ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ತು
ಹಿಂದಿನ ಸರ್ಕಾರ ಹಾಳು ಮಾಡಿದ್ದ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಾವು ಸರಿಪಡಿಸುತ್ತಿದ್ದೇವೆ. ಕಳೆದ ಬಾರಿಯ ಬಜೆಟ್‌ಗಿಂತ ಈ ಬಾರಿಯ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಹಾಗೂ ರಾಜಸ್ವ ಕೊರತೆ ಕಡಿಮೆಯಾಗಿದೆ. ಮುಂದಿನ ವರ್ಷ ನಾನೇ ಶೇ.100ರಷ್ಟು ಉಳಿತಾಯ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಸುದೀರ್ಘ ಚರ್ಚೆಗೆ ಮಂಗಳವಾರ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಉತ್ತರ ನೀಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 2.70 ಲಕ್ಷ ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಅನುದಾನ ಇಲ್ಲದೆಯೇ ಮಂಜೂರಾತಿ ನೀಡಿದ್ದರಿಂದ ಆರ್ಥಿಕ ಸಂಕಷ್ಟ ಸೃಷ್ಟಿಯಾಯಿತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರದಡಿ 1.66 ಲಕ್ಷ ಕೋಟಿ ರು.ಗಳನ್ನು ಮಂಜೂರು ಮಾಡಿದರು. ಹಣವಿಲ್ಲದೇ ಮಂಜೂರು ಮಾಡಿದ್ದ ಕಾರಣ, ಬಾಕಿ ಬಿಲ್‌ಗಳು ಹೆಚ್ಚು ಉಳಿದವು. ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ ಹಳಿ ತಪ್ಪಿದ್ದ ರಾಜ್ಯದ ಆರ್ಥಿಕ ಶಿಸ್ತನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಈ ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ಸಾಲದ ಮಿತಿ, ವಿತ್ತೀಯ ಕೊರತೆ ನಿಗದಿತ ಮಿತಿಯಲ್ಲೇ ಇದೆ. ಕಳೆದ ಬಾರಿಗಿಂತ (26,127 ಕೋಟಿ ರು.) ಈ ಬಾರಿ ರಾಜಸ್ವ ಕೊರತೆ ಕಡಿಮೆಯಾಗಿದ್ದು, 19,262 ಕೋಟಿ ರು.ಗೆ ಇಳಿದಿದೆ ಎಂದರು.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದವರ ಆರೋಪಕ್ಕೆ ಉತ್ತರಿಸಿದ ಅವರು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಶೇ.24ಕ್ಕಿಂತ ಹೆಚ್ಚು ಜನರು ಎಸ್ಸಿ, ಎಸ್ಟಿ ಜನಾಂಗದವರಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.ವಿರೋಧಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಫೆಬ್ರವರಿ ಅಂತ್ಯದಲ್ಲಿ 76509 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2024-25 ರಲ್ಲಿ 52,009 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಇಡಲಾಗಿದ್ದು, ಅದರಲ್ಲಿ 41,560 ಕೋಟಿ ವೆಚ್ಚ ಮಾಡಲಾಗಿದೆ. ತೆರಿಗೆ ಹೆಚ್ಚಿಸುವುದು ನಿರಂತರ ಪ್ರಕ್ರಿಯೆ. ನಾವು ಎಲ್ಲ ಬಾಬ್ತುಗಳಿಂದ ಸುಮಾರು 7 ಸಾವಿರ ಕೋಟಿ ಬೆಲೆ ಏರಿಕೆ ಆಗಿರುವುದು ನಿಜ. ಆದರೆ ಬಿಜೆಪಿಯವರು 40 ಸಾವಿರ ಕೋಟಿ ತೆರಿಗೆ ಹೆಚ್ಚಿಸಿದ್ದಾರೆ ಎನ್ನುತ್ತಿರುವುದು ಪರಮ ಸುಳ್ಳು ಎಂದರು.
---ಬಾಕ್ಸ್
ಕೇಂದ್ರದಲ್ಲಿ ಬಿಜೆಪಿ ಧೂಳಿಪಟಮಾಡ್ತೀವಿ: ಸಿದ್ದರಾಮಯ್ಯ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದರೆ, ಬಿಜೆಪಿಯನ್ನು ಜನರು ಆಶೀರ್ವಾದವೇ ಮಾಡಿಲ್ಲ. ನಾವು ಕಳೆದ ಬಾರಿ ಕಾಂಗ್ರೆಸ್ ಕಡಿಮೆ ಗೆದ್ದಿದ್ದರೂ , ಈ ಬಾರಿ ಬಹುಮತ ಸಾಧಿಸಿದ್ದೇವೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಜನರು ನಮಗೆ ಕೇಂದ್ರದಲ್ಲಿ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದ ಬಿಜೆಪಿಯವರು ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಮೋದಿ ಕಿ ಗ್ಯಾರಂಟಿ ಎಂದು ನಮ್ಮನ್ನು ನಕಲು ಹೊಡೆದರು. ರಾಜಕೀಯದಲ್ಲಿ ಎಲ್ಲ ಪಕ್ಷಗಳಿಗೂ ಒಂದೊಂದು ಕಾಲ ಬರುತ್ತದೆ. ಕಳೆದ ಚುನಾವಣೆಗಿಂತ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಕಡಿಮೆ ಸ್ಥಾನ ಪಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣ ಧೂಳಿಪಟ ಮಾಡುತ್ತೇವೆ ಎಂದರು.ಇದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಮುಖ್ಯಸಚೇತಕ ರವಿಕುಮಾರ್, ಮುಂದಿನ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಬಿಜೆಪಿ ಗೆದ್ದುಬರಲಿದೆ, ಅವರೇ ಪ್ರಧಾನ ಮಂತ್ರಿಯಾಗುತ್ತಾರೆ ಎಂದರು.
-----ಬಾಕ್ಸ್
2026-27ಕ್ಕೆ ಹಾಲಿನ ಪ್ರೋತ್ಸಾಹಧನ 7ರು.ಗೆ ಹೆಚ್ಚಳಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಐದು ವರ್ಷ ಕಾಲಾವಕಾಶ ಇರುತ್ತದೆ. ಹಾಲು ಉತ್ಪಾದಕರಿಗೆ ನೀಡುತ್ತಿರುವ 5 ರು. ಸಹಾಯಧನವನ್ನು ನಾವು 7 ರು.ಗಳಿಗೆ ಹೆಚ್ಚಿಸುವ ಭರವಸೆ ನೀಡಿದ್ದೆವು. ಅದರಂತೆ ನಡೆದುಕೊಳ್ಳುತ್ತೇವೆ. ಆದರೆ, ಹಿಂದಿನ ಬಿಜೆಪಿ ಸರ್ಕಾರದವರು 600 ಕೋಟಿ ರು.ಗಳಷ್ಟು ಸಹಾಯಧನವನ್ನು ಬಾಕಿ ಇರಿಸಿ ಹೋಗಿದ್ದಾರೆ. ಅದೆಲ್ಲವನ್ನೂ ಮುಂದಿನ ವರ್ಷದೊಳಗೆ ಬಾಕಿ ನೀಡಲಾಗುವುದು. 2026-27ನೇ ಸಾಲಿನಲ್ಲಿ ಸಹಾಯಧನವನ್ನು 7 ರು.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.ಬಾಕ್ಸ್9 ವಿವಿ ಮುಚ್ಚಲ್ಲ ಎಂದಿಲ್ಲ, ವರದಿ ಪರಿಶೀಲಿಸಿ ಕ್ರಮಹಿಂದಿನ ಸರ್ಕಾರದಲ್ಲಿ ಆರಂಭಗೊಂಡ ಒಂಬತ್ತು ವಿಶ್ವವಿದ್ಯಾಲಯಗಳ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ನೀಡುವ ವರದಿ ಆಧರಿಸಿ ಅವುಗಳನ್ನು ಏನು ಮಾಡಬೇಕೆಂಬ ಬಗ್ಗೆ ಸೂಕ್ತ ನಿರ್ಧಾರ ಮಾಡಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. 2013ರಲ್ಲಿ ಬಿಜೆಪಿಯವರು ಕೂಡಲಸಂಗಮದಲ್ಲಿ ಪ್ರತಿ ವರ್ಷ 10 ಸಾವಿರ ಕೋಟಿಗಳನ್ನು ನೀರಾವರಿಗೆ ಇಡುತ್ತೇವೆ ಎಂದಿದ್ದರು, ಆದರೆ ನಾಲ್ಕು ವರ್ಷ ಪ್ರತಿ ವರ್ಷ ಕೇವಲ ಸರಾಸರಿ 16 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಮಹದಾಯಿ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಐತೀರ್ಪು ಬಂದು 13 ವರ್ಷಗಳಾಗಿದೆ, ಆದರೆ ಕೇಂದ್ರ ಇದುವರೆಗೂ ಅಧಿಸೂಚನೆ ಹೊರಡಿಸಲಿಲ್ಲ ಎಂದು ತಿರುಗೇಟು ನೀಡಿದರು.