ಅಧಿಕಾರಿಗಳ ನಿರ್ಲಕ್ಷದಿಂದಲೇ ಕ್ರಸ್ಟ್ ಗೇಟ್ ಮುರಿದಿದೆ: ಸಿವಿಸಿ

KannadaprabhaNewsNetwork |  
Published : Aug 13, 2024, 12:55 AM IST
12ಕೆಪಿಎಲ್26 ತುಂಗಭದ್ರಾ ಜಲಾಶಯಕ್ಕೆ ಬಿಜೆಪಿ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಭೇಟಿ ನೀಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜೊತೆಗೆ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಘಟನೆ ದುರದೃಷ್ಟಕರ. ಈ ಘಟನೆ ತಡೆಯಬಹುದಿತ್ತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಘಟನೆ ದುರದೃಷ್ಟಕರ. ಈ ಘಟನೆ ತಡೆಯಬಹುದಿತ್ತು. ಈ ಹಿಂದೆ ಇದೇ ರೀತಿಯ ಘಟನೆಯಿಂದ ಪಾಠ ಕಲಿಯದೆ ಇರುವುದು ದುರಂತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದ್ದಾರೆ.‌

ಅಣೆಕಟ್ಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆ ಇಲ್ಲಿ ಎದ್ದು ಕಾಣುತ್ತಿದೆ. ಆದರೆ ಇದು ಆರೋಪ ಮಾಡುವ ಸಂದರ್ಭ ಅಲ್ಲ. ಈ ಕೂಡಲೇ ಈ ಭಾಗದ ರೈತರು, ವಿವಿಧ ಸಂಘಟನೆಗಳು, ಎಲ್ಲ ಪಕ್ಷಗಳ ಮುಖಂಡರ ಸಭೆ ಕರೆದು ರೈತರ ಹಾಗೂ ಬೆಳೆಗಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಿರುವ ಕ್ರಮಗಳನ್ನು ಅಂತಿಮಗೊಳಿಸಬೇಕು. ಮುಂದಿನ ದಿನಗಳಲ್ಲಿ ನೀರಿಲ್ಲದೆ ರೈತರಿಗೆ ನಷ್ಟವಾಗುವಂತಿದ್ದರೆ ಅದಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನನೆಗುದಿಗೆ ಬಿದ್ದಿರುವ ನವಲಿ ಸಮಾನಾಂತರ ಜಲಾಶಯದ ನಿರ್ಮಾಣದ ಭೂಮಿ ಪೂಜೆ ಶೀಘ್ರ ನಡೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜಿಲ್ಲೆಯಲ್ಲಿ ಬಹುತೇಕ ಎಲ್ಲರೂ ಕಾಂಗ್ರೆಸ್ ಶಾಸಕರಿದ್ದಾರೆ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಕೊಪ್ಪಳ ಜಿಲ್ಲೆಯವರೇ. ಇವರೆಲ್ಲರೂ ಸರ್ಕಾರದ ಮೇಲೆ ಒತ್ತಡ ತರಲಿ. ಹಾಗೂ ತಮ್ಮ ಬದ್ಧತೆ ಪ್ರದರ್ಶಿಸಿ ಈ ಭಾಗದ ಹಿತ ಕಾಯಲಿ ಎಂದರು.

ಈ ಸಂದರ್ಭ ಜೆಡಿಎಸ್ ಮುಖಂಡರಾದ ಈಶಪ್ಪ ಮಾದಿನೂರ, ಮಲ್ಲನಗೌಡ್ರ ಕೋನನಗೌಡ್ರ, ವಿರೇಶಗೌಡ ಚಿಕ್ಕಬಗನಾಳ, ಶರಣಪ್ಪ ಜಡಿ, ಮೂರ್ತೆಪ್ಪ ಗಿಣಗೇರಿ, ಯಮನಪ್ಪ ಕಟಿಗಿ, ಮಹಮ್ಮದ್ ಹುಸೇನ್ ಬಲ್ಲೆ, ಶ್ರೀನಿವಾಸ ಪೂಜಾರ, ಮಹೇಶ ಅಗಳಕೇರಾ, ಮಾರ್ಕೆoಡೆಪ್ಪ ಗಿಣಗೇರಿ ಸೇರಿದಂತೆ ಇತರರಿದ್ದರು.

ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಶ್ರೀನಾಥ:ಗಂಗಾವತಿ ಸಮೀಪದ ಸಾಣಾಪುರದ ಪ್ರವಾಸಿ ಮಂದಿರ ಹತ್ತಿರ ತುಂಗಭದ್ರಾ ನದಿಗೆ ಕಾಡಾ ಮಾಜಿ ಅಧ್ಯಕ್ಷ ಎಚ್.ಆರ್. ಶ್ರೀನಾಥ ಸೋಮವಾರ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿದ ಅವರು, ಹಂಪಿ ಮತ್ತು ಆನೆಗೊಂದಿ ಪ್ರದೇಶದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ದಕ್ಷಿಣ ಕಾಶಿ ಎಂದೇ ಖ್ಯಾತಿ ಗಳಿಸಿದೆ. ಇಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಕೈಗೊಂಡರೆ ದೇಶಕ್ಕೆ ಶಾಂತಿ ದೊರೆಯುವದಲ್ಲದೆ, ಕಳೆದ ಎರಡು ದಿನಗಳ ಹಿಂದೆ ತುಂಗಭದ್ರಾ ಜಲಾಶಯದಲ್ಲಿ ನಡೆದ ಘಟನೆ ಶಾಂತಿಗೊಳಿಸುತ್ತದೆ. ಕೂಡಲೇ ಜಲಾಶಯದಲ್ಲಿ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಂಡು ರೈತರಿಗೆ ನೀರು ಪೂರೈಸುವ ಕಾರ್ಯವಾಗಬೇಕೆಂದರು. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನಹರಿಸ ಬೇಕೆಂದರು.

ಈಗಾಗಲೇ ರೈತರು ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಬತ್ತ ನಾಟಿ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡು ನೀರಿನ ಸಾಮರ್ಥ್ಯ ನೋಡಿಕೊಂಡು ನೀರು ಬಿಡುಗಡೆಗೆ ಮುಂದಾಗಬೇಕೆಂದರು. ಈ ಸಂದರ್ಭ ಕಾರ್ಯಕರ್ತರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್