ಕುಷ್ಟಗಿ: ಆಧುನಿಕ ಜೀವನಶೈಲಿ, ಉದ್ಯೋಗಕ್ಕಾಗಿ ವಲಸೆ ಹಾಗೂ ಬದಲಾಗುತ್ತಿರುವ ಜೀವನ ಪದ್ಧತಿಯಿಂದ ಕೂಡು ಕುಟುಂಬ ವ್ಯವಸ್ಥೆ ಕ್ರಮೇಣ ಕ್ಷೀಣಿಸುತ್ತಿದ್ದು, ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯಕ್ಕೂ ಧಕ್ಕೆಯಾಗುತ್ತಿದೆ. ಕೌಟುಂಬಿಕ ಮೌಲ್ಯಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಹಿರಿಯರ ಅನುಭವ, ಮಾರ್ಗದರ್ಶನ ಮತ್ತು ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ್ ಹೇಳಿದರು.
ಹಿರಿಯರ ಮಾರ್ಗದರ್ಶನದಿಂದ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ಗೌರವ, ಸಹನೆ ಹಾಗೂ ಹೊಂದಾಣಿಕೆ ಬೆಳೆಯುತ್ತಿತ್ತು. ಮಕ್ಕಳಲ್ಲಿಯೂ ಹಿರಿಯರನ್ನು ಗೌರವಿಸುವುದು, ಪರಸ್ಪರ ಸಹಕಾರದಿಂದ ಬದುಕುವುದು ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೌಲ್ಯಗಳು ಬೆಳೆದು ಬರುತ್ತಿದ್ದವು. ಆದರೆ ಆಧುನಿಕ ಜೀವನಶೈಲಿ ಹಾಗೂ ಉದ್ಯೋಗಕ್ಕಾಗಿ ವಲಸೆಯಿಂದ ಚಿಕ್ಕ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಂದೆ–ತಾಯಿ ಒಂದು ಕಡೆ, ಮಕ್ಕಳು ಮತ್ತೊಂದು ಕಡೆ ವಾಸಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದರಿಂದ ಹಿರಿಯರಿಗೆ ಅಗತ್ಯವಿರುವ ಪ್ರೀತಿ, ಕಾಳಜಿ ಹಾಗೂ ಸಾಮಾಜಿಕ ಭದ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಕಿರಿಯರು ಹಿರಿಯರಿಂದ ಪಡೆಯಬೇಕಾದ ಜೀವನಾನುಭವ ಮತ್ತು ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿ, ಹಿರಿಯ ನಾಗರಿಕರು ಯಾವುದೇ ರೀತಿಯ ತೊಂದರೆ, ಕಿರುಕುಳ ಅಥವಾ ಸುರಕ್ಷತೆ ಸಮಸ್ಯೆ ಎದುರಿಸಿದರೆ ಮುಜುಗರವಿಲ್ಲದೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಹಿರಿಯರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸ್ಪಂದಿಸಲಿದೆ. ಕುಟುಂಬದ ಸದಸ್ಯರು ಹಿರಿಯರನ್ನು ನಿರ್ಲಕ್ಷಿಸದೆ ಅವರೊಂದಿಗೆ ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.ಇಂದಿರಾ ಸುಹಾಸಿನಿ, ಪರಸಪ್ಪ ಗುಜಮಾಗಡಿ, ಶಶಿಧರ ಶೆಟ್ಟರ್, ಲತಾ ಸ್ಥಾವರಮಠ, ಆರ್.ಕೆ. ದೇಸಾಯಿ, ಎಂ. ಶಫಿ ಹೇರೂರು, ಡಾ. ಸುಶೀಲ ಕಾಖಂಡಕಿ, ಎನ್.ಆರ್. ಸೂಡಿ ಭಾಗವಹಿಸಿದ್ದರು.