ಆರ್ಥಿಕ ಅಭಿವೃದ್ಧಿಗೆ ಸಹಕಾರಿ ರಂಗದ ಕೊಡುಗೆ ಅಪಾರ-ದಾನಪ್ಪಗೌಡ್ರ

KannadaprabhaNewsNetwork | Published : Sep 2, 2024 2:06 AM

ಸಾರಾಂಶ

ಸಹಕಾರಿ ಸಂಘಗಳು ಜನರ ವಿವಿಧ ಕ್ಷೇತ್ರಗಳು, ಚಟುವಟಿಕೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತವೆ ಎಂದು ಹಾವೇರಿಯ ಸಹಕಾರಿ ಒಕ್ಕೂಟದ ಸಿಇಓ ಎಂ.ಬಿ. ದಾನಪ್ಪ ಗೌಡ್ರು ಹೇಳಿದರು.

ಹಾವೇರಿ: ಸಹಕಾರಿ ಸಂಘಗಳು ಜನರ ವಿವಿಧ ಕ್ಷೇತ್ರಗಳು, ಚಟುವಟಿಕೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತವೆ ಎಂದು ಹಾವೇರಿಯ ಸಹಕಾರಿ ಒಕ್ಕೂಟದ ಸಿಇಓ ಎಂ.ಬಿ. ದಾನಪ್ಪ ಗೌಡ್ರು ಹೇಳಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಹಕಾರಿ ರಂಗದ ಕ್ಲಸ್ಟರ್ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನರ ಸಹಭಾಗಿತ್ವದಿಂದ ನಡೆಯುವ ಸಹಕಾರಿ ರಂಗವು ಜನರ ಸಮಾಜದ ಮತ್ತು ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಅನನ್ಯವಾದ ಕೊಡುಗೆಯನ್ನು ನೀಡಿದೆ. ಸಹಕಾರಿ ಸಂಘದ ಮಹತ್ವವನ್ನು ಅರಿತರೆ ಮತ್ತೊಬ್ಬರ ಮೇಲೆ ಅವಲಂಬನೆ ತಪ್ಪಿ ಸ್ವತಂತ್ರವಾಗಿ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬಹುದು. ಇಂದು ಲಕ್ಷಾಂತರ ಕುಟುಂಬಗಳು ಇದರ ಲಾಭ ಪಡೆದು ಬದುಕನ್ನು ರೂಪಿಸಿಕೊಂಡಿವೆ. ಇದಕ್ಕಾಗಿ ಶ್ರಮಿಸಿದ ಸಹಕಾರಿ ರಂಗದ ದಿಗ್ಗಜರನ್ನ ಸ್ಮರಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳೇ ಸಹಕಾರಿ ಸಂಘವನ್ನು ಸ್ಥಾಪಿಸಿಕೊಂಡು ಉಳಿತಾಯದ ಮಹತ್ವವನ್ನು ಅರಿಯಬಹುದು ಎಂದರು.ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಜನರೇ ರಚಿಸಿಕೊಂಡ ಸಹಕಾರಿ ಸಂಘಗಳು ಕಾನೂನಿನ ಕ್ಲಿಷ್ಟತೆಯನ್ನು ಸರಳಗೊಳಿಸಿ ಆರ್ಥಿಕವಾಗಿ ದುರ್ಬಲ ವರ್ಗಗಳನ್ನು ಕೇಂದ್ರೀಕರಿಸಿ ಸಾಲ ಸೌಲಭ್ಯಗಳನ್ನು ನೀಡಿ ಅವರ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತವೆ. ಇದರಿಂದ ಆ ಕುಟುಂಬಗಳು ಚೇತರಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಸಹಕಾರಿ ಸಂಘದ ಮೂಲ ತತ್ವವಾದ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ನೀತಿಯ ಅಡಿಯಲ್ಲಿ ಅನೇಕ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಇದರ ಮುಖ್ಯ ಗುರಿ ಜನರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸಿ ಉತ್ತಮ ಬದುಕನ್ನು ಕಟ್ಟುವುದರ ಜೊತೆಗೆ ಹಣದ ಉಳಿತಾಯದ ಮಹತ್ವವನ್ನ ತಿಳಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಇಂತಹ ಹಲವಾರು ಕ್ಷೇತ್ರಗಳ ಜ್ಞಾನ ಸಿಗಲೆಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ನಂತರ ಮಾತನಾಡಿದ ಉಪನ್ಯಾಸಕ ಮಂಜುನಾಥ ಹತ್ತಿಯವರ, ಸಹಕಾರಿ ಸಂಘಗಳು ಇನ್ನಿತರ ಬ್ಯಾಂಕುಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಜನರೇ ಪರಸ್ಪರ ಸಹಾಯ ಸಹಕಾರದಿಂದ ವರ್ತಿಸುವುದರಿಂದ ಆರ್ಥಿಕ ಸಬಲತೆ ಅಷ್ಟೇ ಅಲ್ಲದೆ ಮಾನವೀಯ ಮೌಲ್ಯಗಳನ್ನು ಪ್ರತಿಷ್ಠಾಪಿಸಬಹುದಾಗಿದೆ. ಭಾರತದಂತ ದೇಶಗಳಲ್ಲಿ ಇದು ಅತ್ಯಂತ ಯಶಸ್ವಿಯಾಗಿದ್ದು ಸಣ್ಣ ಸಣ್ಣ ಸಮುದಾಯ ಮತ್ತು ಗುಂಪುಗಳನ್ನು ಗುರಿಯಾಗಿಸಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇದರಿಂದ ಅವರಲ್ಲಿ ಹಣದ ಮಿತವ್ಯಯ ಮತ್ತು ಉಳಿತಾಯದ ಕಲ್ಪನೆ ಬರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಉಪನ್ಯಾಸಕ ಎಸ್.ಸಿ.ಮರಡಿ ಸಹಕಾರಿ ತತ್ವಗಳಂತೆ ನಾವು ನಡೆದುಕೊಂಡರೆ ಬಂಡವಾಳ ಶಾಹಿಗಳ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು ಎಂದರು.ಸಹಕಾರಿ ಯೂನಿಯನ್ ನ ಟಿ.ಎಫ್.ಅಗಡಿ, ಉಪನ್ಯಾಸಕರಾದ ಹೊಳಲಮ್ಮ, ರೂಪ ಪಾಟೀಲ ಇತರರು ಇದ್ದರು.ಕಲ್ಪನಾ ಎಂ.ಟಿ. ಪ್ರಾರ್ಥಿಸಿದರು. ಆಲದಮ್ಮ ಸ್ವಾಗತಿಸಿದರು. ಆಯೇಷಾ ನದಾಫ ನಿರೂಪಿಸಿ, ಜ್ಯೋತಿ ವಂದಿಸಿದರು.

Share this article