ಹುಬ್ಬಳ್ಳಿ: ಸಿಕ್ಕಾಪಟ್ಟೆ ಎನ್ನುವಷ್ಟು ಆಸ್ತಿತೆರಿಗೆ ಏರಿಸಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಇದೀಗ ಸಾರ್ವಜನಿಕರ ಆಕ್ರೋಶ, ಕೆಸಿಸಿಐನ ಟ್ಯಾಕ್ಸ್ ಕಟ್ಟಬೇಡಿ ಎಂಬ ಕರೆಗೆ ಮಣಿದು ಕೇವಲ ಸೆಸ್ ಹಾಗೂ ಶುಲ್ಕವನ್ನು ರದ್ದುಪಡಿಸಿದೆ.
ಯುಜಿಡಿ ಬಳಕೆದಾರರ ಶುಲ್ಕ (ಯುಜಿಡಿ ಯೂಜರ್ಸ್ ಚಾರ್ಜ್), ಹಾಗೂ ಘನತ್ಯಾಜ್ಯ ನಿರ್ವಹಣೆ ಮೇಲಿನ ಉಪಕರ (ಸೆಸ್) ರದ್ದುಗೊಳಿಸಲು ನಿರ್ಧರಿಸಿದೆ. ಜತೆಗೆ ಖಾಲಿ ನಿವೇಶನದ ಮೇಲಿನ ಘನತ್ಯಾಜ್ಯ ಬಳಕೆದಾರರ ಶುಲ್ಕವನ್ನು ಪ್ರತಿ ಚದುರ ಅಡಿಗೆ 50 ಪೈಸೆಯಿಂದ 25 ಪೈಸೆಗೆ ಇಳಿಸಿದೆ. ಆದರೆ, ಇದು ಈ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ.ಈ ನಡುವೆ ವಾಣಿಜ್ಯ ಹಾಗೂ ವಸತಿ ಮನೆಗಳ ಘನತ್ಯಾಜ್ಯ ಬಳಕೆದಾರರ ಶುಲ್ಕ ಮಾತ್ರ ಯಥಾಪ್ರಕಾರ ಇರಲಿದೆ. ಪಾಲಿಕೆಯ ಈ ನಿರ್ಧಾರದಿಂದ ಬರೋಬ್ಬರಿ ₹20-25 ಕೋಟಿಗಳಷ್ಟು ಆದಾಯ ಕಡಿಮೆಯಾಗಲಿದೆ. ಪಾಲಿಕೆಯ ಈ ನಿರ್ಧಾರವನ್ನು ಸ್ವಾಗತಿಸಿರುವ ಕೆಸಿಸಿಐ, ತೆರಿಗೆ ಬಹಿಷ್ಕಾರವನ್ನು ಹಿಂದಕ್ಕೆ ಪಡೆದು, ಎಲ್ಲರೂ ಟ್ಯಾಕ್ಸ್ ಪಾವತಿಸಿ ಎಂದು ತಿಳಿಸಿದೆ.
ತೆರಿಗೆ ಹೆಚ್ಚಳವಾಗಿರುವ ಬಗ್ಗೆ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳೊಂದಿಗೆ ಸೋಮವಾರ ಬೆಳಗ್ಗೆ ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯವನ್ನು ಮೇಯರ್ ರಾಮಪ್ಪ ಬಡಿಗೇರ್ ತಿಳಿಸಿದರು.ಮೊದಲು ಘನತ್ಯಾಜ್ಯ ನಿರ್ವಹಣೆ ಹಾಗೂ ಯುಜಿಡಿ ಸೆಸ್ ಹಾಕಲಾಗುತ್ತಿತ್ತು. ಅದನ್ನೀಗ ರದ್ದುಪಡಿಸಲಾಗಿದೆ. ಇನ್ನು ಘನತ್ಯಾಜ್ಯ ಬಳಕೆದಾರರ ಶುಲ್ಕದಲ್ಲಿ ಖಾಲಿ ನಿವೇಶನದ ಮೇಲೆ ಪ್ರತಿ ಚದುರ ಅಡಿಗೆ 50 ಪೈಸೆ ನಿರ್ಧರಿಸಲಾಗಿತ್ತು. ಅದನ್ನು 25 ಪೈಸೆಗೆ ಇಳಿಸಲಾಗಿದೆ. ಆದರೆ, ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು ಮಾತ್ರ ಘನತ್ಯಾಜ್ಯ ಬಳಕೆದಾರರ ಶುಲ್ಕವನ್ನು ಯಥಾಪ್ರಕಾರ ಪಾವತಿಸಲೇಬೇಕು ಎಂದರು.
ಕಡಿತಗೊಳಿಸಿರುವ ಸೆಸ್ ಮತ್ತು ಬಳಕೆದಾರರ ಶುಲ್ಕ ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷಕ್ಕೆ ಇದು ಹೆಚ್ಚಳ ಅಥವಾ ಕಡಿಮೆಯಾಗಬಹುದು. ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಕೈ ಬಿಡಲೂ ಬಹುದು. ಅದನ್ನು ಆಯಾ ಪರಿಸ್ಥಿತಿ ಆಧರಿಸಿ ಮುಂದುವರಿಯುತ್ತೇವೆ ಎಂದು ಸ್ಪಷ್ಟಪಡಿಸಿದರು.ಮುಂದಿನ ವರ್ಷ ಹೊಂದಾಣಿಕೆ: ಈಗಾಗಲೇ ಪಾವತಿಸಿರುವ ಟ್ಯಾಕ್ಸ್‌ನ ಹೆಚ್ಚುವರಿ ಮೊತ್ತವನ್ನು ಮುಂದಿನ ವರ್ಷದ ಟ್ಯಾಕ್ಸ್‌ನಲ್ಲಿ ಹೊಂದಾಣಿಕೆ ಮಾಡಲಾಗುವುದು. ಆನ್‌ಲೈನ್‌ನಲ್ಲಿ ಆಗಿರುವ ಲೋಪವನ್ನು ಸರಿಪಡಿಸಲಾಗುತ್ತದೆ. ಪರಿಷ್ಕೃತ ಮೊತ್ತವನ್ನು ಸರ್ವರ್‌ನಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ. ಯಾವುದೇ ವಾರ್ಡ್‌ನಲ್ಲಿ ಆಸ್ತಿಗಳಿದ್ದರೂ ಅವುಗಳ ಒಟ್ಟು ಮೊತ್ತವನ್ನು ಒಂದೆಡೆ ತುಂಬಲು ಅವಕಾಶ ಕಲ್ಪಿಸಲಾಗುತ್ತದೆ.
ಅಧಿಕಾರಿಗಳ ತಪ್ಪು: 2023ರಲ್ಲಿ ಸರ್ಕಾರ ಆಸ್ತಿಯ ಮಾರುಕಟ್ಟೆಯ ಮೌಲ್ಯ (ಸಬ್‌ರಿಜಿಸ್ಟರ್ ವ್ಯಾಲ್ಯು)ವನ್ನು ಹೆಚ್ಚಿಸಿದೆ. ಇದರನ್ವಯ 2024-25ರ ಸಾಲಿನ ಟ್ಯಾಕ್ಸ್‌ನಲ್ಲಿ ಅಳವಡಿಸಿಕೊಳ್ಳಬೇಕಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಅದು ಆಗಲಿಲ್ಲ. ಹಿಂದಿನ ಮತ್ತು ಪ್ರಸಕ್ತ ವರ್ಷದ್ದು ಸೇರಿಸಲಾಗಿದೆ. ಅಲ್ಲದೇ ಯುಜಿಡಿ, ಎಸ್‌ಡಬ್ಲ್ಯುಎಂ ಬಳಕೆದಾರರ ಶುಲ್ಕ ಹಾಗೂ ಸೆಸ್ ಮೊತ್ತ ಸೇರಿದ್ದರಿಂದ ಒಟ್ಟಾರೆ ತೆರಿಗೆ ಮೊತ್ತ ಹೆಚ್ಚಳವಾಗಿದೆ ಎಂದರು. ಹಾಗಾದರೆ ಅಧಿಕಾರಿಗಳು ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಏಕೆ ಶಿಕ್ಷೆ? ಎಂಬ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ಮೇಯರ್ ಹೋಗಲಿಲ್ಲ.ಆಸ್ತಿಕರ ಮಾತ್ರ ಇಳಿಸಲು ಸಾಧ್ಯವೇ ಇಲ್ಲ. ಸರ್ಕಾರಿ ನಿಯಮದಂತೆ ವಸೂಲಿ ಮಾಡಲೇಬೇಕು. ಆದರೆ, ಸೆಸ್ ಹಾಗೂ ಶುಲ್ಕ ಇಳಿಸಲು ನಮಗೆ ಅವಕಾಶವಿದೆ. ಅದನ್ನೇ ಇಳಿಸಿದ್ದೇವೆ ಎಂದರು.
ಸರ್ಕಾರದ ಆದೇಶದಂತೆ ಸೆಸ್ ಮತ್ತು ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಹಾಕಲೇಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮುಂದಿನ ವರ್ಷ ಯುಜಿಡಿ ಬಳಕೆದಾರರ ಶುಲ್ಕ ಮತ್ತು ಎಸ್‌ಡಬ್ಲ್ಯುಎಂ ಸೆಸ್ ಕೈ ಬಿಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಠರಾವು ಕಳುಹಿಸುತ್ತೇವೆ.ಕೈ ಬಿಟ್ಟಿದ್ದರಿಂದ ₹20- 25 ಕೋಟಿ ಆದಾಯ ಕಡಿಮೆಯಾಗಲಿದೆ. ಏ.10ರಿಂದ ಈವರೆಗೆ ₹17 ಕೋಟಿ ಟ್ಯಾಕ್ಸ್ ಸಂಗ್ರಹವಾಗಿದೆ. ಇದರಲ್ಲಿ ₹10 ಕೋಟಿ ಬಿಡುಗಡೆ ಮಾಡಿದ್ದು, ಗುತ್ತಿಗೆದಾರರ ಬಿಲ್ ಪಾವತಿಸಲಾಗುತ್ತಿದೆ. ಎಸ್‌ಡಬ್ಲ್ಯುಎಂ ಬಳಕೆದಾರರ ಶುಲ್ಕವನ್ನು ಖಾಲಿ ಸೈಟ್ ಸ್ವಚ್ಛತೆಗೆ ಬಳಸಿಕೊಳ್ಳುತೇವೆ. ಕಳೆದ ವರ್ಷ ₹7 ಕೋಟಿ ಖರ್ಚು ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಭಾನಾಯಕ ವೀರಣ್ಣ ಸವಡಿ, ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ, ಉಪಮೇಯರ್ ದುರ್ಗಮ್ಮ ಬಿಜವಾಡ, ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ಸುವರ್ಣ ಕಲ್ಲಕುಂಟ್ಲ ಇದ್ದರು.