ನವಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಆರೋಪ

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ನ.17ರಂದು ರಾತ್ರಿ 10.30 ರ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಅವರ ಪತ್ನಿ ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ಸಾವು ಎಂದು ಊರವರು ಹಾಗೂ ಮನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ‌.‌

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆ ನಡೆದಿದ್ದು ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಪೋಷಕರು ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ನ.17ರಂದು ರಾತ್ರಿ 10.30 ರ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಅವರ ಪತ್ನಿ ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ಸಾವು ಎಂದು ಊರವರು ಹಾಗೂ ಮನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ‌.‌ಘಟನೆಗೆ ಸಂಬಂಧಪಟ್ಟ ವೈದ್ಯರ ಅಮಾನತು ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕು ಎಂದು ಸೋಮವಾರ ಸಂಜೆ ಆಸ್ಪತ್ರೆಯೆದರುರು ಕುಳಿತು ಪ್ರತಿಭಟನೆ ಮೂಲಕ ಒತ್ತಾಯಿಸಿದರು.ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಸಾವಾಗಿದೆ ಎಂದು ವೈದ್ಯರು ತಿಳಿಸಿದ್ದು ಉಡಾಫೆಯಿಂದ ಮಾತಾಡಿದ್ದಾಗಿ ಕುಟುಂಬಿಕರು ಆರೋಪಿಸಿದ್ದಾರೆ. ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಕ್ಯಾರೇ ಮಾಡಿಲ್ಲ. ಎಂಟೂವರೆ ತಿಂಗಳಿನ ವೇಳೆ ಸ್ಕಾನಿಂಗ್ ಮಾಡದ ಕಾರಣ ಈಗ ಸ್ಕ್ಯಾನಿಂಗ್ ಮಾಡಿ ಎಂದು ಮನೆಯವರು ಒತ್ತಾಯಿಸಿದರೂ ವೈದ್ಯರು ಸ್ಕಾನಿಂಗ್ ಮಾಡಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.ಉಪವಿಭಾಗ ಆಸ್ಪತ್ರೆಯ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಸ್ಥಳಕ್ಕೆ ತೆರಳಿ ಮನವಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರೂ ಪ್ರತಿಭಟನಕಾರರು ಸ್ಥಳ ಬಿಟ್ಟು ಕದಲಲಿಲ್ಲ. ತಡರಾತ್ರಿ ತನಕವೂ ಪ್ರತಿಭಟನೆ ಮುಂದುವರೆದಿದ್ದು, ರಾತ್ರಿ 8.30ರ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಪುರಸಭಾ ಸದಸ್ಯ ಸಂತೋಷ್‌ ಶೆಟ್ಟಿ ಮತ್ತಿತರರು ಪ್ರತಿಭಟನಾಕಾರರಿಗೆ ಸಾಂತ್ವನ ಹೇಳಿದರು.

ಉಪವಿಭಾಗಾಧಿಕಾರಿ ಎಸ್.ಆರ್.ರಶ್ಮೀ, ತಹಸೀಲ್ದಾರ್‌ ಎಚ್.ಎಸ್.ಶೋಭಾಲಕ್ಷ್ಮೀ, ಡಾ.ರಾಬರ್ಟ್ ರೆಬೆಲ್ಲೋ ಮತ್ತಿತತರರು ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು.

ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ನಂದಕುಮಾರ್, ಪಿಎಸ್‌ಐ ಪ್ರಸಾದ್, ಸಂಚಾರ ಠಾಣೆ ಪಿಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಂದೋ ಬಸ್ತ್ ಮಾಡಲಾಗಿತ್ತು. ವೈದ್ಯರ ಅಮಾನತು ತನಕವೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Share this article