ಕಲಿಯುಗದ ಕುಡುಕನ ನಿರ್ಗಮನ!

KannadaprabhaNewsNetwork |  
Published : Oct 14, 2025, 01:02 AM IST
46645654 | Kannada Prabha

ಸಾರಾಂಶ

ದೊಡ್ಡ ನಾಟಕ ಕಂಪನಿಯ ಮಾಲೀಕನ ಮಗನಾದರೂ ನೇಮು, ಫೇಮು ಪಡೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡತನದಿಂದ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ ಹೋಟೆಲ್‌ ಮಾಣಿಯಾಗಿ, ಲಾರಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಾ ಜೀವನದಲ್ಲಿ ಹಂತ, ಹಂತವಾಗಿ ಮೇಲೇರಿದವರು ರಾಜು ತಾಳಿಕೋಟಿ.

ಹುಬ್ಬಳ್ಳಿ:

"ಮುಜೆ ಪಿನೇ ಕಾ ಶೋಖಾ ನಹಿ

ಪಿತಾ ಹೂಂ ಗಮ್‌ ಬುಲಾನೆ ಕೆ ಲಿಯೇ...!

ಇದು ದುಃಖ ಮರೆಯಲೆಂದು ಕುಡಿಯುತ್ತೇನೆ ಎಂಬರ್ಥದ ಹಿಂದಿ ಸಿನಿಮಾದ ಹಾಡಿನ ಒಂದು ಸಾಲು. ಆದರೆ, ಉತ್ತರ ಕರ್ನಾಟಕದಲ್ಲಿ ಈ ಹಾಡು ಕೇಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ರಂಗ ಕಲಾವಿದ ರಾಜು ತಾಳಿಕೋಟಿ. ಕಲಿಯುಗದ ಕುಡುಕ ಎಂದೇ ಫೇಮಸ್ಸು ಆಗಿದ್ದ ರಾಜು ತಾಳಿಕೋಟಿ ನಗುತ್ತಲೇ ನಿರ್ಗಮಿಸಿದ್ದಾರೆ

ಹಾಗೆ ನೋಡಿದರೆ ಇದು ಹಿಂದಿಯಲ್ಲಿ ಖ್ಯಾತಿ ಪಡೆದಿದ್ದ ಹಾಡು. ಅದರ ಒಂದೆರಡು ಸಾಲನ್ನಷ್ಟೇ ಕಲಿಯುಗದ ಕುಡುಕ ನಾಟಕದಲ್ಲಿ ಬಳಸಿದ್ದ ರಾಜು ತಾಳಿಕೋಟಿ, ಈ ಹಾಡಿನಂತೆ ಬಡತನ, ದುಃಖ ಅವರ ಬದುಕಲ್ಲಿ ಹಾಸು ಹೊದ್ದಂತೆ ಇದ್ದವು.

ನಿರಂತರ ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ ಎಂಬುದನ್ನು ಬದುಕಿನ ಮೂಲಕವೇ ತೋರಿಸಿಕೊಟ್ಟವರು.

ದೊಡ್ಡ ನಾಟಕ ಕಂಪನಿಯ ಮಾಲೀಕನ ಮಗನಾದರೂ ನೇಮು, ಫೇಮು ಪಡೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡತನದಿಂದ ಶಿಕ್ಷಣವನ್ನೇ ಅರ್ಧಕ್ಕೆ ನಿಲ್ಲಿಸಿದ ಹೋಟೆಲ್‌ ಮಾಣಿಯಾಗಿ, ಲಾರಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಾ ಜೀವನದಲ್ಲಿ ಹಂತ, ಹಂತವಾಗಿ ಮೇಲೇರಿದವರು. ಬರೀ ರಂಗಭೂಮಿ ಅಷ್ಟೇ ಅಲ್ಲ. ಸಿನಿರಂಗದಲ್ಲೂ ಮಿಂಚಿ ತಮ್ಮದೇ ಆದ ಅಭಿಮಾನಿಗಳ ದೊಡ್ಡ ಬಳಗ ಸೃಷ್ಟಿಸಿಕೊಂಡವರು.

ಹುಟ್ಟು ಬಡತನ:

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆಯಲ್ಲಿ 1965ರಲ್ಲಿ ಜನಿಸಿದ ರಾಜು ತಾಳಿಕೋಟಿ ಅವರ ಮೂಲ ಹೆಸರು ರಾಜೇಸಾಬ್ ತಾಳಿಕೋಟಿ. ಮಕ್ತುಂಸಾಬ್ ಹಾಗೂ ಮೆಹಬೂಬ್ ಜಾನ್ ದಂಪತಿಯ ನಾಲ್ಕನೇ ಮಗ. 7ನೇ ವಯಸ್ಸಿನಲ್ಲೇ ತಂದೆಯ ಮಾಲೀಕತ್ವದ ಶ್ರೀ ಖಾಸ್ಸತೇಶ್ವರ ನಾಟ್ಯ ಸಂಘದಲ್ಲಿ ಪ್ರದರ್ಶನಗೊಂಡಿದ್ದ ಸತ್ಯ ಹರೀಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವನ ಪಾತ್ರದಲ್ಲಿ ನಟಿಸುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದರು.

ರೇಣುಕಾ ಯಲ್ಲಮ್ಮ ನಾಟಕದಲ್ಲಿ ಬಾಲ ಪರಶುರಾಮ, ಬಾಲಚಂದ್ರ ನಾಟಕದಲ್ಲಿ ಬಾಲಚಂದ್ರನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ತಂದೆಗೆ ಪಾರ್ಶ್ವವಾಯು, ತಾಯಿಗೆ ಕ್ಯಾನ್ಸರ್‌, ಬದುಕು ನಡೆಸಲು ಹೊಟೇಲ್ ಮಾಣಿ, ಲಾರಿ ಕ್ಲೀನರಾಗಿ ಕೆಲಸ ಮಾಡಿದರು. ನಾಲ್ಕನೆಯ ತರಗತಿಯಲ್ಲಿದ್ದಾಗಲೇ ತಂದೆ-ತಾಯಿ ಕಳೆದುಕೊಂಡರು. ಆ ಶಿಕ್ಷಣವನ್ನು ಅಷ್ಟಕ್ಕೆ ಮೊಟಕುಗೊಳಿಸುವುದು ಅನಿವಾರ್ಯವಾಯಿತು.

ಮುಂದೆ ಜೀವಿ ಕೃಷ್ಣರ ನಾಟಕ ಕಂಪನಿ, ಪಂಚಾಕ್ಷರಿ ವಿಜಯ ನಾಟ್ಯಸಂಘದಲ್ಲಿ ನೇಪಥ್ಯದ ಕಲಾವಿದನಾಗಿ ಸೇವೆ ಸಲ್ಲಿಸಿದರು. ಚಿತ್ತರಗಿ ನಾಟಕ ಕಂಪನಿಯ ಹಿರಿಯ ನಟರೊಬ್ಬರು ಕೈ ಕೊಟ್ಟಾಗ ತಾಳಿ ತಕರಾರು ನಾಟಕದಲ್ಲಿ ಕಿವುಡನ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.

ಕುಡುಕರ ಬದುಕನ್ನು ಹಾಸ್ಯಭರಿತವಾಗಿ ತೋರಿಸಿದ ಕಲಿಯುಗದ ಕುಡುಕ ಎಂಬ ನಾಟಕದ ಮೂಲಕ ಫೇಮಸ್ಸು ಆದರು. ರಾಜ್ಯದಲ್ಲಿ ಈ ನಾಟಕ 40 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ವಿಶೇಷ. ಚಿತ್ರನಟ ದಿ. ಸುಧೀರ ಅವರೊಂದಿಗೆ ಸಿಂಧೂರ ಲಕ್ಷ್ಮಣ, ಉಮಾಶ್ರೀ ಅವರೊಂದಿಗೆ ಬಸ್‌ ಕಂಡಕ್ಟರ್, ಸೊಸೆ ಹಾಕಿದ ಸವಾಲು ಸೇರಿದಂತೆ ಹಲವು ನಾಟಕಗಳಲ್ಲಿ ನಟಿಸಿದರು.

1998ರಲ್ಲಿ ಮತ್ತೆ ಶ್ರೀ ಖಾಸತೇಶ್ವರ ನಾಟ್ಯ ಸಂಘ ಪುನರ್‌ ಸ್ಥಾಪಿಸಿ ಶ್ರೀ ಗುರು ಖಾಸತೇಶ್ವರ ಮಹಾತ್ಮೆ, ಮುತ್ತೈದೆ ನೀ ಮತ್ತೊಮ್ಮೆ ಬಾ ಸೇರಿದಂತೆ ಹಲವು ನಾಟಕಗಳನ್ನು ಪ್ರಸ್ತುತ ಪಡೆಸಿದರು.

ಸಿನಿರಂಗಕ್ಕೆ ಎಂಟ್ರಿ:

ಕಲಿಯುಗದ ಕುಡುಕ ನಾಟಕದ ಬಳಿಕವೇ ಸಿನಿರಂಗ ಕೈ ಬಿಸಿ ಕರೆಯಿತು. ಹೆಂಡ್ತಿ ಅಂದ್ರೆ ಹೆಂಡ್ತಿ, ಮನಸಾರೆ, ಪಂಚರಂಗಿ, ಪರಮಾತ್ಮ, ಲಿಫ್ಟ್ ಕೊಡ್ಲಾ, ಜಾಕಿ, ಸುಗ್ರೀವ್, ಕಳ್ಳ-ಮಳ್ಳ- ಸುಳ್ಳ, ಭೀಮಾತೀರದಲ್ಲಿ ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕ್ಯಾಸೇಟ್ ಕಿಂಗ್, ಕನ್ನಡದ ಸೆಂದಿಲ್ ಬಿರುದು ಪಡೆದವರು ರಾಜು.

ಎಲ್ಲ ಪಾತ್ರಕ್ಕೂ ಸೈ ಎನ್ನುವ ಅವರು ವೃತ್ತಿರಂಗಭೂಮಿಯ ಅಪರೂಪದ ಕಲಾವಿದ. ಹ್ಯಾಂಗರ ಬರ್ರಿ ನಕ್ಕೋಂತ ಹೋಗ್ರಿ ಎಂಬುದು ರಾಜು ಅವರ ನಾಟಕ, ಅದೇ ರೀತಿ ನಗುತ್ತಲೇ ಇಹಲೋಕ ತ್ಯಜಿಸಿದಂತಾಗಿದೆ. ಇಂಥ ಕಲಾವಿದನನ್ನು ಕಳೆದುಕೊಂಡು ರಂಗಭೂಮಿ, ಸಿನಿರಂಗ ಬಡವಾಗಿರುವುದಂತೂ ಸತ್ಯ.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ