ಮುಂಡರಗಿ ನಾಡಿಗೆ ಅನ್ನದಾನೀಶ್ವರ ಮಹಾಶಿವಯೋಗಿಗಳ ಕೊಡುಗೆ ಅಪಾರ-ವಿವೇಕಾನಂದಗೌಡ ಪಾಟೀಲ

KannadaprabhaNewsNetwork |  
Published : May 05, 2025, 12:48 AM IST
4ಎಂಡಿಜಿ1, ಮುಂಡರಗಿ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿಯವರ 54ನೇ ಜನ್ಮದಿನೋತ್ಸವದ ಅಂಗವಾಗಿ ನಾಡಿನ ಹರ-ಗುರು-ಚರಮೂರ್ತಿಗಳು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಮುಂಡರಗಿ ನಾಡಿಗೆ ಅನ್ನದಾನೀಶ್ವರ ಮಹಾಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಮುಂಡರಗಿ:ಒಂದು ಕಾಲದಲ್ಲಿ ಮುಂಡರಗಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. 1969ರಲ್ಲಿ ಹತ್ತನೇ ಪೀಠಾಧಿಪತಿಯಾಗಿ ಬಂದ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿಯವರು ಶಿಕ್ಷಣ ಸಂಸ್ಥೆ ಬೆಳೆಸುವ ಮೂಲಕ ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲರೂ ಶಿಕ್ಷಣವಂತರಾಗಲು ಅವಕಾಶ ಮಾಡಿಕೊಟ್ಟರು. ಮುಂಡರಗಿ ನಾಡಿಗೆ ಅನ್ನದಾನೀಶ್ವರ ಮಹಾಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣದಲ್ಲಿ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಹಾಗೂ ಅನ್ನದಾನೀಶ್ವರ ಅಕ್ಕನ ಬಳಗ ಆಯೋಜಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ 84ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅನ್ನದಾನೀಶ್ವರ ಸ್ವಾಮೀಜಿಯವರು ಕೇವಲ ಪೂಜೆ, ಜಾತ್ರೆ, ಉತ್ಸವಗಳನ್ನು ಮಾಡುತ್ತಾ ಕೂಡಲಿಲ್ಲ. ಈ ಸಮಾಜ ಹಾಗೂ ಸಮಾಜದ ಜನತೆಯ ಕುರಿತು ಸಮಾಜಮುಖಿಯಾದ ಚಿಂತನೆಗಳನ್ನು ಮಾಡುತ್ತಾ ಸಾಹಿತ್ಯ, ಶಿಕ್ಷಣ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇಲ್ಲಿನ ಕನ್ನಡ ಸಾಹಿತ್ಯ ಭವನಕ್ಕೆ ಜಮೀನು ನೀಡಿ ಧನಸಹಾಯವನ್ನೂ ಸಹ ಮಾಡಿದ್ದಾರೆ. ಶ್ರೀಗಳು ಸಾಹಿತ್ಯದ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾರೆ ಎಂದರು.

ಮರೆಯದ ಮಾಣಿಕ್ಯ ಕೃತಿಕಾರ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ಶ್ರೀಗಳ ಸಾಧನೆ ಅಪಾರ. ಅವರ ಸಾಧನೆಯ ಬಗ್ಗೆ ಮಾತನಾಡುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ತುಂಬಿಸಿದಂತೆ. ಶ್ರೀಗಳು 10ನೇ ಪೀಠಾಧಿಪತಿಯಾಗಿ ಬಂದಾಗ ಬರಿದಾದ ಮಠವಿತ್ತು. ಅಂದಿನಿಂದ ಇಂದಿನವರೆಗೂ ಶ್ರೀಮಠವನ್ನು ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ಹಂತದಲ್ಲಿಯೂ ಅಭಿವೃದ್ದಿ ಪಡಿಸುತ್ತಾ ಬಂದಿದ್ದಾರೆ. ಮರೆಯದ ಮಾಣಿಕ್ಯ ಕೃತಿಯಲ್ಲಿ ಶ್ರೀಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಎಂದರು.

ಕನಕಗಿರಿಯ ಶ್ರೀ ಜ.ಡಾ. ಚೆನ್ನಮ್ಮಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಡರಗಿ ಶ್ರೀಗಳು ಯಾವತ್ತಿಗೂ ಪ್ರಚಾರ ಪ್ರಿಯರಲ್ಲ. ಎಲೆಮರೆಕಾಯಿಯಂತೆ ತಮ್ಮ ಕಾಯಕವನ್ನು ಮಾಡುತ್ತಾ ಬಂದಿದ್ದಾರೆ. ಭಗವಂತನು ಕೊಟ್ಟಿರುವ ತನು, ಮನ, ಧನವನ್ನು ಈ ನಾಡಿಗಾಗಿ ಅರ್ಪಣೆ ಮಾಡಿದ್ದಾರೆ. ತಮ್ಮ 84ನೇ ವಯಸ್ಸಿನಲ್ಲಿಯೂ ನಿತ್ಯ ಬೆಳಗ್ಗೆ 5 ಗಂಟೆಯಿಂದ ಸಂಜೆ 10 ಗಂಟೆಯವರೆಗೂ ನಿರಂತರವಾಗಿ ಓಡಾಡುವ ಮೂಲಕ ಈ ಮಠವನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಬೆ‍ಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮಂತಹ ಯುವ ಸ್ವಾಮೀಜಿಯವರಿಗೆ ಸದಾ ಮಾರ್ಗದರ್ಶಿಯಾಗಿದ್ದು, ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ನಾವೆಲ್ಲರೂ ಕೂಡಿ ಅದ್ಧೂರಿಯಿಂದ ಮಾಡುವಂತಾಗಲಿ ಎಂದರು.

ಸಾನಿಧ್ಯವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಮಾಡಬೇಕು. ಎಲ್ಲರೂ ಸುಖಿಯಾಗಿರುವ ಮೂಲಕ ಸ್ನೇಹಮಯಿ ಜೀವನ ನಡೆಸುವಂತಾಗಬೇಕು. ಅಂದಾಗ ಜೀವನ ಸುಖಮಯವಾಗುತ್ತದೆ. ಪ್ರತಿಯೊಬ್ಬರೂ ಜಂಗಮಕ್ಕೆ ಭಕ್ತಿ ಗೌರವ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿಗಳು, ಶ್ರೀಮಠದ ಭಕ್ತರು, ನಾಡಿನ ವಿವಿಧ ಮಠಗಳ ಹರ-ಗುರು-ಚರಮೂರ್ತಿಗಳು ಶ್ರೀಗಳಿಗೆ ಸನ್ಮಾನಿಸಿ ಗುರುಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರಿನ ಜಂಗಮ ಮಠದ ನಿಜಗುಣ ಸ್ವಾಮೀಜಿ, ಕುಕನೂರಿನ ಜ.ಡಾ. ಮಹಾದೇವ ಸ್ವಾಮೀಜಿ, ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಗೌ.ಕಾರ್ಯದರ್ಶಿ ಆರ್.ಆರ್. ಹೆಗಡಾಳ, ಎಂ.ಜಿ. ಗಚ್ಚಣ್ಣವರ, ಡಾ.ಅನ್ನದಾನಿ ಮೇಟಿ, ದೇವಪ್ಪ ರಾಮೇನಹಳ್ಳಿ, ಎಸ್.ಬಿ. ಹಿರೇಮಠ, ಬಸವರಾಜ ಬನ್ನಿಕೊಪ್ಪ, ಅಂದಪ್ಪ ಗೋಡಿ, ಪ್ರಾ.ಡಾ.ಡಿ.ಸಿ. ಮಠ, ನಾಗೇಶ ಹುಬ್ಬಳ್ಳಿ, ಕೆ.ವಿ. ಹಿರೇಮಠ, ಎಸ್.ಕೆ. ಹುಬ್ಬಳ್ಳಿ, ಅನುಪಕುಮಾರ ಹಂಚಿನಾಳ, ಕೈಲಾಸಪತಿ ಹಿರೇಮಠ, ವಿರೇಶ ಸಜ್ಜನರ, ರವೀಂದ್ರಗೌಡ ಪಾಟೀಲ, ಮಂಜುನಾಥ ಶಿವಶೆಟ್ಟರ, ಆಕಾಶ ಹಂಚಿನಾಳ ಸೇರಿದಂತೆ ಅಕ್ಕನ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಆರ್. ರಿತ್ತಿ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ