ವರ್ಷದಲ್ಲಿ 7 ದಿನ ಬಾಗಿಲು ತೆರೆಯುವ ಹಣಕೋಣ ಸಾತೇರಿ ದರ್ಶನಕ್ಕೆ ತೆರೆ

KannadaprabhaNewsNetwork | Published : Sep 17, 2024 12:47 AM

ಸಾರಾಂಶ

ಭಾನುವಾರ ಹಾಗೂ ಸೋಮವಾರ ರಜಾ ಇದ್ದುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿತ್ತು. ಕಿಮೀ ಉದ್ದದ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು.

ಕಾರವಾರ: ವರ್ಷದಲ್ಲಿ ಕೇವಲ 7 ದಿನ ಮಾತ್ರ ಬಾಗಿಲು ತೆರೆಯುವ ಹಣಕೋಣ ಸಾತೇರಿ ದೇವಿಯ ದರ್ಶನಕ್ಕೆ ಸೋಮವಾರ ತೆರೆಬಿದ್ದಿದ್ದು, 7 ದಿನಗಳ ಕಾಲ ನಡೆದ ದೇವಿಯ ವಾರ್ಷಿಕ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.ಸೆ. 10ರಂದು ಆರಂಭವಾದ ಸಾತೇರಿ ದೇವಿಯ ಉತ್ಸವದಲ್ಲಿ ಸ್ಥಳೀಯರಲ್ಲದೆ, ಗೋವಾ, ಮಹಾರಾಷ್ಟ್ರ ಮತ್ತಿತರ ಕಡೆಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ದೇವಿಯ ದರ್ಶನ ಪಡೆದರು. ಅದರಲ್ಲೂ ಭಾನುವಾರ ಹಾಗೂ ಸೋಮವಾರ ರಜಾ ಇದ್ದುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿತ್ತು. ಕಿಮೀ ಉದ್ದದ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಆಗಮಿಸಿದ ಭಕ್ತರಿಗೆ ಪ್ರತಿದಿನ ಭಜನೆ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ದೇವಾಲಯದ ಹೊರಗಡೆ ನಿರಂತರವಾಗಿ ಹರಾಜು ನಡೆಯಿತು. ಜನತೆ ದೇವಿಯ ಪ್ರಸಾದ ರೂಪದಲ್ಲಿ ಹರಾಜಿನಲ್ಲಿ ವಸ್ತುಗಳನ್ನು ಪಡೆದುಕೊಂಡರು. ಸಾತೇರಿ ದೇವಿಗೆ ಹಣ್ಣುಕಾಯಿ ಅರ್ಪಿಸುವುದು, ಉಡಿ, ಹರಕೆ, ತುಲಾಭಾರ ಮತ್ತಿತರ ಸೇವೆಯನ್ನು ಸಹಸ್ರಾರು ಭಕ್ತರು ನೆರವೇರಿಸಿದರು. ಆಡಳಿತ ಮಂಡಳಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿತ್ತು. ಪ್ರತಿದಿನ ರಾತ್ರಿ 9.30ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸೋಮವಾರ ಸಂಜೆ 4 ಗಂಟೆಯ ತನಕ ದೇವಿಯ ದರ್ಶನಕ್ಕೆ ಅವಕಾಶ ಇತ್ತು. ಭಕ್ತರು ತಂಡೋಪತಂಡವಾಗಿ ಬಂದು ದೇವಿಯ ದರ್ಶನ ಪಡೆದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕೆಎಸ್ ಎಂಸಿಎ ಅಧ್ಯಕ್ಷ ಸತೀಶ ಸೈಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮತ್ತಿತರರು ಸಾತೇರಿ ದೇವಿಯ ದರ್ಶನ ಪಡೆದರು.

ವಾಹನ ದಟ್ಟಣೆ

ಹಣಕೋಣ ಸಾತೇರಿ ದೇವಿಯ ದರ್ಶನಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದುದರಿಂದ ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಪ್ರಯಾಸ ಪಡಬೇಕಾಯಿತು. ಕಾರವಾರ ಕದ್ರಾ ರಸ್ತೆಯಿಂದ ಸಾತೇರಿ ದೇವಾಲಯದವರೆಗೆ ಪ್ರತಿದಿನ ವಾಹನಗಳು ಹಾಗೂ ಜನರ ದಟ್ಟಣೆ ಕಂಡುಬಂತು.

Share this article