ಶಿಕ್ಷಣದ ಅಭಿವೃದ್ಧಿಯೇ ಸಮಾಜದ ಅಭಿವೃದ್ಧಿ

KannadaprabhaNewsNetwork |  
Published : Jun 26, 2026, 02:00 AM IST
೨೪ಶಿರಾ೧: ಶಿರಾ ತಾಲೂಕಿನ ತಾವರೆಕರೆ ಗ್ರಾಮದಲ್ಲಿ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಹೈಟೆಕ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಉದ್ಘಾಟಿಸಿದರು.  | Kannada Prabha

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ರೀತಿಯಲ್ಲಿ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ತಾವರೆಕೆರೆ ಗ್ರಾಮದಲ್ಲಿ ಹೈಟೆಕ್ ಶಾಲಾ ಕಟ್ಟಡ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಾ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ರೀತಿಯಲ್ಲಿ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ತಾವರೆಕೆರೆ ಗ್ರಾಮದಲ್ಲಿ ಹೈಟೆಕ್ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ಸಮಾಜದ ಅಭಿವೃದ್ಧಿಗೆ ಮೂಲವಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಇನ್ನಷ್ಟು ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಹೇಳಿದರು.

ತಾಲೂಕಿನ ತಾವರೆಕರೆ ಗ್ರಾಮದಲ್ಲಿ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ೫೦ ಲಕ್ಷ ರು. ಹಾಗೂ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರ ವೈಯಕ್ತಿಕ ೫೦ ಲಕ್ಷ ರು. ಸೇರಿ ಒಟ್ಟು ೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಹೈಟೆಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಶಿರಾ ತಾಲೂಕನ್ನು ಶಿಕ್ಷಣ ಕಾಶಿಯನ್ನಾಗಿ ಮಾಡಬೇಕೆಂಬ ಪರಿಕಲ್ಪನೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಳೆದ ೬ ವರ್ಷಗಳಿಂದ ೬ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಿಸಿದ್ದೇನೆ. ಅದೇ ರೀತಿ ನನಗೆ ತಾಲೂಕಿನ ಜನ ಒಮ್ಮೆ ಅಧಿಕಾರ ನೀಡಿದರೆ ತಾಲೂಕಿನ ೨೫೦ ಗ್ರಾಮಗಳಲ್ಲೂ ಹೈಟೆಕ್ ಮಾದರಿಯ ಶಾಲೆಗಳನ್ನು ನಿರ್ಮಿಸುತ್ತೇನೆ. ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳು ಮುಚ್ಚಲು ಖಾಸಗಿ ಶಾಲೆಗಳು ಕಾರಣವಲ್ಲ ಎಂದರು.

ಸರ್ಕಾರಿ ಶಾಲೆಗಳಲ್ಲಿ ಶೇ. ೪೦ ಶಾಲೆ ಶಿಥಿಲಗೊಂಡಿವೆ. ಇದರಿಂದ ದಾಖಲಾತಿ ಕಡಿಮೆಯಾಗಿದೆ. ಇದರಿಂದ ಸರ್ಕಾರ ೬೦೦೦ ಕೆಪಿಎಸ್ ಶಾಲೆ ಸ್ಥಾಪಿಸುವ ಮೂಲಕ ೪೦ ಸಾವಿರ ಶಾಲೆ ಮುಚ್ಚುವ ಹುನ್ನಾರ ಮಾಡಿದ್ದಾರೆ. ಶಿಕ್ಷಣ ಮೂಲಭೂತ ಹಕ್ಕು ಅದನ್ನು ಕೊಡುವ ಜವಾಬ್ದಾರಿ ಸರ್ಕಾರದ್ದು. ನಾನು ಕಳೆದ ೬ ವರ್ಷದಲ್ಲಿ ೬ ಸರ್ಕಾರಿ ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ್ದೇನೆ. ೬ ಸರ್ಕಾರಿ ಶಾಲೆಗಳು ಒಂದೊಂದು ಜಲಾಶಯವಿದ್ದಂತೆ ಈ ಜಲಾಶದಿಂದ ನೀರು ರೈತರಿಗೆ ಅನುಕೂಲವಾಗುವಂತೆ ಈ ಭಾಗದ ಬಡವರ, ದೀನ ದಲಿತರ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.

ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ ಭಗವಂತ ಚಿದಾನಂದ್ ಎಂ.ಗೌಡ ಅವರಿಗೆ ೧೦೦ ವರ್ಷ ಆಯುಸ್ಸು ಕೊಡಲಿ, ಅವರು ತನ್ನ ಜೀವಿತಾವಧಿಯಲ್ಲಿ ೧೦೦ ಶಾಲೆ ನಿರ್ಮಿಸಲಿ. ದುಡಿದ ಒಂದು ಭಾಗ ಸಮಾಜಕ್ಕೆ ಕೊಡಲಿ. ಇನ್ನು ಹೆಚ್ಚು ಶಾಲೆ ನಿರ್ಮಾಣ ಮಾಡಲಿ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಆರ್. ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಿದರೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ದೂರದೃಷ್ಟಿಯನ್ನಿಟ್ಟುಕೊಂಡು ಚಿದಾನಂದ ಎಂ ಗೌಡ ಅವರು ಭವಿಷ್ಯದ ನಿರ್ಧಾರದಿಂದ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾಧವ ರೆಡ್ಡಿ, ತಹಸೀಲ್ದಾರ್ ಆನಂದ್ ಕುಮಾರ್, ಬಿಇಓ ಕೃಷ್ಣಪ್ಪ, ತಾರೇಗೌಡ, ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ ಮಾಸ್ಟರ್, ಶಾಲಾ ಮುಖ್ಯಶಿಕ್ಷಕಿ ದ್ರಾಕ್ಷಾಯಿಣಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದೇವರಾಜು, ತಾಲೂಕು ಅಧ್ಯಕ್ಷ ಹನುಮಂತರಾಜು, ಕೃಷಿ ಸಂಶೋಧಕ ಡಾ. ಆದರ್ಶ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ
ಅಂಧ, ಅನಾಥರ ಆಶ್ರಯದಾತ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆಗೆ ಭಾರೀ ಆಕ್ರೋಶ