ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಪ್ರತಿವರ್ಷಕ್ಕೆ ಸುಮಾರು ೧೬,೦೦೦ ಯೂನಿಟ್ ರಕ್ತಬೇಕಾಗಿರುತ್ತದೆ, ಆದರೆ ಅಷ್ಟೊಂದು ಯೂನಿಟ್ ರಕ್ತ ಸಂಗ್ರಹಿಸಲಾಗದೇ ಅನೇಕ ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಪರದಾಡಬೇಕಾದ ಪರಿಸ್ಥಿತಿ ಇದೆ. ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್ ಮನವಿ ಮಾಡಿದರು. ನಗರದ ಗೋಕುಲ ಪದವಿ ಕಾಲೇಜಿನಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ 6 ರಕ್ತನಿಧಿ ಕೇಂದ್ರ
ಸ್ವಯಂಪ್ರೇರಿತ ರಕ್ತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಅವಶ್ಯಕತೆಯಿರುವ ವ್ಯಕ್ತಿಗಳಿಗೆ ರಕ್ತವನ್ನು ಸರಿಯಾದ ವೇಳೆಯಲ್ಲಿ ಪೂರೈಸುವುದು. ತುರ್ತು ಸಮಯದಲ್ಲಿ ವಿತರಿಸಲು ಅವಶ್ಯಕವಾದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ರಕ್ತನಿಧಿ ಘಟಕಗಳಲ್ಲಿ ಶೇಖರಿಸಿಡುವುದು. ಸ್ವಯಂಪ್ರೇರಿತ ರಕ್ತದಾನಿಗಳಿಗೆ ಧನ್ಯವಾದ ಸಲ್ಲಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ರಕ್ತದಾನಕ್ಕೆ ಆಸಕ್ತಿಯಿಲ್ಲದ ಆರೋಗ್ಯವಂತ ವ್ಯಕ್ತಿಗಳಲ್ಲಿ ರಕ್ತದಾನ ಮಾಡುವಂತೆ ಪ್ರೇರೇಪಿಸುವುದು. ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಅವಶ್ಯಕವಾದಾಗ ಮಾತ್ರ ರಕ್ತದಾನ ಮಾಡುವುದಲ್ಲದೇ ಇನ್ನಿತರೆ ಸಮಯಗಳಲ್ಲಿ ರಕ್ತದಾನ ಮಾಡುವಂತೆ ಪ್ರೇರೇಪಿಸುವುದೇ ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.ರಕ್ತದಾನದಿಂದ ಆರೋಗ್ಯ ರಕ್ಷಣೆಹೆಣ್ಣು ಗಂಡೆಂಬ ಭೇದವಿಲ್ಲದೇ ೧೮ ರಿಂದ ೬೦ ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಿಯ ದೇಹದ ತೂಕ ೪೫ ಕೆ.ಜಿ.ಗಿಂತ ಹೆಚ್ಚಿರಬೇಕು. ಗಂಡಸರು ೩ ತಿಂಗಳಿಗೆ ಒಮ್ಮೆ, ಹೆಂಗಸರು ೪ ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೂ ಉತ್ತಮ.ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕನಿಷ್ಠ ೧೨.೫ ಗ್ರಾಂ ಗಿಂತ ಹೆಚ್ಚಿರಬೇಕು. ರಕ್ತದಾನ ಮಾಡುವುದರಿಂದ ಹೃದಯಘಾತದ ಸಂಭವ ಕಡಿಮೆಯಾಗುವುದು ಎಂದರು.
ರಕ್ತದಾನಿಗಳಾದ ಮಹೇಶ್ ವಿ.ಎಸ್.ಕೃಷ್ಣಮೂರ್ತಿ ಮತ್ತು ಕೊರೊಲಾನ್ ಜಾನ್‌ರನ್ನು ಸನ್ಮಾನಿಸಿದರು. ಗೋಕುಲ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಅದರಂತೆ ೪೨ ರಕ್ತದ ಯೂನಿಟ್ ಸಂಗ್ರಹಿಸಲಾಯಿತು. ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು. ಗೋಕುಲ ವಿದ್ಯಾಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಎನ್.ತೇಜಸ್ವಿನಿ ವಹಿಸಿದ್ದು, ಪ್ರಾಂಶುಪಾಲ ಶ್ರೀನಿವಾಸ್, ಎನ್‌ಎಸ್‌ಎಸ್ ಅಧಿಕಾರಿ ಗಂಗಾಧರಪ್ಪ, ಜಿಲ್ಲಾ ಮೇಲ್ವಿಚಾರಕಿ ಹೇಮಲತಾ ಇದ್ದರು.