ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿಯ ಬನಹಳ್ಳಿ ಸಮೀಪದಲ್ಲಿ ಸೋಮವಾರ ಮದ್ಯಾಹ್ನ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು, 15ಕ್ಕೂ ಹೆಚ್ಚು ಜನರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಂದಗುಡಿ ಹೋಬಳಿಯ ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿಯ ಬನಹಳ್ಳಿ ಸಮೀಪದಲ್ಲಿ ಸೋಮವಾರ ಮದ್ಯಾಹ್ನ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು, 15ಕ್ಕೂ ಹೆಚ್ಚು ಜನರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಸಕೋಟೆಯಿಂದ ಚಿಂತಾಮಣಿಗೆ ಹೋಗುತ್ತಿದ್ದ ಬಸ್ ಗೆ ಬನಹಳ್ಳಿಯ ಬಳಿ ರಸ್ತೆ ಹಂಪ್ ನಲ್ಲಿ ಚಾಲಕ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿಯಾದ ಪಕ್ಕದಲ್ಲಿಯೇ 11 ಕೆವಿ. ವಿದ್ಯುತ್ ತಂತಿ ಹಾದು ಹೋಗಿದ್ದು, ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದರೆ ಹೆಚ್ಚಿನ ಪ್ರಾಣ ಹಾನಿಯಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಸ್ ಪಲ್ಟಿಯಾಗುತ್ತಿದ್ದಂತೆ ಗಾಬರಿಗೊಂಡ ಸುಮಾರು 60 ಪ್ರಯಾಣಿಕರು ಬಸ್‌ನಿಂದ ಹೊರಬರಲು ಹರಸಾಹಸ ಪಟ್ಟಿದ್ದು, ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಬಸ್‌ನ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತಂದಿದ್ದಾರೆ. ಬಸ್‌ನಲ್ಲಿ ಪ್ರಯಾಣಿಕರ ಲಗೇಜುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಕಂಡು ಬಂತು.
ಸುದ್ದಿ ತಿಳಿದ ನಂದಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಂಭೀರವಾಗಿದ್ದ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆ ಆಸ್ಪತ್ರೆಗೆ ರವಾನಿಸಿದರು. ಸಣ್ಣಪುಟ್ಟ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಹೊಸಕೋಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.