ನಾರಾಯಣ ಹೆಗಡೆ
1995ರಲ್ಲೇ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪಗೊಂಡು, 2017ರಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿಯಾಗಿ, 2022ರಲ್ಲಿ ಡಿಪಿಆರ್ ಕೂಡ ಸಿದ್ಧವಾಗಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಯಿದು. ಆದರೆ, ಪರಿಸರ ನಾಶ, ಜೀವವೈವಿಧ್ಯಕ್ಕೆ ಧಕ್ಕೆ ಇತ್ಯಾದಿ ಕಾರಣಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗಲೇ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ವಿಶೇಷ ಮುತುವರ್ಜಿ ವಹಿಸಿದ್ದರು.
ಈಗ ಸಂಸದರಾದ ಬಳಿಕ ಮತ್ತೆ ಯೋಜನೆ ಅನುಷ್ಠಾನಕ್ಕೆ ಅವರು ವಿಶೇಷ ಆಸಕ್ತಿ ವಹಿಸಿರುವುದರಿಂದ ಜಿಲ್ಲೆಯ ರೈತರ ಬಹುವರ್ಷಗಳ ಬೇಡಿಕೆ ಈಡೇರುವ ನಿರೀಕ್ಷೆ ಹುಟ್ಟುಹಾಕಿದೆ. ಯೋಜನೆಯನ್ನು ಬೇಡ್ತಿ- ವರದಾ ಮತ್ತು ಬೇಡ್ತಿ- ಧರ್ಮಾ-ವರದಾ ಹೀಗೆ ಎರಡು ಲಿಂಕೇಜ್‌ಗಳ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಎನ್‌ಡಬ್ಲ್ಯುಡಿಎ ಬೆಂಗಳೂರು ಕಚೇರಿಯಿಂದ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ಮೂಲಗಳ ಪ್ರಕಾರ ಪಿಎಫ್‌ಆರ್(ಪೂರ್ವ ಕಾರ್ಯಸಾಧ್ಯತಾ ವರದಿ) ಕೂಡ ಸಿದ್ಧಗೊಂಡಿದೆ. ಹಿಂದಿನ ಡಿಪಿಆರ್‌ನಲ್ಲಿನ ಅಂಶಗಳಲ್ಲಿ ಕೆಲ ಮಾರ್ಪಾಟು ಮಾಡಿ ಹೊಸ ಡಿಪಿಆರ್ ಸಿದ್ಧಗೊಳ್ಳಬೇಕಿದೆ.ಅದಾದ ಬಳಿಕ ಅರಣ್ಯ, ಪರಿಸರ, ಜೀವವೈವಿಧ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಒಪ್ಪಿಗೆ ಸಿಕ್ಕಿ ಕೇಂದ್ರ ಜಲಶಕ್ತಿ ಸಚಿವಾಲಯ ಯೋಜನೆಗೆ ಹಸಿರುನಿಶಾನೆ ತೋರಿಸಬೇಕಿದೆ. ಯೋಜನೆ ಅನುಷ್ಠಾನಕ್ಕೆ ಇನ್ನೂ ದಾರಿ ದೂರವಿದ್ದರೂ ಹೆಜ್ಜೆ ಹಾಕಲು ಆರಂಭಿಸಿರುವುದು ಜಿಲ್ಲೆಯ ಪಾಲಿಗೆ ಆಶಾದಾಯಕ ಬೆಳವಣಿಗೆ ಎನಿಸಿದೆ.
ಅದರಲ್ಲೂ ಹಾವೇರಿ ಜಿಲ್ಲೆಯ ಕೃಷಿ ಮತ್ತು ಕುಡಿಯುವ ನೀರಿನ ಯೋಜನೆಗೆ ಇದರಿಂದ ಅನುಕೂಲವಾಗಲಿದೆ. ಇಲ್ಲಿಯ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಯೋಜನೆಗೆ ವರದಾ ನದಿ ನೀರು ಲಭ್ಯವಾಗಲಿದೆ. ಜತೆಗೆ, ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಜಿಲ್ಲೆಯ ವರದಾ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೂ ಅನುಕೂಲವಾಗಲಿದೆ. ಸಿಗಲಿದೆ 18.54 ಟಿಎಂಸಿ ನೀರು