ಬಳ್ಳಾರಿ: ವಿಕಸಿತ ಭಾರತದ ಅಭಿವೃದ್ಧಿ ಕನಸು ಎಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತಂತೆ ಪ್ರಶ್ನೆ ಕೇಳುವ ಮನೋಭಾವ ಪ್ರಬಲವಾಗಬೇಕು ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಸೌತ್ ರೀಜಿನಲ್ ಸೆಂಟರ್, ಹೈದ್ರಾಬಾದ್ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಸಹಯೋಗದಲ್ಲಿ ವಿಕಸಿತ ಭಾರತ @2047 ಭಾರತದಲ್ಲಿ ಸಾಂವಿಧಾನಿಕ, ಶಾಸಕಾಂಗ ಮತ್ತು ನ್ಯಾಯಾಂಗ ಸುಧಾರಣೆಗಳು ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯರಾದ ನಾವು ನಮಗೆ ದೊರೆತಿರುವ ಪೌರತ್ವ ಜವಾಬ್ದಾರಿಯುತವಾಗಿ ನಿಭಾಯಿಸಬೇಕಾಗಿದೆ. ಹಲವಾರು ರಾಜಕೀಯ ಚಿಂತಕರು ಸಮಾಜ ಅಭಿವೃದ್ಧಿಯತ್ತ ಸಾಗಲು ಶ್ರಮಿಸಿದ್ದಾರೆ. ರಾಜಕೀಯ ಚಿಂತಕರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇದೆ.ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವದ ಜತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ರಾಜಕೀಯ ಪಕ್ಷಗಳಿಗೆ ದೇಶಕ್ಕಿಂತ ಪಕ್ಷ ಮುಖ್ಯವಾಗಿದೆ. 2047ರ ಹೊತ್ತಿಗೆ ಯುವಕರು ರಾಷ್ಟ್ರ ರಾಜಕಾರಣದ ಅಧಿಕಾರ ಚುಕ್ಕಾಣಿ ಹಿಡಿಯಲ್ಲಿದ್ದಾರೆ ಎಂದರು.
ಸಂವಿಧಾನ, ಶಾಸಕಾಂಗ ಮತ್ತು ನ್ಯಾಯಾಂಗ ಸುಧಾರಣೆಯ ಮೇಲೆ ಎಲ್ಲರೂ ಗಮನ ಹರಿಸುವುದು ಮುಖ್ಯವಾಗಿದೆ. ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಸಂವಿಧಾನವು ಪ್ರಮುಖ ಪಾತ್ರ ವಹಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು, ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಕೌಶಲ್ಯಯುತ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಸ್ವ ಕುಟುಂಬ ಸದೃಢಗೊಳಿಸಿದರೆ ದೇಶವು ತಾನಾಗಿಯೇ ಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು ಎಂದು ತಿಳಿಸಿದರು.
ಡಾ. ಮೋಹನದಾಸ್ ಅತಿಥಿಗಳನ್ನು ಪರಿಚಯಿಸಿದರು. ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.