ಲೋಕಾಯುಕ್ತ ತನಿಖೆ ಪಾರದರ್ಶಕ ನಿಷ್ಪಕ್ಷಪಾತವೆಂದು ಕೋರ್ಟ್‌ ಹೇಳಿದೆ

KannadaprabhaNewsNetwork | Published : Feb 8, 2025 12:31 AM

ಸಾರಾಂಶ

ತನಿಖಾ ಸಂಸ್ಥೆಗಳ ಸ್ವತಂತ್ರವನ್ನು ಪ್ರಶ್ನಿಸುವಂತಿಲ್ಲ. ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿದೆ. ತನಿಖಾ ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಹೋದರೆ ಸಿಬಿಐ ಮೇಲೂ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ. ಮುಡಾ ಪ್ರಕರಣದಲ್ಲಿ ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರದವರು ನಮ್ಮ ವಿರುದ್ಧ ಬರುವಂತೆ ಮಾಡಿದರು ಎಂದು ಎಂಎಲ್‌ಸಿ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ತನಿಖಾ ಸಂಸ್ಥೆಗಳ ಸ್ವತಂತ್ರವನ್ನು ಪ್ರಶ್ನಿಸುವಂತಿಲ್ಲ. ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿದೆ. ತನಿಖಾ ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಹೋದರೆ ಸಿಬಿಐ ಮೇಲೂ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ. ಮುಡಾ ಪ್ರಕರಣದಲ್ಲಿ ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರದವರು ನಮ್ಮ ವಿರುದ್ಧ ಬರುವಂತೆ ಮಾಡಿದರು ಎಂದು ಎಂಎಲ್‌ಸಿ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ವಿಚಾರ ಹಾಸನ ತಾಲೂಕಿನ ಅಟ್ಟಾವರ ಗ್ರಾಮದಲ್ಲಿ ಶುಕ್ರವಾರ ಶ್ರೀ ಬೀರಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಡಾ ಹಗರಣವನ್ನು ಏತಕ್ಕಾಗಿ ಸಿಬಿಐಗೆ ಕೊಡಬಾರದು ಎಂಬುದನ್ನು ಹೈಕೋರ್ಟ್ ಆದೇಶದಲ್ಲೇ ಹೇಳಿದೆ, ಲೋಕಾಯುಕ್ತ ಕೂಡ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ ಎಂದು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಆರೋಪಿಗಳಿಗೆ (ನಾವು) ಇಂತಹದ್ದೇ ತನಿಖಾ ಸಂಸ್ಥೆಗೆ ವಹಿಸಬೇಕು ಎನ್ನುವ ಅಧಿಕಾರ ಇಲ್ಲವೋ ಹಾಗೆಯೇ ದೂರು ಕೊಟ್ಟವರು ಕೂಡ ಇಂಥಾದ್ದೇ ತನಿಖಾ ಸಂಸ್ಥೆಗೆ ವಹಿಸಿ ಎಂದು ಹೇಳಲಾಗುವುದಿಲ್ಲ. ದೂರು ಕೊಡಬೇಕಾದರೆ ಲೋಕಾಯುಕ್ತಕ್ಕೆ ಕೊಡಿ ಅಂತ ಹೇಳಿದ್ದವರು ಈಗ ಲೋಕಾಯುಕ್ತ ಬೇಡ ಸಿಬಿಐಗೆ ಕೊಡಬೇಕು ಎಂದು ಹೇಳುವುದು ಸರಿಯಲ್ಲ, ಸಮಂಜಸವಲ್ಲ ಅಂತ ಕೋರ್ಟ್ ಕೂಡ ಹೇಳಿದೆ. ಲೋಕಾಯುಕ್ತ ತನಿಖೆ ಪಾರದರ್ಶಕ, ನಿಷ್ಪಕ್ಷಪಾತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗಾಗಿ ನಮಗೆ ರಿಲೀಫ್ ಸಿಕ್ಕಿದೆ. ಇವತ್ತಿನ ತೀರ್ಮಾನವಷ್ಟೇ ಅಲ್ಲ ಮುಂದಿನ ತೀರ್ಮಾನ ಕೂಡ ನಮ್ಮ ಪರವಾಗಿಯೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇ.ಡಿ. ದುರ್ಬಳಕೆ:

ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲೂ ಕೂಡ ಇ.ಡಿಯನ್ನು ಅಸ್ತ್ರವಾಗಿ ಬಳಸಿಕೊಂಡು ರಾಜಕೀಯ ಎದುರಾಳಿಗಳನ್ನು ತುಳಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಇ.ಡಿಯವರಿಗೆ ಎಷ್ಟೋ ಬಾರಿ ಕೋರ್ಟ್ ಛೀಮಾರಿ ಹಾಕಿದೆ. ಬರೀ ಆರೋಪ ಮಾಡ್ತಾರೆ, ಆದರೆ ಅದನ್ನು ಸಾಬೀತು ಮಾಡಲ್ಲ, ಕೇವಲ ರಾಜಕೀಯ ಎದುರಾಳಿಗಳಿಗೆ ಕಿರುಕುಳ, ಹಿಂಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಾಗಾಗಿ ಮುಂದೆ ಯಾವ ಕೋರ್ಟ್‌ಗೆ ಹೋದರು ಸತ್ಯ ನಮ್ಮ ಪರ ಇರುವುದರಿಂದ ನ್ಯಾಯ ನಮಗೆ ಸಿಕ್ಕೇ ಸಿಗುತ್ತದೆ ಎಂದರು.

ರಾಜ್ಯಪಾಲರ ಮನವೊಲಿಸುತ್ತೇವೆ:

ಮೈಕ್ರೋ‌ಫೈನಾನ್ಸ್‌ಗಳ ಮೇಲೆ ಕಡಿವಾಣ ಹಾಕುವ ಸುಗ್ರೀವಾಜ್ಞೆಯನ್ನು ಕ್ಯಾಬಿನೆಟ್‌ನಲ್ಲಿ ಪಾಸ್ ಮಾಡಿ ರಾಜ್ಯಪಾಲರ ಬಳಿ ಕಳುಹಿಸಲಾಗಿದೆ. ಆದರೆ, ಅವರು ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ನಮ್ಮ ಸರ್ಕಾರದ ಕಡೆಯಿಂದ ಹೋಗಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಯತೀಂದ್ರ ಅವರು ತಿಳಿಸಿದರು.

* ಬಾಕ್ಸ್‌: ಅಶೋಕ್‌ಗೆ ಜೋತಿಷ್ಯವೇ ಖಾಯಂ ಆಗಲಿದೆ: ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಬದಲಾಗುತ್ತಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಈಗಿನಿಂದ ಹೇಳುತ್ತಿಲ್ಲ, ಕಳೆದ ವರ್ಷದಿಂದಲೂ ಹೇಳುತ್ತಲೇ ಇದ್ದಾರೆ. ಮುಂದಿನ ತಿಂಗಳು ಬದಲಾಗ್ತಾರೆ, ಸೆಷನ್ ಮುಗಿದ ಮೇಲೆ ಬದಲಾಗುತ್ತಾರೆ ಅಂಥ ಹೋದ ವರ್ಷದಿಂದಲೂ ಜ್ಯೋತಿಷ್ಯ ಹೇಳಿಕೊಂಡು ಬರುತ್ತಿದ್ದಾರೆ. ಹಾಗಾಗಿ ಅವರು ಜ್ಯೋತಿಷ್ಯ ಹೇಳಿಕೊಂಡು ಬರಲಿ, ಕೊನೆಗೆ ಅದೇ ಕೆಲಸ ಅವರಿಗೆ ಖಾಯಂ ಆಗುತ್ತದೆ ಎಂದು ವ್ಯಂಗ್ಯವಾಡಿದರು.

Share this article