ಶೈಕ್ಷಣಿಕ ಕ್ಷೇತ್ರಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ: ಡಾ.ತೋಂಟದ ಸಿದ್ಧರಾಮ ಶ್ರೀ

KannadaprabhaNewsNetwork | Published : Feb 1, 2025 12:03 AM

ಸಾರಾಂಶ

ವಿಶ್ವಗುರು ಬಸವಣ್ಣನವರ ತತ್ವ, ಆದರ್ಶ, ಮೌಲ್ಯಗಳನ್ನು ಮತ್ತು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕಾಗಿ ಎಲ್ಲರು ಶ್ರಮೀಸಬೇಕು.

ಕನ್ನಡಪ್ರಭ ವಾರ್ತೆ ಕಮತಗಿ

ಕರ್ನಾಟಕದಲ್ಲಿ ಲಿಂಗಾಯತ ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯಗಳನ್ನು ಪ್ರಾರಂಭ ಮಾಡುವುದರ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿರುವುದನ್ನು ನಾವು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದರ ಜೊತೆಗೆ ಇವೆಲ್ಲವೂ ಬಸವಾದಿ ಶಿವಶರಣರ ಪರಂಪರೆಯನ್ನುವುದನ್ನು ನಾವೆಲ್ಲರೂ ಮರೆಯಬಾರದು ಎಂದು ಡಂಬಳ ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿನ ಹೊಳೆ ಹುಚ್ಚೇಶ್ವರ ರಥೋತ್ಸವದಲ್ಲಿ ಬೀದಿಯಲ್ಲಿ ಕಮತಪುರ ಉತ್ಸವ-2025 ಹಾಗೂ ಕಮತಗಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 13ನೇ ಪೀಠಾಧಿಪತಿಗಳಾದ ಹೊಳೆ ಹುಚ್ಚೇಶ್ವರ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವದ ಸಮಾರಂಭದ ಅಂಗವಾಗಿ ಜ.30ರಿಂದ ಫೆ.18ರವರೆಗೆ ಹಮ್ಮಿಕೊಂಡಿರುವ ಬಸವ ಪುರಾಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರ ತತ್ವ, ಆದರ್ಶ, ಮೌಲ್ಯಗಳನ್ನು ಮತ್ತು ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣಕ್ಕಾಗಿ ಎಲ್ಲರು ಶ್ರಮೀಸಬೇಕು ಎಂದು ತಿಳಿಸಿದರು.

ಕಮತಗಿ ಹೊಳೆ ಹುಚ್ಚೇಶ್ವರ ಮಠದ ಗುರುಪರಂಪರೆಯು ಅತ್ಯಂತ ಶ್ರೇಷ್ಠವಾಗಿರುವಂತಹದ್ದು. ಈ ಭಾಗದ ಭಕ್ತರ ಉದ್ಧಾರಕ್ಕಾಗಿ ಗುರುಪರಂಪರೆಯ ಎಲ್ಲ ಪೂಜ್ಯರು ಶ್ರಮಿಸಿರುವಂತಹದ್ದು ಇತಿಹಾಸ. ಅದರಲ್ಲೂ ವಿಶೇಷವಾಗಿ ಲಿಂ.12ನೇ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಪ್ರಸಾದ ನಿಲಯವನ್ನು ನಿರ್ಮಿಸಿ ಬಡ ಮಕ್ಕಳಿಗೆ ಶಿಕ್ಷಣ, ಅನ್ನದ ಆಸರೆ ನೀಡಿರುವಂತಹ ಕಾರ್ಯವನ್ನು ಮಾಡಿರುವುದು ಅತ್ಯಂತ ಸ್ಮರಣೀಯವಾದುದು. ಇವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಯನ್ನು ಇಂದು ಸದ್ಯದ ಪೀಠಾಧಿಕಾರಿಗಳಾದ 13ನೇ ಹೊಳೆ ಹುಚ್ಚೇಶ್ವರ ಶ್ರೀಗಳು ಹೆಮ್ಮರವಾಗಿ ಬೆಳೆಸಿದ್ದಾರೆ. ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಬಸವ ಪುರಾಣದಿಂದ ಬಸವಾದಿ ಶಿವಶರಣರ ಚರಿತ್ರೆಗಳನ್ನು, ಅವರ ಆದರ್ಶಗಳನ್ನು ಕೇಳಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಡಾ ಅನ್ನದಾನೇಶ್ವರ ಶಿವಯೋಗಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪುರಾಣ, ಪುಣ್ಯ ಕಥೆಗಳನ್ನು ನಾವೆಲ್ಲರೂ ದಿನ ನಿತ್ಯ ಕೇಳುತ್ತಾ ಹೋದರೆ ಆ ಪುರಾಣದ ಸವಿ, ಆನಂದ ಎಲ್ಲರಿಗೂ ಲಭಿಸುತ್ತದೆ. ಯಾವುದು ಹಳೆಯದಾಗುದಿಲ್ಲ. ಅದು ಪುರಾಣವಾಗಲಿ ಅಥವಾ ಬಸವಾದಿ ಶಿವಶರಣರ ಜೀವನ ಚರಿತ್ರೆಗಳನ್ನು ಕೇಳಿದಂತೆ ಹೊಸ ಹೊಸ ನ್ಯೂನ್ಯತೆ ಕೊಡುತ್ತದೆ. ಹೆಚ್ಚು ಜನರಲ್ಲಿ ಸಮಭಾವ, ಸಮಯಕ್ಯತೆಯನ್ನು ತಂದುಕೊಡುತ್ತದೆ. ಕಾಯಕ ನಿಷ್ಠೆಯನ್ನು ಬಸವ ಪುರಾಣದಿಂದ ತಿಳಿದುಕೊಳ್ಳವುದು ಅತಿ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ವೈ.ಮೇಟಿ ಮಾತನಾಡಿದರು. ಡಾ.ಕೊಟ್ಟೂರು ಶ್ರೀ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯ ಮುನವಳ್ಳಿ ಮುರಘೇಂದ್ರ ಶ್ರೀ, ಹೊಳೆ ಹುಚ್ಚೇಶ್ವರ ಶ್ರೀ, ಹೊಸಳ್ಳಿ ಅಭಿನವ ಬೂದೀಶ್ವರ ಶ್ರೀ,ಅಮೀನಗಡ ಶಂಕರ ರಾಜೇಂದ್ರ ಶ್ರೀ, ಕುಂದರಗಿ ಅಮರಸಿದ್ದೇಶ್ವರ ಶ್ರೀ, ಗುಳೇದಗುಡ್ಡ ಕಾಶೀನಾಥ ಶ್ರೀ, ಅರಳಿಕಟ್ಟಿ ಶಿವಮೂರ್ತಿ ಶ್ರೀ, ಕುಂಟೋಜಿ ಚನ್ನವೀರ ಶ್ರೀ, ಗುಳೇದಗುಡ್ಡ ನೀಲಕಂಠ ಶಿವಾಚಾರ್ಯ ಶ್ರೀ, ಕಮತಗಿ ಶಿವಕುಮಾರ ಶಿವಾಚಾರ್ಯ ಶ್ರೀ, ಗುಳೇದಗುಡ್ಡ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಶ್ರೀ, ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ, ಗುಳೇದಗುಡ್ಡ ಶಿವಶರಣ ದೇವರು, ಅಮರೇಶ್ವರ ದೇವರು, ಗಣೇಶ ಶಾಸ್ತ್ರೀಗಳು, ಕಮತಪುರ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಹುಚ್ಚಪ್ಪ ಸಿಂಹಾಸನ, ಎಸ್.ಎಸ್ ಮಂಕಣಿ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

ಬಸವ ಪುರಾಣವನ್ನು ಉಪ್ಪಿನ ಬೆಟಗೇರಿ ಕುಮಾರ ವಿರುಪಾಕ್ಷ ಶ್ರೀಗಳು ನಡೆಸಿಕೊಟ್ಟರು. ಸಂಗೀತ ಸೇವೆಯನ್ನು ದೇವರಾಜ ಯರಕಿಹಾಳ, ಸುರೇಶ ಹೂಗಾರ, ಯಲ್ಲಪ್ಪ ಗುಂಡಳ್ಳಿ ನಡೆಸಿಕೊಟ್ಟರು.

Share this article