ಹುಬ್ಬಳ್ಳಿ:
ಸಂಸ್ಕೃತದಿಂದಲೇ ದೇಶದ ಸಂಸ್ಕೃತಿಯು ಉಳಿಯಬಲ್ಲದು. ಹಾಗಾಗಿ ಸಂಸ್ಕೃತ ಭಾಷೆಯ ಕಲಿಕೆಗೆ ಹೆಚ್ಚು ಗಮನ ನೀಡಬೇಕಾದ ಅಗತ್ಯವಿದೆ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯ ಮುರಳಿ ಕರ್ಜಗಿ ಹೇಳಿದರು.ಅವರು ಇಲ್ಲಿಯ ಶ್ರೀಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗ್ಟನ್ ಕನ್ನಡ, ಇಂಗ್ಲಿಷ್ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಸಂಸ್ಕೃತ ಭಾರತಿ ಉತ್ತರ ಕರ್ನಾಟಕ ಘಟಕದಿಂದ ಏರ್ಪಡಿಸಿದ್ದ ಒಂದು ವಾರದ ಸಂಸ್ಕೃತ ಭಾಷಾ ಬೋಧನ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿ, ಸಂಸ್ಕೃತವು ಬರೀ ಒಂದು ಭಾಷೆ ಅಲ್ಲ. ಅದು ಒಂದು ಜೀವನ ಶೈಲಿ ಎಂದರು.
ಸಂಸ್ಕೃತ ಭಾರತಿ ಶಿಕ್ಷಕ ಸತೀಶ ಮೂರೂರು ಮಾತನಾಡಿ, ಸಂಸ್ಕೃತ ಭಾಷೆ ಮರೆತಿದ್ದರಿಂದಲೇ ಸಂಸ್ಕೃತಿಯು ಕೂಡ ನಾಶದತ್ತ ಸಾಗಿದೆ. ಓದು, ಬರಹಗಳ ಮುನ್ನ ಭಾಷೆ ಬಾಯಲ್ಲಿ ಬರಬೇಕು. ಕಳೆದ 42 ವರ್ಷಗಳಿಂದ ಈ ನಿಟ್ಟಿನಲ್ಲಿ ಸಂಸ್ಕೃತ ಭಾರತಿ ಸಂಸ್ಥೆ ದೇಶ, ವಿದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸುತ್ತಿದೆ. ಹತ್ತು ದಿನಗಳ ಇಂತಹ ಶಿಬಿರದಲ್ಲಿ ಭಾಗವಹಿಸಿ ಯಾರಾದರೂ ಪ್ರಾಥಮಿಕವಾಗಿ ಭಾಷೆಯನ್ನು ಮಾತನಾಡಲು ಕಲಿಯಬಹುದು. ಸಂಸ್ಕೃತವು ಗ್ರಂಥಸ್ಥ ಭಾಷೆಯಾಗಲೀ, ಯಾರಿಗೋ ಸೀಮಿತವಾದ ಭಾಷೆ ಅಲ್ಲ. ಅದು ಮಾತನಾಡುವ ಭಾಷೆ ಎಂದು ಹೇಳಿದರು.ಮುಖ್ಯಾಧ್ಯಾಪಕಿ ಸೌಮ್ಯ ಪ್ರಭು ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಪ್ರಭಾಕರ ಬಿಲ್ಲೆ, ಸಂಸ್ಕೃತ ಭಾರತಿ ನಗರ ಸಂಯೋಜಕ ಪುಂಡಲೀಕ ಕವಳಿಕಟ್ಟಿ, ಶಿಬಿರ ಸಂಘಟಕ ಅರುಣ ಪ್ರಭು, ಶಿಕ್ಷಕ ಶಿವರಾಮ ಕುಲಕರ್ಣಿ, ಕೃಷ್ಣವೇಣಿ ಹೆಗಡೆ, ರಕ್ಷಾ ದೌಲತಾಬಾದ್, ಸರೋಜಾ ಬಮ್ಮಿಗಟ್ಟಿ, ಸಂಸ್ಕೃತ ಭಾರತಿ ಕಾರ್ಯಾಲಯ ಪ್ರಮುಖ ಗಣೇಶ ಸವಣೂರು, ಶಿಕ್ಷಕಿ ಅನುರಾಧಾ ಹರ್ಷ, ತನುಜಾ ಪಾಟೀಲ, ಸ್ನೇಹಾ ಜೋಶಿ, ಸುನೀತಾ ಕುಲಕರ್ಣಿ ಸೇರಿದಂತೆ ಹಲವರಿದ್ದರು.