ಮಾದಕ ದ್ರವ್ಯ ಪಿಡುಗು ಭಯೋತ್ಪಾದನೆಗಿಂತಲೂ ಗಂಭೀರ ಸಮಸ್ಯೆ

KannadaprabhaNewsNetwork |  
Published : Nov 18, 2026, 02:00 AM IST
ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಿ.ಐ.ಟಿ.ಎಮ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾದಕ ದ್ರವ್ಯ ಮುಕ್ತ ಭಾರತ’ ವಿಶೇಷ ಜಾಗೃತಿ ಅಭಿಯಾನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುವ ವ್ಯಕ್ತಿಯು ತನ್ನ ಆಸ್ತಿ,ಉತ್ತಮ ಆರೋಗ್ಯ ಹಾಗೂ ಸನ್ನಡತೆ ಏಕಕಾಲದಲ್ಲಿ ಕಳೆದುಕೊಂಡು ಸರ್ವನಾಶವಾಗುತ್ತಾನೆ

ಬಳ್ಳಾರಿ: ದೇಶದಲ್ಲಿ ಯುವಶಕ್ತಿ ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಪಿಡುಗು ಭಯೋತ್ಪಾದನೆಗಿಂತಲೂ ಅತ್ಯಂತ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರು ಇದರ ವಿರುದ್ಧ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ಪ್ರಭು ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿಯಿಂದ ನಗರದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಮುಕ್ತ ಭಾರತ ವಿಶೇಷ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುವ ವ್ಯಕ್ತಿಯು ತನ್ನ ಆಸ್ತಿ,ಉತ್ತಮ ಆರೋಗ್ಯ ಹಾಗೂ ಸನ್ನಡತೆ ಏಕಕಾಲದಲ್ಲಿ ಕಳೆದುಕೊಂಡು ಸರ್ವನಾಶವಾಗುತ್ತಾನೆ ಎಂದು ತಿಳಿಸಿದರು.

ಬೇರೆ ಊರುಗಳಿಂದ ಬಂದು ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಒಂಟಿತನ ಅಥವಾ ಕೇವಲ ಕುತೂಹಲಕ್ಕಾಗಿ ಆರಂಭಿಸಿ ಈ ಜಾಲಕ್ಕೆ ಸಿಲುಕಿಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಧೈರ್ಯವಾಗಿ ಇಲ್ಲ ಎನ್ನಲು ಕಲಿಯಬೇಕು ಎಂದರು.

ಮಾದಕ ದ್ರವ್ಯ ಸೇವಿಸುವುದು ಮಾತ್ರವಲ್ಲದೆ, ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಅದನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು ಕೂಡ ಕಾನೂನು ಪ್ರಕಾರ ಗಂಭೀರ ಅಪರಾಧವಾಗಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸಿಗೆ ದೊಡ್ಡ ಪೆಟ್ಟು ನೀಡುತ್ತದೆ ಎಂದರು.

ಶೈಕ್ಷಣಿಕ ಒತ್ತಡ ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಯೋಗ, ಧ್ಯಾನ ಅಭ್ಯಾಸ ಮಾಡುವುದು ಮತ್ತು ಅಂದಿನ ವಿದ್ಯಾಭ್ಯಾಸ ಅಂದೇ ಪೂರ್ಣಗೊಳಿಸುವ ರೂಢಿ ಮಾಡಿಕೊಳ್ಳಬೇಕು ಎಂದು ತಿಳಿಸಿದ ನ್ಯಾಯಾಧೀಶರು, ಮಾದಕ ದ್ರವ್ಯ ಸಪ್ಲೈ ಮಾಡುವ ಜಾಲಗಳ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಕಾನೂನು ಸಂಸ್ಥೆಗಳಿಗೆ ತಿಳಿಸಬೇಕು ಹಾಗೂ ವ್ಯಸನಕ್ಕೆ ಒಳಗಾದವರ ಬಗ್ಗೆ ಸಹಾನುಭೂತಿಯಿಂದ ವರ್ತಿಸಿ ಅವರನ್ನು ತಿದ್ದಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಮಾತನಾಡಿ, ಜಿಲ್ಲೆಯಲ್ಲಿ ಈ ಅಭಿಯಾನವು ನ.27 ರವರೆಗೆ ನಡೆಯಲಿದೆ. ಮಕ್ಕಳನ್ನು ರಕ್ಷಿಸಿ ಸಮಾಜ ಉಳಿಸಿ, ಜಾಗೃತ ಯುವಜನತೆ-ಆರೋಗ್ಯವಂತ ಭಾರತ ಹಾಗೂ ಮಾದಕ ದ್ರವ್ಯ ಮುಕ್ತ ಸಮಾಜ-ನಮ್ಮ ಸಂಕಲ್ಪ ಎಂಬ ಘೋಷವಾಕ್ಯಗಳೊಂದಿಗೆ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಾದಕ ವಸ್ತು ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ.ಐ.ಟಿ.ಎಂ ಕಾಲೇಜಿನ ನಿರ್ದೇಶಕ ಡಾ. ಪೃತ್ವಿರಾಜ್ ಭೂಪಾಲ್ ಮಾತನಾಡಿ, ದೇಶದ ಪ್ರಗತಿಯಲ್ಲಿ ಯುವಕರ ಕೊಡುಗೆ ಅಸ್ಮರಣೀಯ. ಅವರನ್ನು ಆರೋಗ್ಯಕರ ಮತ್ತು ಸಬಲರನ್ನಾಗಿ ಮಾಡುವ ಮಹತ್ತರ ಹೊಣೆ ಎಲ್ಲರ ಮೇಲಿದೆ. ಕೇವಲ ತಮ್ಮನ್ನು ತಾವಷ್ಟೇ ಅಲ್ಲದೆ, ತಮ್ಮ ಕುಟುಂಬಗಳು, ಸ್ನೇಹಿತರು ಮತ್ತು ಸಮುದಾಯದ ಪ್ರತಿಯೊಬ್ಬರನ್ನೂ ಮಾದಕ ವ್ಯಸನದಿಂದ ಮುಕ್ತವಾಗಿರಿಸಲು ಈ ಅಭಿಯಾನದ ಮೂಲಕ ಪಣ ತೊಡೋಣ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಕಾರಾಗೃಹದ ಮನೋರೋಗ ತಜ್ಞ ಡಾ.ನಂದಕೀಶೋರ್ ರೆಡ್ಡಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಟೆಲಿಮನಸ್- ಸಹಾಯವಾಣಿ ಕುರಿತ ಭಿತ್ತಿಪತ್ರಗಳನ್ನು ಗಣ್ಯರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಬಿ.ಐ.ಟಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಡವಲ್ಲಿ ಬಸವರಾಜ್, ಬಿ.ಎಂ.ಸಿ.ಆರ್.ಸಿ ಯ ಮನರೋಗ ತಜ್ಞ ಡಾ. ಕೊಟ್ರೇಶ್ ಸೇರಿದಂತೆ ಬಿಐಟಿಎಂ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ