ಗಜೇಂದ್ರಗಡದಲ್ಲಿ ನನಸಾಯ್ತು ಸುಗಮ ಸಂಚಾರದ ಕನಸು

KannadaprabhaNewsNetwork | Published : Aug 21, 2024 12:42 AM

ಸಾರಾಂಶ

ಗಜೇಂದ್ರಗಡ ಜೋಡು ರಸ್ತೆ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿ ಬದಿ ವ್ಯಾಪಾರ, ವಹಿವಾಟಿಗೆ ನಿರ್ಬಂಧ ಹೇರಿದ ಪರಿಣಾಮ ಜನದಟ್ಟನೆ, ವಾಹನ ದಟ್ಟನೆಗೆ ಕಡಿವಾಣ ಬಿದ್ದಿದೆ.

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದ ಜೋಡು ರಸ್ತೆ ಸೇರಿ ರೋಣ, ಕುಷ್ಟಗಿ ಹಾಗೂ ಬಸ್ ನಿಲ್ದಾಣದ ರಸ್ತೆಗಳು ಸುಂದರವಾಗಿದ್ದು, ಕೆಕೆ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಪುನರ್ ಆರಂಭವಾಗಿದ್ದು, ಸಿಸಿ ಟಿವಿಗಳ ಕಾರ್ಯ ಮತ್ತಷ್ಟು ಚುರುಕಾಗಿದೆ. ಸುಗಮ ಸಂಚಾರದ ಕನಸು ಸಾಕಾರಗೊಗೊಳಿಸಿದ ಕಾರ್ಯಕ್ಕೆ ಪಟ್ಟಣದ ಜನತೆ ಶಹಬ್ಬಾಶ್ ಪೊಲೀಸ್ ಎಂದು ಪ್ರಶಂಸಿಸುತ್ತಿದ್ದಾರೆ.

ಪಟ್ಟಣದ ಜೋಡು ರಸ್ತೆಯಲ್ಲಿನ ಸಂಚಾರ ಎಂದರೆ ದೇವರಿಗೆ ಪ್ರೀತಿ ಎನ್ನುವ ದಿನಮಾನಗಳನ್ನು ಎದುರಿಸುತ್ತಿದ್ದ ಸಾರ್ವಜನಿಕರು ಯಪ್ಪಾ ಈ ಸಮಸ್ಯೆಗೆ ಪರಿಹಾರ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಆದರೆ, ಕೆಲ ದಿನಗಳಿಂದ ಪಟ್ಟಣದ ಜೋಡು ರಸ್ತೆ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿ ಬದಿ ವ್ಯಾಪಾರ, ವಹಿವಾಟಿಗೆ ನಿರ್ಬಂಧ ಹೇರಿದ ಪರಿಣಾಮ ಜನದಟ್ಟನೆ, ವಾಹನ ದಟ್ಟನೆಗೆ ಕಡಿವಾಣ ಬಿದ್ದಿದ್ದು, ಪಟ್ಟಣದಲ್ಲಿ ಸುಗಮ ಸಂಚಾರ ಸಾಧ್ಯವಾಗಿದೆ.

ಪಟ್ಟಣದಲ್ಲಿ ಕಳೆದ ೧೦ ದಿನಗಳ ಹಿಂದೆ ಯಾವ ರಸ್ತೆಗೆ ಹೋದರೂ ಪಾಲನೆಯಾಗದ ಸಂಚಾರಿ ನಿಯಮ, ಎಲ್ಲೆಂದರಲ್ಲಿ ನಿಲ್ಲುವ ಬೈಕ್, ವಾಹನಗಳು, ಸಮಯವಿಲ್ಲದ ಸಮಯದಲ್ಲಿ ಟ್ರಾನ್ಸ್‌ಪೋರ್ಟ್‌ ಲಾರಿಗಳಿಂದ ಅನ್‌ಲೋಡ್ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಪಟ್ಟಣದ ಜನರಿಗೆ ಇದು ನಮ್ಮೂರಾ ಎನ್ನುವಂತೆ ಮಾಡಿದ್ದಾರೆ ಅಧಿಕಾರಿಗಳು. ಸುಗಮ ಸಂಚಾರ, ಸುರಕ್ಷಿತ ಪ್ರಯಾಣ ಎನ್ನುವ ಅಭಿಯಾನದಡಿ ಗಜೇಂದ್ರಗಡ ಈಗ ಸಂಪೂರ್ಣವಾಗಿ ಬದಲಾಗಿದೆ.

ಜಿಲ್ಲೆಯ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಪಟ್ಟಣಕ್ಕೆ ಸುತ್ತಲಿನ ಗ್ರಾಮಗಳು ಸೇರಿ ನೆರೆಯ ತಾಲೂಕಿನ ೩೦ಕ್ಕೂ ಅಧಿಕ ಗ್ರಾಮಗಳ ಜನರು ವ್ಯಾಪಾರ, ವಹಿವಾಟು ಸೇರಿ ಇತರ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಹೀಗಾಗಿ, ಸಹಜವಾಗಿ ಜನದಟ್ಟನೆ ಜತೆಗೆ ವಾಹನ ದಟ್ಟನೆ ಹೆಚ್ಚಾಗುತ್ತಿರುವ ಪರಿಣಾಮ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಒಂದು ಸಮಸ್ಯೆಯಾದರೆ, ನಾಲ್ಕು ರಸ್ತೆಗಳ ಬೀದಿ ಬದಿಯಲ್ಲಿ ಕೆಲ ಬೀದಿ ವ್ಯಾಪಾರಸ್ಥರು ಮನಸೋ ಇಚ್ಛೆ ವ್ಯಾಪಾರ ವಹಿವಾಟಿಗೆ ಮುಂದಾಗುತ್ತಿರುವ ಪರಿಣಾಮ ಪಾದಾಚಾರಿಗಳ ಓಡಾಟಕ್ಕೆ ಹಾಗೂ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು. ಇದರಿಂದ ಬೇಸತ್ತಿದ್ದ ಸಾರ್ವಜನಿಕರು ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಎಂದು ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಸುಸ್ತಾಗಿದ್ದರು. ಆದರೆ ಪರಿಹಾರ ಮಾತ್ರ ಸಿಕ್ಕಿರಲಿಲ್ಲ.

ಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಟ್ಟಣದಲ್ಲಿ ಸಾರ್ವಜನಿಕರ ಸಹಕಾರ ಪಡೆದು ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಸೋಮನಗೌಡ ಗೌಡ್ರ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು. ಪರಿಣಾಮ ಸಭೆ ನಡೆದ ಕೆಲ ದಿನಗಳಲ್ಲಿ ಪಟ್ಟಣ ಜೋಡು ರಸ್ತೆ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಿದ್ದರಿಂದ ಈಗ ನಾಲ್ಕು ರಸ್ತೆಗಳು ಸುಗಮ ಸಂಚಾರಕ್ಕೆ ಮುಕ್ತವಾಗಿವೆ.

ಅತಿಕ್ರಮಣ ತೆರವು ಯಾವಾಗ?

ಪಟ್ಟಣದ ಜೋಡು ರಸ್ತೆ ಸೇರಿ ನಾಲ್ಕು ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಿದ ಪರಿಣಾಮ ರಸ್ತೆಗಳು ಸುಗಮ ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ಇದೇ ರಸ್ತೆಯಲ್ಲಿ ಕೆಲ ಅಂಗಡಿಗಳು ಮಾಲೀಕರು ಫುಟ್ಪಾತ್ ಹಾಗೂ ಚರಂಡಿ ಅತಿಕ್ರಮಣ ಮಾಡಿಕೊಂಡು ಅಂಗಡಿಗಳ ಮುಂದೆ ತಗಡುಗಳನ್ನು ಹಾಕಿಕೊಂಡಿದ್ದರಿಂದ ಪಾದಾಚಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಫುಟ್ಪಾತ್, ಚರಂಡಿ ಅತಿಕ್ರಮ ಮಾಡಿಕೊಂಡಿರುವ ಅಂಗಡಿಗಳ ಮೇಲೆ ಕಾರ್ಯಾಚರಣೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Share this article