ಹುನ್ನೂರಲ್ಲಿ ಆರಂಭವಾಗದ ಅಭಿವೃದ್ಧಿ ಹಬ್ಬ

KannadaprabhaNewsNetwork |  
Published : Sep 26, 2025, 01:03 AM IST
ಹುನ್ನೂರು ಗ್ರಾಮದ ಜೆಎಂಎಂ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ನೀರು ಸರಬರಾಜಿನ ಕೊಳಾಯಿ ಮುರಿದು ಹೋಗಿದೆ.  | Kannada Prabha

ಸಾರಾಂಶ

ಜಮಖಂಡಿ ನಗರಕ್ಕೆ ಹೊಂದಿಕೊಂಡಿರುವ ಹುನ್ನೂರು ಗ್ರಾಮ 20 ಸಾವಿರ ಜನಸಂಖ್ಯೆ ಹೊಂದಿದ್ದು, 10 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಜಿಪಂ ಕ್ಷೇತ್ರವಾಗಿರುವ ಹುನ್ನೂರು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರಕ್ಕೆ ಹೊಂದಿಕೊಂಡಿರುವ ಹುನ್ನೂರು ಗ್ರಾಮ 20 ಸಾವಿರ ಜನಸಂಖ್ಯೆ ಹೊಂದಿದ್ದು,10 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಪ್ರತಿನಿತ್ಯ ರಬಕವಿ, ಬನಹಟ್ಟಿ, ಅಥಣಿ, ಕುಡಚಿ, ಗೋಕಾಕ, ಮಿರಜ್‌, ಕಾಗವಾಡ, ಕೊಲ್ಲಾಪುರಗಳಿಗೆ ತೆರಳುವ ನೂರಾರು ವಾಹನಗಳು ಹುನ್ನೂರಿನ ಮೂಲಕ ಚಲಿಸುತ್ತವೆ. ಜಿಪಂ ಕ್ಷೇತ್ರವಾಗಿರುವ ಹುನ್ನೂರು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 2 ಮತ್ತು 3ನೇ ವಾರ್ಡಿನಲ್ಲಿ ನಳಗಳನ್ನು ಜೋಡಿಸುವ ಕಾರ್ಯ ಮುಗಿದಿದ್ದರೆ, ಉಳಿದ ಕೆಲವು ವಾರ್ಡ್‌ಗಳಲ್ಲಿ ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಚಾವಡಿ ಗಲ್ಲಿ, ಬಸವೇಶ್ವರ ಗಲ್ಲಿ, ಗ್ರಾಮದೇವಿ ಗಲ್ಲಿಗಳಲ್ಲಿ ಕಾಮಗಾರಿ ಅಪೂರ್ಣವಾಗಿದೆ. ಹನುಮಾನ ದೇವಸ್ಥಾನ ಹಿಂದಗಡೆಯ ಗಲ್ಲಿಯಲ್ಲಿ ಕಾಮಗಾರಿ ಇನ್ನೂ ಪ್ರಾರಂಭಿಸಿಲ್ಲ.

ಹದಗೆಟ್ಟ ರಸ್ತೆಗಳು: ಮುಖ್ಯ ರಸ್ತೆಯಿಂದ ಹಿಡಿದು ಬುಶಣ್ಣನವರ ಮನೆಯವರಿಗೆ ರಸ್ತೆ ಇಕ್ಕಟ್ಟಾಗಿದ್ದು, ರಸ್ತೆ ಪೂರ್ಣ ಹದಗೆಟ್ಟಿದೆ. ಸಾರ್ವಜನಿಕರು, ವಾಹನಗಳು, ಮಕ್ಕಳು ನಡೆದಾಡಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ರಸ್ತೆ ದುರಸ್ತಿ ಮಾಡುವಂತೆ ಹಲವಾರು ಬಾರಿ ಪಂಚಾಯತಿ ಅಧಿಕಾರಿ, ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಜೆಜೆಎಂ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂಬ ನೆಪ ಹೇಳುತ್ತ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. 2024ರಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳ್ಳುವಂತೆ ಸೂಚನೆ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳಿಯರು. ಅದರಂತೆ ಗ್ರಾಮದ ಹೊರವಲಯದ ವೆಂಕಟೇಶ್ವರ ಕಾಲೋನಿ, ಗಣೇಶ ಕಾಲೋನಿ, ಬಸವೇಶ್ವರ ಕಾಲೋನಿಗಳ ರಸ್ತೆಗಳು ಹದಗೆಟ್ಟಿವೆ.

ಸಾರ್ವಜನಿಕ ಶೌಚಾಲಯಕ್ಕೆ ಬೇಡಿಕೆ:

ಇಕ್ಕಟ್ಟಾದ ಮನೆಗಳಿಂದ ಕೂಡಿದ ಗ್ರಾಮದಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಅನಿವಾರ್ಯವಾಗಿ ಗ್ರಾಮಸ್ಥರು ಬಯಲು ಶೌಚಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಬೇಕಿದೆ.

ಜಲಜೀವನ್‌ ಮಿಷನ್‌ ವತಿಯಿಂದ ಪ್ರತಿಮನೆಗಳಿಗೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆದಿದೆ. ಪೈಪ್‌ಗಳನ್ನು ಅಳವಡಿಸಲು ರಸ್ತೆಗಳನ್ನು ಅಗೆದಿರುವ ಪರಿಣಾಮ ರಸ್ತೆಗಳು ಹಾಳಾಗಿವೆ. ಅವಧಿ ಪೂರ್ಣಗೊಂಡರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಸ್ತೆಗಳು ಹದಗೆಟ್ಟಿವೆ. ಈ ಕುರಿತು ಪಿಆರ್‌ಡಿ ಇಲಾಖೆಗೆ ಪಂಚಾಯಿತಿ ವತಿಯಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ. ಬಯಲುಶೌಚ ಮುಕ್ತ ಗೊಳಿಸಲು ಗ್ರಾಮದಲ್ಲಿ ತಿಳಿವಳಿಕೆ ನೀಡುವ ಕೆಲಸವನ್ನು ಗ್ರಾಪಂನಿಂದ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಪಂಚಾಯಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ.

- ಮಲ್ಲಪ್ಪ ರೂಗಿ ಪಿಡಿಒ ಹುನ್ನೂರು

ರಸ್ತೆಗಳು ಹದಗೆಟ್ಟಿವೆ, ಜೆಜೆಎಂ ಕಾಮಗಾರಿ ನೆಪಹೇಳಿ ರಸ್ತೆಗಳನ್ನು ದುರಸ್ತಿಗೊಳಿಸದೇ ಬಿಟ್ಟಿರುವುದು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇನ್ನೆಷ್ಟು ದಿನ ತೊಂದರೆ ಅನುಭವಿಸಬೇಕು, ಮನೆಗಳಲ್ಲಿ ಜಾಗ ಇಲ್ಲದವರು ಅನಿವಾರ್ಯವಾಗಿ ಬಯಲು ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಗ್ರಾಪಂ ನಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಟ್ಟರೆ ಮಾತ್ರ ಗ್ರಾಮದಲ್ಲಿ ಬಯಲುಶೌಚ ತಡೆಯಬಹುದಾಗಿದೆ. ಬಡಾವಣೆಗಳಲ್ಲಿ ಕರ ಸಂಗ್ರಹಿಸಿದ್ದಾರಾದರೂ ರಸ್ತೆಗಳನ್ನು ನಿರ್ಮಿಸುತ್ತಿಲ್ಲ

- ಹಣಮಂತ ಭೂಷಣ್ಣವರ ಗ್ರಾಮಸ್ಥರು ಹುನ್ನೂರ

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ