ಕನ್ನಡಪ್ರಭ ವಾರ್ತೆ ಭಟ್ಕಳ ಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚಿ ಮುರುಡೇಶ್ವರ ಪೊಲೀಸರು ಸನ್ಮಾನಿಸಿದರು. ಕಾಯ್ಕಿಣಿಯ ಶಿರಾಣಿಯ ಚಂದ್ರು ರಾಮ ನಾಯ್ಕ ಎನ್ನುವವರ ಆಟೋದಲ್ಲಿ ಬಸ್ತಿ ಕಾಯ್ಕಿಣಿಯ ದೇವಿಕಾನಿನ ವಿಜಯಲಕ್ಷ್ಮಿ ಎಂಬಾಕೆ ಭಟ್ಕಳ ತೆಂಗಿನ ಗುಂಡಿಯಲ್ಲಿರುವ ತನ್ನ ತಾಯಿಯ ಮನೆಗೆ ಪ್ರಯಾಣಿಸುವ ವೇಳೆ ಚಿನ್ನಾಭರಣವುಳ್ಳ ಬ್ಯಾಗನ್ನು ಆಟೋದ ಹಿಂಭಾಗದಲ್ಲಿ ಬಿಟ್ಟು ತೆರಳಿದ್ದಳು. ಆಟೋ ಚಾಲಕ ಮರಳಿ ಮುರುಡೇಶ್ವರ ಕಡೆಗೆ ಹೋಗುವ ಸಂದರ್ಭದಲ್ಲಿ ಖಾಲಿ ಹೋಗುವ ಬದಲು ಮೂರ್ನಾಲ್ಕು ಜನ ಪ್ರಯಾಣಿಕರನ್ನು ಕರೆದುಕೊಂಡು ಬಂದಿದ್ದಾರೆ. ನಂತರ ಆಯಾ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಬಿಟ್ಟು ನೇರವಾಗಿ ಮುರುಡೇಶ್ವರಕ್ಕೆ ಬಂದಾಗ ಆಟೋ ಹಿಂಭಾಗದಲ್ಲಿ ಒಂದು ಬ್ಯಾಗ್ ಇರುವುದನ್ನು ಗಮನಿಸಿ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ.ಅದರಲ್ಲಿ ₹5 ರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10 ಸಾವಿರ ನಗದು ಇರುವುದು ತಿಳಿದಾಗ ತಕ್ಷಣ ಆಟೋ ಚಾಲಕ ಸಂಘದ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಮಹಿಳೆ ತಾನು ಆಟೋದಲ್ಲಿ ಚಿನ್ನಾಭರಣವುಳ್ಳ ಬ್ಯಾಗ್ ಕಳೆದುಕೊಂಡಿರುವುದು ನೆನಪಾಗಿ ತನ್ನ ಸಂಬoಧಿ ಆಟೋ ಚಾಲಕರಿಗೆ ಮಾಹಿತಿ ತಿಳಿಸಿದ್ದರಿಂದ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋದ ಮಹಿಳೆ ಪತ್ತೆಯಾಗಿದ್ದಾಳೆ. ಮಹಿಳೆಯನ್ನು ಮುರುಡೇಶ್ವರ ಪೊಲೀಸ್ ಠಾಣೆಗೆ ಕರೆಯಿಸಿ ಪೊಲೀಸರ ಸಮ್ಮುಖದಲ್ಲಿ ಮಹಿಳೆಗೆ ಚಿನ್ನಾಭರಣ ಹಸ್ತಾಂತರಿಸಲಾಗಿದೆ. ಚಿನ್ನಾಭರಣ ಇದ್ದ ಬ್ಯಾಗ್ ಮರಳಿಸಿದ ಆಟೋ ಚಾಲಕನಿಗೆ ಮಹಿಳೆ ಕೃತಜ್ಞತೆ ಹೇಳಿದಳು. ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಮುರುಡೇಶ್ವರ ಪೋಲಿಸ್ ಠಾಣೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುರುಡೇಶ್ವರ ಆಟೋ ಯೂನಿಯನ್ ನಿಂದಲೂ ಚಾಲಕನಿಗೆ ಅಭಿನಂದಿಸಲಾಯಿತು. ಪೊಟೋ ಪೈಲ್ : 8ಬಿಕೆಲ್2