- ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮದಲ್ಲಿ ಎಸಿ ವಿ.ಅಭಿಷೇಕ್ ಅಭಿಮತ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿತ್ವದ ಆಡಳಿತದ ಫಲವಾಗಿ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ನಾಡಪ್ರಭು ಎನ್ನುವ ಬಿರುದಾಂಕಿತದಿಂದ ಇಡೀ ರಾಜ್ಯದ ಜನತೆ ಗೌರವಿಸುತ್ತಿದೆ ಎಂದು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದರು.ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲೂಕು ಅಡಳಿತ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಗರ, ಕೆರೆ-ಕಟ್ಟೆಗಳ ನಿರ್ಮಾಣ, ರಸ್ತೆ ಹಾಗೂ ಉದ್ಯಾನವನಗಳ ನಿರ್ಮಾಣ, ಕಲೆ, ಸಾಹಿತ್ಯ, ಶಿಕ್ಷಣಗಳಂತಹ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಬೆಂದಕಾಳೂರನ್ನು ಇಂದು ಬೃಹತ್ ಬೆಂಗಳೂರನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸೂಚನೆಯಂತೆ ಕೆಂಪೇಗೌಡರ ಜನ್ಮದಿನಾಚರಣೆ ಹಿನ್ನೆಲೆ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಆಶುಭಾಷಣ, ಚಿತ್ರಕಲೆ ಹಾಗೂ ಗಾಯನ ಸ್ಪರ್ಧೆಗಳನ್ನು ಆಯೋಜಿಸಿ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಗ್ರೇಡ್ -2 ತಹಶೀಲ್ದಾರ್ ಸುರೇಶ್, ಕ್ಷೇತ್ರ ಸಮನ್ವಯ ಅಧಿಕಾರಿ ತಿಪ್ಪೇಶಪ್ಪ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಣ ಇಲಾಖೆಯ ಬೀರೇಶ್ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.- - -
-27ಎಚ್.ಎಲ್.ಐ1: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಅಭಿಷೇಕ್ ಮಾತನಾಡಿದರು.