ಬೊಲೆರೋದಲ್ಲಿ ದೇವರ ಗೂಳಿ ಕದ್ದೊಯ್ದ ದುಷ್ಕರ್ಮಿಗಳು!

KannadaprabhaNewsNetwork |  
Published : Jul 02, 2026, 01:30 AM IST
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಬುಧವಾರ ಸಂಡೂರಿನ ಜೆಸ್ಕಾಂ ಕಚೇರಿಯ ಶಾಖಾಧಿಕಾರಿ ಎಚ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಸಂಗಾಹಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿದ್ದ ಕರಿಬಸವ ಹೆಸರಿನ ದೇವರಿಗೆ ಬಿಟ್ಟಿದ್ದ ಗೂಳಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಊರ ಜನರಿಗೆ ನಡೆದಾಡುವ ನಂದಿಯೇ ಆಗಿದ್ದ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ, ಹೋರಿಯ ಕೊರಳಿಗೆ ಹಗ್ಗ ಕಟ್ಟಿ, ಬೊಲೆರೋ ವಾಹನದಲ್ಲಿ ಕದ್ದೊಯ್ದ ಘಟನೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಚನ್ನಗಿರಿ ತಾ. ಸಂಗಾಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಕರಿಬಸವ ಹೆಸರಿನ ಗೂಳಿಯನ್ನು ಬಿಳಿಬಣ್ಣದ ಸರಕು ಸಾಗಣೆಯ ಬೊಲೆರೋ ವಾಹನದಲ್ಲಿ ಬಂದ ಮೂವರು ಮುಸುಕುಧಾರಿ ದುಷ್ಕರ್ಮಿಗಳ ಪೈಕಿ ಇಬ್ಬರು ದೇವಸ್ಥಾನಕ್ಕೆ ನುಗ್ಗಿ, ನಂದಿಯ ಕೊರಳಿಗೆ ಹಗ್ಗ ಕಟ್ಟಿ, ತಾಡಪಾಲು ಮುಚ್ಚಿದ್ದ ಬೊಲೆರೋ ವಾಹನದಲ್ಲಿ ಹತ್ತಿಸಿಕೊಂಡು ಕದ್ದೊಯ್ದಿದ್ದಾರೆ. ಈಗ ಈ ಘಟನೆ ಇಡೀ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ‍ವಾಗಿದೆ.

ಕರಿಬಸವ ಹೆಸರಿನ ಗೂಳಿಗೆ ಗ್ರಾಮಸ್ಥರು, ನೆರೆಹೊರೆಯ ಗ್ರಾಮಸ್ಥರು ಪೂಜಿಸುತ್ತಿದ್ದರು. ನಂದಿಯು ದೇವಸ್ಥಾನ, ಗ್ರಾಮದ ಬೀದಿಗಳು, ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಎಲ್ಲರಿಗೂ ದರ್ಶನ ನೀಡುತ್ತಿತ್ತು. ಮಕ್ಕಳಾದಿಯಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಕರಿಬಸವ ಹೆಸರಿನ ಗೂಳಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಕರಿಬಸವ ಗೂಳಿಯ ಕೊರಳಲ್ಲೊಂದು ದೊಡ್ಡ ಗಂಟೆ ಹಾಗೂ ಸರಪಳಿ ಇತ್ತು. ಇಬ್ಬರು ಮುಸುಕುಧಾರಿ ಜಾನುವಾರುಗಳ್ಳರು ಗೂಳಿ ಕೊರಳಿಗೆ ಹಗ್ಗ ಕಟ್ಟಿ, ಎಳೆದುಕೊಂಡು ಬರುವುದು, ವಾಹನದಲ್ಲಿ ಅದನ್ನು ಹತ್ತಿಸಿಕೊಂಡು, ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ನೋಡಿರುವ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇಡೀ ಊರಿನ ಜನರು ಭಕ್ತಿಯಿಂದ ಪೂಜಿಸುತ್ತಿದ್ದ ನಮ್ಮೂರಿನ ನಡೆದಾಡುವ ದೇವರನ್ನು ಕದ್ದೊಯ್ದವರಿಗೆ ಒಳ್ಳೆಯದನ್ನಂತೂ ದೇವರು ಮಾಡುವುದಿಲ್ಲ. ಊರಿನ ಬಸವೇಶ್ವರ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ಯಾರೇ ಕದ್ದೊಯ್ದಿದ್ದರೂ ಪೊಲೀಸರು ಗೂಳಿ ಪತ್ತೆ ಮಾಡಬೇಕು. ಗೂಳಿ ಕಳ್ಳರನ್ನು ಪತ್ತೆ ಮಾಡಿ, ನಮ್ಮ ಕೈಗೆ ಒಪ್ಪಿಸಬೇಕು ಎಂದು ಗ್ರಾಮದ ದೇವಸ್ಥಾನ ಸಮಿತಿ, ಭಕ್ತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರ ನಂದಿಯನ್ನು ಕದ್ದೊಯ್ದ ದುಷ್ಕರ್ಮಿಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನದ ಶೋಧಕ್ಕೆ ಮುಂದಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೌಗೋಳಿಕ ಸಂಪತ್ತು ಸದ್ಬಳಕೆ ಆದಾಗ ಮಾತ್ರವೇ ಅಭಿವೃದ್ಧಿ
ಕೆಪಿಟಿಸಿಎಲ್ ಖಾಸಗೀಕರಣ ಯತ್ನ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ ರೈತ ಸಂಘ