ಪಾಳುಬಿದ್ದ ಮಠ ನಿರಂಜನ ಸ್ವಾಮೀಜಿ ಅವರಿಂದಾಗಿ ಜೀರ್ಣೋದ್ಧಾರ: ಜಡೆ ಶ್ರೀ

KannadaprabhaNewsNetwork | Published : Mar 3, 2025 1:49 AM

ಸಾರಾಂಶ

ಚಿನ್ನಿಕಟ್ಟೆಯ ಶ್ರೀ ಗುರುರುದ್ರಸ್ವಾಮಿ ನಂಬಿದ ಭಕ್ತರನ್ನು ಕೈ ಬಿಡುವುದಿಲ್ಲ. ಇದೊಂದು ಪವಾಡ ಕ್ಷೇತ್ರ ಎಂದು ಸೊರಬ ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಚಿನ್ನಿಕಟ್ಟೆ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನದಲ್ಲಿ ಧರ್ಮಸಭೆ - - - ನ್ಯಾಮತಿ: ಚಿನ್ನಿಕಟ್ಟೆಯ ಶ್ರೀ ಗುರುರುದ್ರಸ್ವಾಮಿ ನಂಬಿದ ಭಕ್ತರನ್ನು ಕೈ ಬಿಡುವುದಿಲ್ಲ. ಇದೊಂದು ಪವಾಡ ಕ್ಷೇತ್ರ ಎಂದು ಸೊರಬ ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಚಿನ್ನಿಕಟ್ಟೆ ಶ್ರೀ ಗುರುರುದ್ರಸ್ವಾಮಿ ಕಲ್ಮಠ ದೇವಸ್ಥಾನದಲ್ಲಿ ಶ್ರೀ ಗುರುರುದ್ರ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಆಯೋಜಿಸಿದ್ದ 18ನೇ ವರ್ಷದ ಮಹಾಶಿವರಾತ್ರಿ ಅಂಗವಾಗಿ ಜಾಗರಣೆ, ಮಹಾರುದ್ರಾಭಿಷೇಕ ಹಾಗೂ ಧರ್ಮ ಜನಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಗುರುರುದ್ರಸ್ವಾಮಿ ಕಲ್ಮಠವು ಒಂದು ಅನುಷ್ಠಾನದ ಕ್ಷೇತ್ರವಾಗಿದೆ. ಯೋಗಿಗಳು ತಪಸ್ಸು ಮಾಡಿದ್ದಾರೆ, ಇಲ್ಲಿ ನಂಬಿ ಬಂದ ಭಕ್ತರು ಸೇವೆಯ ಸಂಕಲ್ಪ ಮಾಡಿಕೊಂಡು ಹೋಗುತ್ತಾರೆ, ಅವರಿಗೆ ಇಷ್ಟಾರ್ಥ ಪ್ರಾಪ್ತಿವಾಗುತ್ತದೆ. ಶ್ರೀ ಮಠದ ನಿರಂಜನ ಸ್ವಾಮೀಜಿ ಅವರಿಗೆ ಶ್ರೀ ಗುರುರುದ್ರಸ್ವಾಮಿ ಪ್ರೇರಣೆಯಾಗಿ ಪಾಳುಬಿದ್ದ ಮಠವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿ ಬೆಳಕಿಗೆ ತಂದಿದ್ದಾರೆ. ಭಕ್ತರ ಕಷ್ಟ-ದುಖಃಗಳಿಗೆ ಪರಿಹಾರದ ಮೂಲಕ ದಾರಿ ತೋರಿಸುತ್ತಾರೆ ಎಂದರು.

ಮೂಡಿ ಶ್ರೀ ಶಿವಲಿಂಗೇಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯ ದಿವಸಕ್ಕೆ ಹೊಟ್ಟೆಗೆ ಬುತ್ತಿ ಹಾಕಿಕೊಳ್ಳುತ್ತಾನೆ. ಆದರೆ ನೆತ್ತಿಗೆ ಬುತ್ತಿ ಸಿಗುವುದಿಲ್ಲ. ಸಿಕ್ಕಾಗ ನೆತ್ತಿ ಬುತ್ತಿ ತಿನ್ನಬೇಕು. ಗುರುಗಳ ಮತ್ತು ಹಿರಿಯ ಮಾರ್ಗದರ್ಶನ ಮುಖ್ಯ. ಜೀವನದಲ್ಲಿ ಒಳ್ಳೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕೊಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಿರಗನಹಳ್ಳಿ ಶಿವನಗೌಡ, ಶಿವಮೊಗ್ಗ ಡಾ.ಚನ್ನಬಸಪ್ಪ ಮಾತನಾಡಿದರು. ಚಿನ್ನಿಕಟ್ಟೆ ಶ್ರೀ ಗುರುರುದ್ರ ಸ್ವಾಮಿ ಕಲ್ಮಠ ದೇವಸ್ಥಾನದ ಶ್ರೀ ನಿರಂಜನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕೋಡಿಹಳ್ಳಿ ಬಿ.ಎಸ್‌.ಈಶ್ವರಪ್ಪ, ಗುಡೆಮನೆ ರುದ್ರೇಶಪ್ಪ, ಶಿವಮೊಗ್ಗ ನರೇಂದ್ರ ಗುರೂಜಿ ಉಪಸ್ಥಿತರಿದ್ದರು.

ಈ ವೇಳೆ 2023-24ನೇ ಸಾಲಿನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಶಿಕುಮಾರ್‌ ನಿರೂಪಿಸಿ, ಗೌರಮ್ಮ ಪ್ರಾರ್ಥಿಸಿದರು. ರವಿಶಂಕರ್‌ ಸ್ವಾಗತಿಸಿ ವಂದಿಸಿದರು.

- - - -(ಪೋಟೋ):

Share this article