ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.4ರಂದು ಸಂಜೆ 6 ಗಂಟೆ ಸುಮಾರು ನಾನು ಬೆಂಗಳೂರಿನಲ್ಲಿ ಇದ್ದಾಗ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ದೂರವಾಣಿ ಮಾಡಿದ್ದು ನಿಜ. ಆದರೆ, ಆಡಿಯೋದಲ್ಲಿರುವ ಕೆಲವು ವಿಷಯಗಳು ತಿರುಚಲಾಗಿದ್ದು, ಆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದರು.
ನೂತನ ಸಚಿವರಾಗಿ ವಿಜಯಾನಂದ ಕಾಶಪ್ಪನವರ ಪ್ರಮಾಣ ವಚನ ಸ್ವೀಕರಿಸಿದ ನಂತರ ನಾನು ಅವರನ್ನು ಭೇಟಿಯಾಗಿ ಅಭಿನಂದಿಸಿದ್ದೇನೆ. ಮಂತ್ರಿ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಆರ್.ಬಿ.ತಿಮ್ಮಾಪೂರ ಅವರಿಗೆ ಭೇಟಿಯಾಗಲು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದೇನೆ. ಆದರೆ, ತಿಮ್ಮಾಪೂರ ಅವರು ಮನೆಯಲ್ಲಿ ಇಲ್ಲ ಎಂದರು, ಆಗ ದೂರವಾಣಿಯಲ್ಲಿ ಕೆಲವು ವಿಷಯಗಳ ಕುರಿತು ಮಾತನಾಡಿದ್ದು, ಆದರೆ, ಆಡಿಯೋದಲ್ಲಿ ಇನ್ನೂ ಕೆಲವು ವಿಷಯಗಳ ಬಗ್ಗೆ ಇರುವುದು ಕೇಳಿದ್ದೇನೆ. ಅದಕ್ಕೆ ನನಗೆ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.ಆಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಇನ್ನೂ ನನಗೆ ಪಕ್ಷದ ಹೈಕಮಾಂಡ್ ವಿವರಣೆ ಕೇಳಿಲ್ಲ. ಪಕ್ಷವು ಯಾವುದೇ ನಿರ್ಧಾರ ಕೈಗೊಂಡರು ನಾನು ಅದಕ್ಕೆ ಬದ್ಧನಾಗಿದ್ದೇನೆ. ಪಕ್ಷವು ನನಗೆ ಸಾಕಷ್ಟು ಅವಕಾಶಗನ್ನು ನೀಡಿದೆ. ನಾನು ಪಕ್ಷಕ್ಕೆ ಎಂದಿಗೂ ದ್ರೋಹ ಮಾಡುವುದಿಲ್ಲ ಹಾಗೂ ಪಕ್ಷವನ್ನು ಬಿಡಲ್ಲ ಎಂದರು.
ಕಾಶಪ್ಪನವರ್ ಕುಟುಂಬದ ಜತೆಗೆ ಮೊದಲಿನಿಂದಲೂ ಉತ್ತಮ ಒಡನಾಟ ಇದ್ದು, ಅವರಿಗೆ ಮತ್ತು ನನಗೆ ಯಾವುದೇ ವೈಯಕ್ತಿಕ ಹಾಗೂ ಪಕ್ಷದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಗಿಲ್ಲ. 2008ರ ವಿಧಾನಸಭಾ ಚುನಾವಣೆಗೆ ಹುನಗುಂದ ಮತಕ್ಷೇತ್ರದಿಂದ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ವಿಜಯಾನಂದ ಕಾಶಪ್ಪನವರ್ ಹುನಗುಂದಕ್ಕೆ ನಂಜಯ್ಯನಮಠ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದರು. ಆದ್ದರಿಂದ ಅಂದಿನ ಚುನಾವಣೆಯಲ್ಲಿ ಭಾಗವಹಿಸದೇ ದೂರ ಉಳಿದಿದ್ದೆ. ನಂತರ ನಡೆದ ಹುನಗುಂದ ಮತಕ್ಷೇತ್ರದ ಎಲ್ಲ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ.