ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಬಳ್ಳಾರಿ ಜಿಲ್ಲಾಡಳಿತ ಭಾರೀ ಸರ್ಕಸ್‌!

KannadaprabhaNewsNetwork | Updated : Jan 06 2024, 11:47 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಕಲಿಕೆಯಲ್ಲಿ ಹಿಂದುಳಿದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಹಂತದ ಕಲಿಕಾ ಕಾರ್ಯಕ್ರಮಗಳನ್ನುಆಯೋಜಿಸಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಕಲಿಕೆಯಲ್ಲಿ ಹಿಂದುಳಿದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಹಂತದ ಕಲಿಕಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ಕಳೆದ 2022- 23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ 31ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಜಿಲ್ಲೆಯನ್ನು ಟಾಪ್ 10 ಸ್ಥಾನಕ್ಕೇರಿಸಲು ಜಿಲ್ಲಾಡಳಿತ ವಿವಿಧ ಹಂತದಲ್ಲಿ ಪರೀಕ್ಷಾ ಮುನ್ನದ ಶೈಕ್ಷಣಿಕ ಚಟುವಟಿಕೆಗಳನ್ನು ಶುರುಗೊಳಿಸಿದೆ. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ಫಲಿತಾಂಶ ಸುಧಾರಣೆ ಸಂಬಂಧ ಹೆಚ್ಚು ಮುತುವರ್ಜಿ ವಹಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಬಹುತೇಕ ಶಾಲೆಗಳು ವಾರ್ಷಿಕ ಪಠ್ಯಗಳನ್ನು ಪೂರ್ಣಗೊಳಿಸಿದ್ದು, ಪೂರ್ಣ ಪ್ರಮಾಣದ ವ್ಯಾಸಂಗಕ್ಕೆ ತೊಡಗಿಸಿಕೊಂಡಿದ್ದಾರೆ.

16 ಸಾವಿರ ಮಕ್ಕಳಿಗೆ ಅಭ್ಯಾಸ ಪುಸ್ತಕ: ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಬರವಣಿಗೆ ಕೌಶಲ್ಯ ಮತ್ತಷ್ಟು ಸುಧಾರಿಸಲು ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಯ 16 ಸಾವಿರ ವಿದ್ಯಾರ್ಥಿಗಳಿಗೆ "ಪ್ರತಿಬಿಂಬ " ಅಭ್ಯಾಸ ಪುಸ್ತಕಗಳನ್ನು ಇಲಾಖೆ ವಿತರಿಸಿದೆ. ಈ ಪುಸ್ತಕಗಳು ಬರವಣಿಗೆ ಸುಧಾರಣೆ ಜತೆಗೆ ವಿವಿಧ ವಿಷಯಗಳ ಕಲಿಕೆಗೆ ಆಸ್ಪದ ಒದಗಿಸಲಿವೆ. 

ಇನ್ನು ಅತಿಥಿ ಶಿಕ್ಷಕರನ್ನೇ ಹೆಚ್ಚು ಆಶ್ರಯಿಸಿರುವ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ ಎಂದರಿತು, ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಜಿಲ್ಲೆಯ 306 ಅತಿಥಿ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ಶಿಕ್ಷಣ ಇಲಾಖೆಯಿಂದ ನೀಡಲಾಗಿದೆ.

ಸರಣಿ ಪರೀಕ್ಷೆಗಳ ಮೂಲಕ ಹಿಂದುಳಿದ ಮಕ್ಕಳ ಗುರುತಿಸುವಿಕೆ ಕೆಲಸವಾಗುತ್ತಿದೆ. ಇದಲ್ಲದೆ, ಕಳೆದ ವರ್ಷ ಶೇ. 65ಕ್ಕಿಂತ ಕಡಿಮೆ ಫಲಿತಾಂಶ ಪಡೆದ 41 ಹಾಗೂ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ 45 ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ನಿಯೋಜಿತ ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ, ಸ್ಥಳೀಯ ಶಾಲೆಯ ಶೈಕ್ಷಣಿಕ ಸ್ಥಿತಿಗತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಿದ್ದಾರೆ. ನೋಡಲ್ ಅಧಿಕಾರಿ ನೀಡುವ ವರದಿಯನ್ವಯ ಮುಂದಿನ ಹಂತದ ಶೈಕ್ಷಣಿಕ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.

ಅಧಿಕಾರಿಗಳಿಗೆ ಶಾಲೆಗಳು ದತ್ತು: ಪಠ್ಯ ಬೋಧನೆ ಮುಗಿಯುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಒಂದು, ಎರಡು, ಮೂರು ಅಂಕಗಳ "ಕಲಿಕಾ ಆಸರೆ " ಪುಸ್ತಕಗಳನ್ನು ಪೂರೈಸಲು ಶಿಕ್ಷಣ ಇಲಾಖೆ ಪೂರಕ ತಯಾರಿ ಮಾಡಿಕೊಂಡಿದ್ದು, ನಿಧಾನಗತಿ ಕಲಿಕೆಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಿದೆ. ಎಲ್ಲ ಶಾಲೆಗಳಲ್ಲಿ ವಿಶೇಷ ತರಗತಿಗಳು ಶುರುಗೊಳಿಸಲಾಗಿದೆ. 

ಇದಲ್ಲದೆ, ಡಿಡಿಪಿಐ, ಡಯಟ್ ಪ್ರಾಂಶುಪಾಲ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆಯ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ವಿವಿಧ ಶಾಲೆಗಳಿಗೆ ನೋಡಲ್ ಅಧಿಕಾರಿಯನ್ನು ನೇಮಿಸಿ, ದತ್ತು ನೀಡಲಾಗಿದೆ.

ನಿಯೋಜನೆಗೊಂಡ ಅಧಿಕಾರಿಗಳಿಗೆ ತಮಗೆ ನಿಯೋಜಿಸಿದ ಶಾಲೆಯ ಫಲಿತಾಂಶ ಹೆಚ್ಚಳದ ಜವಾಬ್ದಾರಿ ನೀಡಲಾಗಿದೆ. ದತ್ತು ಪಡೆದವರು ನಿರಂತರ ಶಾಲೆ ಜತೆ ಸಂಪರ್ಕವಿಟ್ಟುಕೊಂಡು ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗಸೂಚನೆಯಂತೆ ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿದ್ದಾರೆ.

ಡಿಸಿ ಮಾರ್ಗದರ್ಶನ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆಸಂಬಂಧಿಸಿದಂತೆ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡು ಕಾರ್ಯೋನ್ಮುಖವಾಗಿದೆ. ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧ ಹಂತದಲ್ಲಿ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಡಿಡಿಪಿಐ ಬಿ. ಉಮಾದೇವಿ ತಿಳಿಸಿದರು.

Share this article