ಬೋವಿಗಳು ಕಲ್ಲು ಕುಟ್ಟುವುದು, ಬಾವಿ ತೋಡುವುದು, ಕೆರೆ-ಕಟ್ಟಡಗಳ ಅಣೆಕಟ್ಟುಗಳನ್ನು ಕಟ್ಟುವುದು, ಬಹುಮುಖ್ಯವಾಗಿ ಮಣ್ಣು ಕೆಲಸ ಹಾಗೂ ಕಲ್ಲುಗಳಲ್ಲಿ ಕೆತ್ತನೆ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.
ಹೊಸಪೇಟೆ: ಭಾರತೀಯ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಭೋವಿ ಸಮುದಾಯದ ಕೊಡುಗೆ ಅಪಾರವಾದದ್ದು. ಭೋವಿ ಸಮಾಜವನ್ನು ವಿಶಾಲ ದೃಷ್ಟಿಯಲ್ಲಿ ಗಮನಿಸಿದಾಗ ಅವರ ಅಪಾರ ನಿಷ್ಠೆ, ಭಕ್ತಿ, ಕೆಲಸದಲ್ಲಿ ಸದೃಢತೆ, ಪ್ರಾಮಾಣಿಕತೆಗಳು ಕಂಡುಬರುತ್ತವೆ. ಅವರು ಭಾರತ ಸಮಾಜದಲ್ಲಿ ಇತಿಹಾಸ ನಿರ್ಮಾಣಕ್ಕಾಗಿ ಕಲೆ, ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಹೆಚ್ಚು ಒತ್ತು ಕೊಟ್ಟು ಕಗ್ಗಲ್ಲುಗಳನ್ನು ಶಿಲಾಮೂರ್ತಿಗಳನ್ನಾಗಿ ಕೆತ್ತಿರುವುದು ನಿಜವಾದ ಆಧಾರವಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿ ರಮೇಶ ಎಂ. ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನಡೆದ ಸಮಾಜಮುಖಿ ತಿಂಗಳ ಮಾತು-13ರಲ್ಲಿ ಭೋವಿ ಸಮುದಾಯದ ಸಾಂಸ್ಕೃತಿಕ ಚಹರೆಗಳು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೋವಿಗಳು ಕಲ್ಲು ಕುಟ್ಟುವುದು, ಬಾವಿ ತೋಡುವುದು, ಕೆರೆ-ಕಟ್ಟಡಗಳ ಅಣೆಕಟ್ಟುಗಳನ್ನು ಕಟ್ಟುವುದು, ಬಹುಮುಖ್ಯವಾಗಿ ಮಣ್ಣು ಕೆಲಸ ಹಾಗೂ ಕಲ್ಲುಗಳಲ್ಲಿ ಕೆತ್ತನೆ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಭೋವಿ ಜನರು ಶಿಕ್ಷಣದ ಕೊರತೆಯಿಂದಾಗಿ ತಮ್ಮ ಮಕ್ಕಳನ್ನು ವಂಶ ಪಾರಂಪರ‍್ಯವಾಗಿ ತಮ್ಮ ಒರಟು ಕೆಲಸಗಳಾದ ಕಲ್ಲು ಬಂಡೆಗಳನ್ನು ಚಚ್ಚಿಕೊಂಡು, ಕೆರೆ, ಬಾವಿ, ಕಟ್ಟೆ, ಆಣೆಕಟ್ಟುಗಳನ್ನು ಕಟ್ಟಿಕೊಂಡು ಶ್ರಮಾಧಾರಿತ ಜೀವನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆರ್ಥಿಕವಾಗಿ ಭೋವಿ ಸಮಾಜದಲ್ಲಿ ಶೇ.2ರಷ್ಟು ಜನ ಮಾತ್ರ ಬೆಳವಣಿಗೆಯನ್ನು ಹೊಂದಿರುವುದು ಕಾಣಬಹುದಾಗಿದೆ ಎಂದರು.
ಹಂಪಿ ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎರ‍್ರಿಸ್ವಾಮಿ ಈ. ಮಾತನಾಡಿ, ಭೋವಿ ಸಮುದಾಯವು ನಮ್ಮ ದೇಶದಲ್ಲಿ ಮನೆ, ಕೆರೆ, ಬಾವಿ, ಡ್ಯಾಮ್ ಇತ್ಯಾದಿಗಳ ನಿರ್ಮಾಣದಲ್ಲಿ ಇವರು ಸಾಂಸ್ಕೃತಿಕವಾಗಿ ಹೇಗೆ ಬೆರೆತುಕೊಂಡಿರುವವರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಸಂಗತಿಯಾಗಿದೆ ಎಂದರು.
ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಂಪಿ ವಿವಿಯ ಹಿರಿಯ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಸೇರಿದಂತೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ತಿಪ್ಪೇಸ್ವಾಮಿ ಬಿ. ಸ್ವಾಗತಿಸಿದರು. ಮೋಹನಕುಮಾರ್ ಕೆ.ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.