ಹಳಿಯಾಳ: ಶರಣರ ವಚನ ಸಾಹಿತ್ಯ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯ ಹಾಗೂ ವೈಚಾರಿಕ ಕ್ರಾಂತಿಯ ಪ್ರತೀಕವಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಶರಣರ ಕೊಡುಗೆ ಅಪಾರವಾದುದು ಎಂದು ಚಿಂತಕರು ಹಾಗೂ ಉಪನ್ಯಾಸಕ ಕಾಳಿದಾಸ ಬಡಿಗೇರ ಹೇಳಿದರು.
ಮಹಿಳಾ ಸ್ವಾತಂತ್ರ್ಯ, ಜಾತಿ ವ್ಯವಸ್ಥೆಯ ನಿರ್ಮೂಲನೆ, ಕಾಯಕ ತತ್ವ, ದಾಸೋಹ, ಸಮಾನತೆ, ಸಾಮಾಜಿಕ ನ್ಯಾಯ, ಮೂಢನಂಬಿಕೆಗಳ ವಿರೋಧ, ಸ್ವತಂತ್ರ ಚಿಂತನೆ ಹಾಗೂ ಅನುಭವ ಮಂಟಪದ ಮುಕ್ತ ಅಭಿವ್ಯಕ್ತಿಯ ಪರಿಕಲ್ಪನೆಗಳು ಶರಣ ಸಾಹಿತ್ಯದ ಪ್ರಮುಖ ಕೊಡುಗೆಗಳಾಗಿವೆ. ಜನಸಾಮಾನ್ಯರ ಆಡುಭಾಷೆಯಲ್ಲಿ ರಚನೆಯಾದ ವಚನಗಳು ಸಮಾಜದ ಎಲ್ಲ ವರ್ಗದ ಜನರಿಗೂ ಸಾಹಿತ್ಯದ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿವೆ ಎಂದರು.
ಹಿರಿಯ ಶಿಕ್ಷಕ ವಿಠಲ ಕೋರ್ವೆಕರ್ ಮಾತನಾಡಿ, ಕಾವ್ಯ, ದಾಸ, ವಚನ, ಜಾನಪದ, ದಲಿತ ಹಾಗೂ ಬಂಡಾಯ ಸಾಹಿತ್ಯಗಳ ನಡುವೆ ವಚನ ಸಾಹಿತ್ಯವು ತನ್ನ ವಿಶಿಷ್ಟ ವೈಚಾರಿಕತೆ ಮತ್ತು ಸಾಮಾಜಿಕ ಕಳಕಳಿಯಿಂದ ವಿಶೇಷ ಸ್ಥಾನ ಪಡೆದಿದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮಂಗಲಾ ಅಂಗಡಿ ಅವರು, ಅನುಭವ ಮಂಟಪದಲ್ಲಿ ಮಹಿಳೆಯರಿಗೆ ದೊರೆತ ಸಮಾನ ಅವಕಾಶ, ಸ್ತ್ರೀ ಸ್ವಾತಂತ್ರ್ಯ ಹಾಗೂ ಸರ್ವಧರ್ಮ ಸಮಭಾವದ ಕುರಿತು ವಚನಗಳ ಮೂಲಕ ಚಿಂತನೆ ನಡೆಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕಮಲ್ ಸಿಕ್ವೇರಾ ಇದ್ದರು. ನ್ಯಾಯವಾದಿ ಮಹಾದೇವಿ ಅಂಗಡಿ ಪ್ರಾರ್ಥನೆ ಸಲ್ಲಿಸಿದರು. ಕಸಾಪ ಜಿಲ್ಲಾ ಪದಾಧಿಕಾರಿ ಸಿದ್ದಪ್ಪ ಬಿರಾದಾರ್ ಹಾಗೂ ಕಲ್ಪನಾ ಹುದ್ದಾರ್ ಕಾರ್ಯಕ್ರಮ ನಿರ್ವಹಿಸಿದರು. ವಿಚಾರಗೋಷ್ಠಿಯ ಕೊನೆಯಲ್ಲಿ ಚನ್ನಬಸವಣ್ಣನವರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.