ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ

KannadaprabhaNewsNetwork | Published : Sep 18, 2024 1:53 AM

ಸಾರಾಂಶ

ವಿಶ್ವಕರ್ಮ ಸಮಾಜದವರು ಏಕಾಗ್ರತೆಯಿಂದ ಶಿಲ್ಪಕಲೆಯಂತಹ ಅನೇಕ ವಿಶೇಷ ಕಲೆ ಕಲಿತು ಉತ್ತಮ ಪ್ರತಿಭೆ ಹೊಂದಿ ಸುಂದರ ರೂಪ ನೀಡುತ್ತಾರೆ.

ಗದಗ: ವಿಶ್ವಕರ್ಮ ಸಮಾಜದವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ವಿಶೇಷ ಕಲೆ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಚಿ ಹೇಳಿದರು.

ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜದವರು ಏಕಾಗ್ರತೆಯಿಂದ ಶಿಲ್ಪಕಲೆಯಂತಹ ಅನೇಕ ವಿಶೇಷ ಕಲೆ ಕಲಿತು ಉತ್ತಮ ಪ್ರತಿಭೆ ಹೊಂದಿ ಸುಂದರ ರೂಪ ನೀಡುತ್ತಾರೆ. ಪ್ರಸ್ತುತ ದಿನಮಾನದಲ್ಲಿ ಯಂತ್ರಗಳ ಹಾವಳಿ ಹೆಚ್ಚಾಗಿದ್ದು, ಮಾನವ ತಯಾರಿಸುತ್ತಿದ್ದ ಎಲ್ಲ ರೀತಿಯ ಶೈಲಿಗಳನ್ನು ಯಂತ್ರಗಳು ಸರಾಗವಾಗಿ ಮಾಡುತ್ತಿವೆ. ಹಾಗಾಗಿ ಈ ಕಲೆಗಳು ಕೇವಲ ಯಂತ್ರಗಳಿಗೆ ಸೀಮಿತ ಆಗದೆ ನಿಮ್ಮ ಪೂರ್ವಜರು ನೀಡಿದ ವಿದ್ಯೆಯನ್ನು ಇಂದಿನ ಯುವ ಪೀಳಿಗೆಗೆ ಕಲಿಸಿ ಈ ಕಲೆ ಉತ್ತಂಗಕ್ಕೆ ಬೆಳೆಸಬೇಕು. ಸಮಾಜದ ಸಂಘಟನೆ ದಿನ ದಿನಕ್ಕೆ ಬಲಗೊಂಡು ಸರ್ಕಾರದ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಶ್ರೀಗುರು ಭೀಮಾ ಶಂಕರ ವಿದ್ಯಾಪೀಠದ ಅಧ್ಯಕ್ಷ ಬಸವರಾಜ ಬಡಿಗೇರ ಮಾತನಾಡಿ, ಮೂಲತಃ ವಿಶ್ವಕರ್ಮ ಸಮಾಜದವರು ತ್ಯಾಗ ಸ್ವರೂಪಿಗಳು ಎಲ್ಲವನ್ನು ಕಳೆದುಕೊಂಡರು. ಸದಾ ಸಂತೋಷದಿಂದ ಇದ್ದು, ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟು ವಿಷಯದಲ್ಲಿ ಅಮೃತ ಕಂಡು, ಮಣ್ಣಿನಲ್ಲಿ ಮಾಣಿಕ್ಯ ಕಂಡವರು. ನಮ್ಮ ಸಮಾಜವೂ ತುಂಬಾ ಹಳೆಯದಾಗಿದ್ದು, ವೇದ ಪುರಾಣಕ್ಕೂ ಮೊದಲೇ ವಿಶ್ವಕರ್ಮ ಸಮಾಜದ ಅಸ್ತಿತ್ವ ಇತ್ತು. ಪ್ರಸ್ತುತ ದಿನಗಳಲ್ಲಿ ವಿಶ್ವ ಕರ್ಮ ಸಮಾಜದಲ್ಲಿ ಅಪಾರ ಜ್ಞಾನ ಮತ್ತು ಉತ್ತಮ ಪ್ರತಿಭೆ ಹೊಂದಿದವರಿದ್ದಾರೆ. ಹೀಗಾಗಿ ಎಲ್ಲರು ಒಂದಾಗಿ ಒಗ್ಗಟ್ಟಿನಿಂದ ಸಂಘಟನೆ ಗಟ್ಟಿಗೊಳಿಸಿ ಸರ್ಕಾರದಿಂದ ದೊರೆಯುವ ಸೌಕರ್ಯ ತೆಗೆದುಕೊಳ್ಳಬೇಕು ಎಂದರು.

ಈ ವೇಳೆ ನಗರಸಭೆ ಸದಸ್ಯ ಮೆಹಬೂಬಸಾಬ್‌ ನದಾಫ್‌, ಕುರ್ತಕೋಟಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಗೀರಿಶ. ಎಂ. ಡಬಾಲಿ, ಕೃಷ್ಣಗೌಡ ಪಾಟೀಲ, ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ಕಾರ್ಮಿಕ ಅಧಿಕಾರಿ ಶ್ರೀಶೈಲ ಸೊಮನಕಟ್ಟಿ, ಖಜಾನೆ ಇಲಾಖೆ ಉಪನಿರ್ದೇಶಕ ವಿ. ಹರಿನಾಥ ಬಾಬು ಸೇರಿದಂತೆ ಸಮಾಜದ ಗಣ್ಯರು ಇದ್ದರು. ಪ್ರಸಾದ ಸುತಾರ ಮತ್ತು ತಂಡದವರು ಸಂಗೀತ ಪ್ರಸ್ತುತ ಪಡಿಸಿದರು. ವಿಶ್ವನಾಥ ಕಮ್ಮಾರ ಕಾರ್ಯಕ್ರಮ ನಿರ್ವಹಿಸಿದರು.

Share this article