸಿಕೊಡಬೇಕು ಎಂಬ ಆಶಯ ಈಡೇರುತ್ತಿರುವುದು ತುಂಬ ಸಂತೋಷ ತಂದಿದೆ. ಇನ್ನು 2-3 ತಿಂಗಳಿನಲ್ಲೇ ಪೌರಕಾರ್ಮಿಕರ ವಸತಿ ಗೃಹಗಳ ಉದ್ಘಾಟನಾ ಕಾರ್ಯ ನೆರವೇರಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ. ---ಕೋಟ್--- ಕಾಮಗಾರಿ ಪೂರ್ಣ ನಂತರ ಮನೆ ಹಸ್ತಾಂತರ ಪುರಸಭೆಯಿಂದ ಪೌರಕಾರ್ಮಿಕರ ವಸತಿ ಗೃಹಗಳು ನಿರ್ಮಾಣವಾಗುತ್ತಿರುವುದು ಸಂತೋಷ ತಂದಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಬಹುಕಾಲ ಬಾಳಿಕೆ ಬರುವಂತಹ ಮನೆಗಳನ್ನು ನಿರ್ಮಾಣ ಮಾಡಬೇಕು, ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ನಂತರ ಶಾಸಕ ಜಿ.ಎಚ್.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿ ಪೌರಕಾರ್ಮಿಕರ ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿ, ಮನೆಗಳ ಹಕ್ಕು ಪತ್ರ ಹಾಗೂ ನೂತನ ಮನೆಗಳನ್ನು ಹಸ್ತಾಂತರಗೊಳಿಸಲು ಸಂತೋಷವಾಗುತ್ತದೆ ಎಂದು ಪುರಸಬೆ ಅಧ್ಯಕ್ಷರು ಪರಮೇಶ್ ಹೇಳಿದ್ದಾರೆ. ---ಕೋಟ್--- ಶೀಘ್ರ ಮನೆ ನಿರ್ಮಾಣ 2021ರಲ್ಲೇ ಈ ಯೋಜನೆ ಜಾರಿಗೆ ಬಂದಿದ್ದರೂ ಕೋವಿಡ್ ಕಾರಣದಿಂದ ಮನೆಗಳ ನಿರ್ಮಾಣ ಕಾರ್ಯ ನಿಂತುಹೋಗಿತ್ತು. ಇದೀಗ ಮನೆಗಳ ನಿರ್ಮಾಣಕ್ಕೆ ಪುನಹ ಚಾಲನೆ ದೊರೆತಿದೆ. ಶೀಘ್ರ ಎಲ್ಲ ಮನೆಗಳ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ತಿಳಿಸಿದ್ದಾರೆ. ಒಟ್ಟಾರೆ 16 ಮನೆಗಳ ನಿರ್ಮಾಣ ಕಾರ್ಯ ಇದೀಗ ಶೇ.90ರಷ್ಟು ಮುಗಿಯುವ ಹಂತ ತಲುಪಿದ್ದು, ಶೀಘ್ರದಲ್ಲಿ ಉದ್ಘಾಟನಾ ಕಾರ್ಯ ಕೈಗೊಂಡು ಪೌರಕಾರ್ಮಿಕರಿಗೆ ನೂತನ ಮನೆಗಳು ದೊರಕಲೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. --------------- 15ಕೆಟಿಆರ್, ಕೆಃ1 ತರೀಕೆರೆಯಲ್ಲಿ ಪುರಸಭೆ ವತಿಯಿಂದ ಬಾಪೂಜಿ ಕಾಲೋನಿಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಾಣವಾಗುತ್ತಿರುವ ಜಿ ಪ್ಲಸ್ ಮಾದರಿಯ 16 ನೂತನ ಮನೆಗಳು. 15ಕೆಟಿಆರ್.ಕೆ 2ಃ ತರೀಕೆರೆಯಲ್ಲಿ ಪುರಸಭೆ ವತಿಯಿಂದ ಬಾಪೂಜಿ ಕಾಲೋನಿಯಲ್ಲಿ ಪೌರಕಾರ್ಮಿಕರಿಗಾಗಿ ನಿರ್ಮಾಣವಾಗುತ್ತಿರ್ುವ ಜಿ ಪ್ಲಸ್ ಮಾದರಿಯ 16 ನೂತನ ಮನೆಗಳು 15ಕೆಟಿಆರ್.ಕೆ3ಃ ಶಾಸಕ ಜಿ.ಹೆಚ್.ಶ್ರೀನಿವಾಸ್. 15ಕೆಟಿಆರ್.ಕೆ.4ಃ ಪರಮೇಶ್. ಪುರಸಭೆ ಅಧ್ಯಕ್ಷರು 15ಕೆಟಿಆಆರ್.ಕೆಃ5ಃ ಹೆಚ್.ಪ್ರಶಾಂತ್ ಪುರಸಭೆ ಮುಖ್ಯಾಧಿಕಾರಿ.

Share this article