ಮಾಗಡಿ: ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದ್ದು, ಮಠದ ಗುರುಗಳು ಸಂಸ್ಕಾರ ಆಚಾರ-ವಿಚಾರಗಳನ್ನು ಭಕ್ತರಿಗೆ ತಿಳಿಸಿ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಮಾರ್ಗದರ್ಶನ ನೀಡುತ್ತಾರೆ ಎಂದು ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುಡೇಮಾರನಹಳ್ಳಿ ಜಗಣ್ಣಯ್ಯನ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಶ್ರೀಮಠ ಸಾಕಷ್ಟು ಇತಿಹಾಸ ಹೊಂದಿದೆ. ಅದರಂತೆ ಶ್ರೀಮಠದ ಶ್ರೀಗಳು ಸಹ ಧಾರ್ಮಿಕ ಚಿಂತನೆ ಬಿತ್ತುವ ಜೊತೆಗೆ ವ್ಯವಸಾಯದಲ್ಲೂ ಸಾಧನೆ ಮಾಡಿ ಮಠವನ್ನು ಅಭಿವೃದ್ದಿಗೊಳಿಸಿದ್ದಾರೆ. ದೇವರಿಗೆ ತಿದ್ದುವ ಜವಾಬ್ದಾರಿ ಇಲ್ಲ, ಅದು ಮಠದ ಗುರುಗಳಿಗಿದೆ. ಅದರಿಂದ ಭಕ್ತರು ದೇವತೆಗಳಿಗಿಂತ ಗುರುಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಗುರುಗಳು ಬ್ರಹ್ಮ, ವಿಷ್ಣು, ಮಹೇಶ್ವರ, ರುದ್ರರು ಆಗಿ ಜ್ಞಾನವಂತರನ್ನಾಗಿ ಮಾಡುತ್ತಾರೆ ಎಂದರು.
ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, 300 ವರ್ಷಗಳ ತಪಸ್ಸು ಮಾಡಿ ಲಿಂಗೈಕ್ಯರಾದ ಬಸವರಾಜ ಸ್ವಾಮೀಜಿ ಸೇವೆ ಅನನ್ಯ. ನಾನು ಮಠಕ್ಕೆ ಬಂದಮೇಲೆ ಮಠವನ್ನು ಅಭಿವೃದ್ಧಿಗೊಳಿಸಿ ಈ ಭಾಗದಲ್ಲಿ ಧಾರ್ಮಿಕ ಚಿಂತನೆಗಳನ್ನು ಬಿತ್ತಿದ್ದೇನೆ. ಒಂದು ಕೋಟಿ ವೆಚ್ಚದಲ್ಲಿ ಗದ್ದುಗೆಗೆ ದೇವಾಲಯ ನಿರ್ಮಿಸಿದ್ದೇನೆ. ಶ್ರೀಮಠದಿಂದ ಶಿಕ್ಷಣ ಸಂಸ್ಥೆ ಆರಂಭಿಸುವ ಚಿಂತನೆ ಇದ್ದು, ಭಕ್ತರ ಸಲಹೆ ಪಡೆದು ನಿರ್ಧರಿಸಲಾಗುವುದು. ಕಳೆದ 10 ವರ್ಷದಿಂದ ಸಾಧನೆ ಮಾಡಿರುವ ಐವರಿಗೆ ಜಡೇಶ್ವರ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.ಜಡೇಶ್ವರ ಶ್ರೀ ಪ್ರಶಸ್ತಿ: ಎಂ.ರುದ್ರಮೂರ್ತಿ ಮರಣೋತ್ತರ, ಬಿ.ಜಿ.ಲೋಹಿತ್, ಶಿವರುದ್ರಮ್ಮ ವಿಜಯ್ ಕುಮಾರು, ಆರ್.ಚಲುವನಾರಾಯಣ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭದ್ರಗಿರಿ ಮಠದ ವೀರಭದ್ರ ಶಿವಚಾರ್ಯ ಸ್ವಾಮೀಜಿ, ಹಿರಿಯೂರು ಶ್ರೀಶೈಲ ಶಾಖಾ ಮಠದ ರೇಣುಕಾ ಶಿವಚಾರ್ಯ ಸ್ವಾಮೀಜಿ, ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಎಂ.ಡಿ.ಲಕ್ಷ್ಮಿನಾರಾಯಣ್, ವೀರಶೈವ ಮಹಾಸಭಾ ಅಧ್ಯಕ್ಷ ಬಿ.ಎಸ್. ಶಿವರುದ್ರಯ್ಯ, ಕೆ.ಕೃಷ್ಣಮೂರ್ತಿ, ವೀರಶೈವ ಮಂಡಳಿ ನಟರಾಜಪ್ಪ, ಪ್ರಕಾಶಪ್ಪ, ಮಹಂತೇಶ್, ರವಿ, ಶಿಲ್ಪಿ ಗಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಪುರಸಭಾ ಸದಸ್ಯರಾದ ಅನಿಲ್, ರೇಖಾ ನವೀನ್, ಡಾ.ನಾಗರಾಜಯ್ಯ, ಹೊಸಹಳ್ಳಿ ಶಿವರಾಜು, ಕಲ್ಲಯ್ಯನಪಾಳ್ಯ ಶಾಂತಾ, ಶುಭೋದಯ ಮಹೇಶ್, ಶಿಕ್ಷಕಿ ಶೋಭ, ಆರಾಧ್ಯ ಇತರರು ಭಾಗವಹಿಸಿದ್ದರು.