-ಶ್ರೀಸೀತಾ ರಾಘವ ಬ್ಯಾಂಕಿನ ಅಧ್ಯಕ್ಷ ಹಂಜಿ ಶಿವಸ್ವಾಮಿ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಭೆ
ಕನ್ನಡಪ್ರಭ ವಾರ್ತೆ, ಕಡೂರು.
ದೇಶದ ಇಂದಿನ ಆರ್ಥಿಕ ಸ್ಥಿತಿಯಲ್ಲಿ ರಾಜ್ಯ ಮತ್ತು ದೇಶದ ಆರ್ಥಿಕತೆ ಬಹಳಷ್ಟು ಕುಸಿಯುತ್ತಿದ್ದು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಶೆಡ್ಯೂಲ್ ಬ್ಯಾಂಕ್‍ಗಳಲ್ಲಿ ಹಣವೇ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಗ್ರಾಹಕರ ನಂಬಿಕೆ ಬಹುಮುಖ್ಯ ಎಂದು ಶ್ರೀಸೀತಾ ರಾಘವ ಬ್ಯಾಂಕಿನ ಅಧ್ಯಕ್ಷ ಹಂಜಿ ಶಿವಸ್ವಾಮಿ ಹೇಳಿದರು.ಅವರು ಪಟ್ಟಣದ ಕೆ.ವಿ.ಕಾಲೋನಿಯಲ್ಲಿರುವ ಶ್ರೀ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ ಶಾಖೆಯ ಆವರಣದಲ್ಲಿ ಆಯೋಜಿಸಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮೌಲ್ಯಗಳು ಮರೆಯಾಗುವ ಮೂಲಕ ಭ್ರಷ್ಟಾಚಾರ ಹೆಚ್ಚುತ್ತಿರುವುದು ಮುಂದಿನ ಆರ್ಥಿಕ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಬೇಕಿದೆ. ಠೇವಣಿ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ಠೇವಣಿಗಾಗಿ ಸಹಕಾರ ಬ್ಯಾಂಕ್‍ಗಳ ಮೊರೆ ಹೋಗುತ್ತಿವೆ. ಈ ಹಿನ್ನೆಲೆ ದೇಶದ ಆರ್ಥಿಕತೆ ಎತ್ತ ಸಾಗುತ್ತಿದೆ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದ್ದು. ಇದನ್ನು ಕೇಂದ್ರ ಅರ್ಥ ಸಚಿವರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿಗಳು ದೇಶದ ಆರ್ಥಿಕತೆಯ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸಹಕಾರ ಸಂಘಗಳಲ್ಲಿ ಉದ್ದೇಶ ಪೂರಿತ ಸಾಲಗಾರರು ಹೆಚ್ಚುತ್ತಿದ್ದು, ಶಾಖೆಯನ್ನು ಇಂತಹವರಿಂದ ನಡೆಸುವುದೇ ಕಷ್ಟಕರ. ಸಾಲ ಪಡೆದು ನ್ಯಾಯಾಲಯದ ಮೊರೆ ಹೋಗುವುದು ಇವರ ಉದ್ದೇಶ. ಕಾನೂನಿನ ರೀತಿ ಹೋರಾಟ ಮಾಡಿ ಅವರಿಂದ ಸಾಲ ವಸೂಲಾತಿ ಮಾಡುವಲ್ಲಿ ಸೀತಾರಾಘವ ಬ್ಯಾಂಕ್ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.
ಬ್ಯಾಂಕ್ ಉಪಾಧ್ಯಕ್ಷ ಆದಿರಾಜಯ್ಯ,ಪ್ರಧಾನ ವ್ಯವಸ್ಥಾಪಕ ಎನ್.ಮಂಜುನಾಥ್ ಬ್ಯಾಂಕ್‍ನ ಬೆಳವಣಿಗೆಯ ಬಗ್ಗೆ ಮಾತನಾಡಿ, ಗ್ರಾಹಕರ ಸಲಹೆ ಸೂಚನೆಗಳನ್ನು ಪಡೆದು, ಬ್ಯಾಂಕಿನ ಅಂಕಿ ಅಂಶಗಳ ಪ್ರಗತಿಯನ್ನು ಮಂಜುನಾಥ್ ವಿವರಿಸಿದರು. ಕಡೂರು ಶಾಖೆಯ ವ್ಯವಸ್ಥಾಪಕ ಚೇತನ್ ಜಿ.ಪಿ. ಮತ್ತು ಸಿಬ್ಬಂದಿ ವರ್ಗದವರು, ಗ್ರಾಹಕರು ಹಾಜರಿದ್ದರು.
ಈ ಭಾರಿ ನಮ್ಮ ಬ್ಯಾಂಕಿಗೆ 118 ಕೋಟಿ ರು. ಠೇವಣಿ ಸಂಗ್ರಹದ ಗುರಿ ಹೊಂದಲಾಗಿದೆ. ಇದಕ್ಕೆ ನಮ್ಮೆಲ್ಲ ಗ್ರಾಹಕರ ಸಹಕಾರ ಬೇಕಾಗಿದೆ ಎಂದು ಮನವಿ ಮಾಡಿದ ಹಂಜಿ ಶಿವಸ್ವಾಮಿ, ನಮ್ಮ ನಾಲ್ಕು ಶಾಖೆಗಳಿಂದ 117 ಕೋಟಿ ರು. ಸಾಲವನ್ನು ಗ್ರಾಹಕರಿಗೆ ನೀಡಿದ್ದು, 165 ಕೋಟಿ ರು. ಠೇವಣಿ ಸಂಗ್ರಹವಾಗಿದೆ, ಒಟ್ಟಾರೆ 285 ಕೋಟಿ ವ್ಯವಹಾರ ನಡೆಯುತ್ತಿದೆ. ಕಡೂರು ಶಾಖೆಯಲ್ಲಿ 29,63 ಕೋಟಿ ರು. ಠೇವಣಿ ಸಂಗ್ರಹವಾಗಿದೆ. 35 ಕೋಟಿ ರು. ಸಾಲ ವಿತರಿಸಲಾಗಿದೆ ಎಂದರು.
ಫೋಟೋ: 16ಕೆಕೆಡಿಯು1