ಮಹಿಳೆಯರಿಗೆ ದೇಶ ಪೂಜ್ಯನೀಯ ಭಾವ ಸಮರ್ಪಿಸಿದೆ-ಅನ್ನದಾನೀಶ್ವರ ಶ್ರೀ

KannadaprabhaNewsNetwork | Published : Mar 18, 2025 12:34 AM

ಸಾರಾಂಶ

ಭಾರತ ದೇಶವು ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಮಾತೃದೇವೋ ಭವ ಎನ್ನುವ ಪೂಜ್ಯನೀಯ ಭಾವವನ್ನು ಸಮರ್ಪಿಸಿದೆ ಎಂದು ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಮುಂಡರಗಿ: ಭಾರತ ದೇಶವು ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಮಾತೃದೇವೋ ಭವ ಎನ್ನುವ ಪೂಜ್ಯನೀಯ ಭಾವವನ್ನು ಸಮರ್ಪಿಸಿದೆ ಎಂದು ಮುಂಡರಗಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು. ಅವರು ಪಟ್ಟಣದ ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಜ. ಅನ್ನದಾನೀಶ್ವರ ಅಕ್ಕನ ಬಳಗದಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮಹಿಳೆಯರು ಧಾರ್ಮಿಕ ಆಚರಣೆಗಳಲ್ಲಿ ತೊಡಗಬೇಕು. ಅಂದಾಗ ಕುಟುಂಬದಲ್ಲಿರುವ ಸದಸ್ಯರಿಗೆ ಹಾಗೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಉದ್ಯೋಗದ ಕಡೆಯೂ ಸಹ ಮಹಿಳೆ ಗಮನ ಹರಿಸಿ ತನ್ಮೂಲಕ ಕುಟುಂಬಕ್ಕೆ ನೆರವಾಗಿ ತನ್ನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಹೊಳಲು ವಿರಕ್ತಮಠದ ಅಕ್ಕನಬಳಗದ ಅಧ್ಯಕ್ಷೆ ಶಾರದಾ ವೆಂಕಟಾಪುರ ಮಾತನಾಡಿ, ಲಿಂಗ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯ ಸಂದೇಶ ಸಾರಿದವರು ಸಾವತ್ರಿಬಾಯಿ ಫುಲೆ ಅವರು. ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗುವ ಮೂಲಕ ಪಿತೃಪ್ರಭುತ್ವವನ್ನು ಸೋಲಿಸಿ, ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಇಂದು ನಮಗೆಲ್ಲ ಆದರ್ಶರಾಗಿದ್ದಾರೆ ಎಂದರು. ಕನ್ನಿಕಾ ಪರಮೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಸ್ವಾತಿ ಅಳವಂಡಿ ಮಾತನಾಡಿ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯಗಳ ವಿರುದ್ಧ, ಮಹಿಳಾ ಸಂಘಟನೆಗಳು ಧ್ವನಿ ಎತ್ತಬೇಕು ಎಂದರು. ಅನ್ನದಾನೀಶ್ವರ ಅಕ್ಕನ ಬಳಗದ ಅಧ್ಯಕ್ಷೆ ಲಕ್ಷ್ಮೀದೇವಿ ಬೆಳವಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಚೆನ್ನವೀರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಅಕ್ಕನ ಬಳಗದ ಸದಸ್ಯರಿಂದ ಹೇಮರಡ್ಡಿ ಮಲ್ಲಮ್ಮ ರೂಪಕ ಪ್ರದರ್ಶನಗೊಂಡಿತು. ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜ್ಯೋತಿ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹಂಪಿಮಠ ಹಾಗೂ ಶ್ವೇತಾ ಹಿರೇಮಠ ನಿರೂಪಿಸಿದರು, ಗೀತಾ ಕೊರಡಕೇರಿ ವಂದಿಸಿದರು.

Share this article