ಕನ್ನಡಪ್ರಭ ವಾರ್ತೆ ಅರಸೀಕೆರೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ನಗರಸಭೆಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅಭಿನಂದಿಸಿತು.ಈ ಕಾರ್ಯಕ್ರಮಕ್ಕೆ ತಾಲೂಕು ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಹಾಗೂ ಸದಸ್ಯರು ಮತ್ತು ಆಯುಕ್ತ ಕೃಷ್ಣಮೂರ್ತಿ ಸಾಕ್ಷಿಯಾದರು. ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಸಂತೋಷ್ ಕುಮಾರ್, ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು, ಪ್ರತಿಭೆಯನ್ನ ತೋರುತ್ತಿದ್ದಾರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಮೀಸಲಾತಿಯನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ, ವೈದ್ಯಕೀಯ ಶಿಕ್ಷಣ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶದವರೆಗೂ ಮಹಿಳೆ ಬೆಳೆದಿದ್ದಾಳೆ, ಸಾಹಿತ್ಯ ಕ್ಷೇತ್ರಕ್ಕೂ ಇವರ ಕೊಡುಗೆ ಇದೆ, ಇತಿಹಾಸದ ದಿನಗಳಲ್ಲೂ ಸಹ ಮಹಿಳೆ ತನ್ನ ಪರಾಕ್ರಮವನ್ನು ತೋರಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷ ಸಮೀವುಲ್ಲ ಹಿಂದೆ ಮಹಿಳೆಯರು ಹೆಚ್ಚು ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳು ದೊರೆಯುತ್ತಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ದುಡಿಯುತ್ತಿದ್ದಾರೆ, ಸರ್ಕಾರ ಮಹಿಳೆಯರಿಗಾಗಿ ಮಹಿಳಾ ದಿನವನ್ನು ಸಹ ಜಾರಿಗೆ ತಂದಿದೆ, ನಮ್ಮ ನಗರಸಭೆಯಲ್ಲಿಯೂ ಅನೇಕ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆಯಾಗಿದೆ. ಪ್ರತಿ ವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ ಇದಾಗಿದೆ ಎಂದರು.ವಿಶ್ವದಲ್ಲಿ ಅನೇಕ ಮಹಿಳೆಯರು ನಿರಂತರವಾಗಿ ವೈಯಕ್ತಿಕ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಮಹಿಳೆಯರು ತಮ್ಮ ಕಠಿಣ ಪರಿಶ್ರಮದ ಮೂಲಕ ಮೆಚ್ಚುಗೆ ಪಡಯುತ್ತಿದ್ದಾರೆ. ಈ ದಿನ ಮಹಿಳಾ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ವಿಶೇಷ ದಿನ ಇದಾಗಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ ಎಂದರು.
ನಗರಸಭೆ ಸದಸ್ಯೆ ಅನ್ನಪೂರ್ಣ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವ ತಿಳಿಸಿ, ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆಯನ್ನು ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ ಎಂದರು.ಧಾರ್ಮಿಕ ಮತ್ತು ಸಾಂಸ್ಕೃತಿಕ ಸೇವೆಯಲ್ಲಿ ಶಕುಂತಲಾ ಆನಂದ್, ರಾಜಕೀಯ ಕ್ಷೇತ್ರದಲ್ಲಿ ರೂಪಾ ಗುರುಮೂರ್ತಿ, ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ನಸೀಮಾ ಶಫಿ ಅವರನ್ನು ಅಭಿನಂದಿಸಲಾಯಿತು.
ಅಭಿನಂದಿತರಾಗಿ ಮಾತನಾಡಿದ ಶಕುಂತಲಾ ಆನಂದ್, ದೊಡ್ಡ ಸಾಧನೆಗಳನ್ನು ಮಾಡಿದಂತಹ ಮಹಿಳೆಯರನ್ನು ಮಹನೀಯರನ್ನು ಗುರುತಿಸುವುದನ್ನು ನಾವು ನೋಡುತ್ತಿದ್ದೆವು. ಇಂದು ಸಂಘ ಸಂಸ್ಥೆಗಳಲ್ಲಿ ಸಮಾಜದಲ್ಲಿ ಮತ್ತು ಮಹಿಳಾ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಅಭಿನಂದಿಸುತ್ತಿರುವುದರಿಂದ ಮಹಿಳೆಯರಿಗೆ ಇನ್ನೂ ಹೆಚ್ಚಿನ ಮತ್ತು ಆತ್ಮಸ್ಥೈರ್ಯ ಬರುತ್ತದೆ. ಅನೇಕ ಸಾಧನೆಗಳನ್ನು ಮಾಡಿರುವ ಮಹಿಳಾ ಸಾಧಕಿಯರನ್ನು ನಾವು ನೋಡಿದ್ದೇವೆ ಇಂದು ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ಸಹ ಎಲ್ಲಾ ಕ್ಷೇತ್ರದಲ್ಲಿಯೂ ನೀಡಲಾಗುತ್ತಿದೆ ಇದಕ್ಕೆ ನಾವು ಆಭಾರಿಯಾಗಿರಬೇಕು ಎಂದರು.ಸಭೆಯಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು ಸಿಬ್ಬಂದಿ, ಪೌರಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಕೋರಿದರು.